Online News in ಕನ್ನಡ

ಕಡಗ ನೆಪದಲ್ಲಿ ಕೊಳಕು ರಾಜಕೀಯ : ಸುಪಾರಿ ಕಿಲ್ಲರ್‌ಗಳಾದ ಸಾಮಾಜಿಕ ಮಾಧ್ಯಮ

ಮೈಸೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಕಡಗ ತೊಡಿಸಿದ ಪ್ರಸಂಗವನ್ನೇ ಮುಂದಿಟ್ಟುಕೊಂಡು ಕೆಲವು ಕೊಳಕು ಮನಸ್ಥಿತಿಗಳು ನನ್ನ ಕ್ಷೇತ್ರದಲ್ಲಿ ಒಕ್ಕಲಿಗರು ಮತ್ತು ಕುರುಬರ ನಡುವೆ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇದರ ಸುಪಾರಿ ಪಡೆದಿರುವ ಕೆಲ ಸಾಮಾಜಿಕ ಮಾಧ್ಯಮಗಳು ನನ್ನ ವೈಯಕ್ತಿಕ ತೇಜೋವಧೆಯಲ್ಲಿ ತೊಡಗಿವೆ ಎಂದು ಹುಣಸೂರಿನ ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್‌ ಆರೋಪಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಮತ್ತು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಪ್ರೀತಿ ಪೂರ್ವಕವಾಗಿ ಚಿನ್ನ ಲೇಪಿತ ಬೆಳ್ಳಿ ಕಗಡವನ್ನು ತೊಡಿಸಿ ಶುಭಕೋರಿದ್ದೇನೆ ಎಂದು ಸ್ಪಷ್ಟಪಡಿಸಿದರು.

ʻ ಸಿಎಂ ಡಿ.ಕೆ.ಶಿವಕುಮಾರ್‌, ಡಿಸಿಎಂ ಡಾ. ಜಿ. ಪರಮೇಶ್ವರ್‌, ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಚಿನ್ನ ಲೇಪಿತ ಬೆಳ್ಳಿ ಕಡಗವನ್ನು ತೊಡಿಸಿದ್ದೇನೆ. ಆದರೆ, ಕೆಲ ಸಾಮಾಜಿಕ ಮಾಧ್ಯಮದಲ್ಲಿ ಸಿಎಂ ಚಿನ್ನ, ಸಚಿವರಿಗೆ ಬೆಳ್ಳಿ ಎಂದು ಬಿಂಬಿಸಿ ಒಂದು ಸಮುದಾಯದ ಭಾವನೆಕ್ಕೆ ಧಕ್ಕೆ ತರಲಾಗಿದೆ. ಕೊಡುಗೆ ಕಟ್ಟಿರುವುದನ್ನೇ ಮುಂದಿಟ್ಟುಕೊಂಡು ಕೊಳಕು ರಾಜಕೀಯ ಮಾಡುತ್ತಿದ್ದಾರೆ. ಸುಪಾರಿ ಕಿಲ್ಲರ್‌ಗಳಂತೆ ವರ್ತಿಸುತ್ತಿರುವ ಕೆಲ ಸಾಮಾಜಿಕ ಮಾಧ್ಯಮಗಳ ವಿರುದ್ಧ ಕಾನೂನು ಮೂಲಕ ಉತ್ತರ ಕೊಡುತ್ತೇನೆʼ

ಆದರೆ, ಹುಣಸೂರು ಕ್ಷೇತ್ರದ ಕೆಲ ವ್ಯಕ್ತಿಗಳು ನಾನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಚಿನ್ನದ ಕಗಡ ಮತ್ತು ಸಚಿವ ಡಾ. ಯತೀಂದ್ರ ಅವರಿಗೆ ಬೆಳ್ಳಿಯ ಕಡಗ ತೊಡಿಸಿ ತಾರತಮ್ಯ ಮತ್ತು ಅವಮಾನ ಮಾಡಿದ್ದೇನೆ ಎಂಬಂತೆ ಬಿಂಬಿಸಿ ಒಂದು ವರ್ಗದ ಜನರ ಭಾವನೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಇದು ಅವರ ಕೊಳಕು ಮನಸ್ಥಿತಿಯನ್ನು ತೋರುತ್ತದೆ. ಈ ಸಂಬಂಧ ಕುರುಬ ಸಮುದಾಯದ ರಾಜ್ಯ ಮತ್ತು ಸ್ಥಳೀಯ ನಾಯಕರ ಸಲಹೆ ಮೇರೆಗೆ ಮಾಧ್ಯಮಗೋಷ್ಠಿಯಲ್ಲಿ ಕಡಗ ಗೊಂದಲದ ಬಗ್ಗೆ ಸ್ಪಷ್ಟೀಕರಣ ನೀಡುತ್ತಿದ್ದೇನೆ ಎಂದು ತಿಳಿಸಿದರು.

ಮೈಸೂರಿನಲ್ಲಿ ಕೆಲ ಸಾಮಾಜಿಕ ಮಾಧ್ಯಮಗಳು ನನ್ನ ವಿರುದ್ಧ ಸುಪಾರಿ ಪಡೆದು ಕಡಗ ಪ್ರಸಂಗವನ್ನು ಮುಂದಿಟ್ಟುಕೊಂಡು ಜಾತಿ ಜಾತಿಗಳ ನಡುವೆ ಎತ್ತಿಕಟ್ಟುವ ಕೆಲಸ ಮಾಡುತ್ತಿವೆ. ಸುಪಾರಿ ಕಿಲ್ಲರ್‌ಗಳಂತೆ ವರ್ತಿಸುತ್ತಿರುವ ಕೆಲ ಸಾಮಾಜಿಕ ಮಾಧ್ಯಮಗಳು ನನ್ನ ತೇಜೋವಧೆಯಲ್ಲಿ ತೊಡಗಿದ್ದು, ಇದರ ವಿರುದ್ದ ಕಾನೂನಾತ್ಮಕ ಹೋರಾಟ ನಡೆಸುತ್ತೇನೆ. ಇಂತಹ ಕಿತೂರಿಗಳಿಗೆ ನನ್ನ ವಜ್ರದಂತ್ತಿರುವ ಕಾರ್ಯಕರ್ತರು ತಲೆ ಕೆಡಿಸಿಕೊಳ್ಳುವುದಿಲ್ಲ. ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ಚುನಾವಣೆಯಲ್ಲಿ ನಾನು ಹುಣಸೂರು ಕ್ಷೇತ್ರದಿಂದ ಮತ್ತೆ ಸ್ಪರ್ಧೆ ಮಾಡುತ್ತೇನೆ. ನನ್ನ 15 ವರ್ಷಗಳ ಸೇವೆಯನ್ನು ಕ್ಷೇತ್ರದ ಜನರು ಮರೆತಿಲ್ಲ. ನನ್ನ ಸೇವೆ ಅಗತ್ಯವಿದ್ದರೆ ಅವರು ನನ್ನನ್ನು ಗೆಲ್ಲಿಸಿಕೊಳ್ಳುತ್ತಾರೆ. ನಾನು ಈವರೆಗೆ ಮಾಡಿರುವ ಜನಪರ ಕೆಲಸಗಳು, ವಿದ್ಯಾರ್ಥಿಗಳಿಗೆ ಮಾಡಿರುವ ಸಹಾಯ ಎಲ್ಲರಿಗೂ ಗೊತ್ತಿದೆ. ಚಿನ್ನ, ಬೆಳ್ಳಿ ಉಡುಗೆರೆ ಕೊಡುವುದು ನನಗೇನು ಹೊಸದಲ್ಲ. ಆದರೆ, ನನ್ನ ಒಳ್ಳೆಯ ಕೆಲಸಗಳನ್ನು ಸಹಿಸದ ವಿರೋಧಿಗಳು ಸಣ್ಣ-ಸಣ್ಣ ವಿಷಯಗಳಲ್ಲಿ ಕೆಟ್ಟ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು.

 

Call Now Button