Online News in ಕನ್ನಡ

ವಿಧಾನ ಪರಿಷತ್‌ ಚುನಾವಣೆ: ಕಾಂಗ್ರೆಸ್‌ಗೆ ಪಂಚಾಮೃತ, ಬಿಜೆಪಿ-ಜೆಡಿಎಸ್‌ಗೆ ಅಘಾತ

ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ಆಡಳಿತ ರೂಢ ಕಾಂಗ್ರೆಸ್‌ನ ಎಲ್ಲ ಐದು ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ. ಆದರೆ, ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಅಡ್ಡ ಮತದಾನವಾಗಿದ್ದು ಈ ಪಕ್ಷಗಳು ಅಘಾತ ಅನುಭವಿಸಿದ್ದಾರೆ. ಬಹುಮುಖ್ಯವಾಗಿ ಕಾಂಗ್ರೆಸ್‌ನ ಐದನೇ ಅಭ್ಯರ್ಥಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಆಪ್ತ ವಿನಯ್‌ ಕಾರ್ತಿಕ್‌ ಅವರಿಗೆ ನಿರೀಕ್ಷೆಗೂ ಮೀರಿ ಮತಗಳು ಬಂದಿದ್ದು, ಭರ್ಜರಿ ಗೆಲುವು ದಾಖಲಿಸಿದ್ದಾರೆ. ಜೆಡಿಎಸ್‌ನ ಅಭ್ಯರ್ಥಿ ಜೆಡಿಎಸ್‌ನ ಅಭ್ಯರ್ಥಿ ಗೋವಿಂದರಾಜು ಅವರಿಗೆ ಕೇವಲ ೧೪ ಮತಗಳು ಬಂದಿದೆ.
ಬಿಜೆಪಿಯ ಎರಡನೇ ಅಭ್ಯರ್ಥಿ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಆಪ್ತರಾದ ಆರ್.ರಘು (ಕೌಟಿಲ್ಯ) ಅವರು ೨೯ ಮತಗಳನ್ನು ಪಡೆದು ಗೆಲುವು ದಾಖಲಿಸಿದ್ದಾರೆ. ಬಿಜೆಪಿಯ ಮೊದಲ ಅಭ್ಯರ್ಥಿ ಲಿಂಗರಾಜು ಅವರಿಗೆ ೨೭ ಮತಗಳು ಬಂದಿದ್ದು ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದಾರೆ. ಈನಡುವೆ, ಬಿಜೆಪಿಯಿಂದ ನಾಲ್ವರು ಶಾಸಕರು ಕ್ರಾಸ್‌ ಓಟಿಂಗ್‌ ಮಾಡಿರುವುದು ಅಚ್ಚರಿ ಮೂಡಿಸಿದ್ದು, ಜೆಡಿಎಸ್‌ನಲ್ಲಿ ಆರು ಶಾಸಕರು ಅಡ್ಡ ಮತದಾನ ಮಾಡಿ ಪಕ್ಷಕ್ಕೆ ಅಘಾತವನ್ನುಂಟು ಮಾಡಿದ್ದಾರೆ.
ಆಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಚುನಾವಣಾ ತಂತ್ರಕ್ಕೆ ಮೊದಲ ಯಶಸ್ಸು ದೊರಕಿದ್ದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್.‌ ಅಶೋಕ್‌ ಅವರಿಗೆ ತೀವ್ರ ಮುಖಭಂಗ ಉಂಟಾಗಿದೆ.
ಒಟ್ಟು ಏಳು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌, ತಿಪ್ಪಣ್ಣಪ್ಪ ಕಮಕನೂರು, ಪಿ.ವಿ. ಮೋಹನ್‌, ಶಿವಣ್ಣ ಮಳವಳ್ಳಿ, ವಿನಯ್‌ ಕಾರ್ತಿಕ್‌ ಹಾಗೂ ಬಿಜೆಪಿಯ ಆರ್.ರಘು (ಕೌಟಿಲ್ಯ), ಲಿಂಗರಾಜ್‌ ಪಾಟೀಲ್‌ ಅವರು ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಬೆಳಗ್ಗೆ ೮ ಗಂಟೆಗೆ ಆರಂಭಗೊಂಡ ಮತದಾನ ಸಂಜೆ ೪ಕ್ಕೆ ಅಂತ್ಯಗೊಂಡಿತು. ಸಂಜೆ ಐದು ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ನಡೆಯಿತು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಪಕ್ಷ ನಾಯಕ ಆರ್.‌ ಅಶೋಕ್‌ ಸೇರಿದಂತೆ ಎಲ್ಲ ಶಾಸಕರು ಮತದಾನದಲ್ಲಿ ಪಾಲ್ಗೊಂಡರು. ಚಲಾವಣೆಗೊಂಡ ೨೨೨ ಮತಗಳಲ್ಲಿ ಒಂದು ಮತ ಅಸಿಂಧು ಎಂದು ಘೋಷಿಸಲಾಗಿದೆ.

Call Now Button