ಜಿಎಸ್‌ಎಸ್ ಮತ್ತು ಮಾಧ್ಯಮ ಮುಖ್ಯಸ್ಥರೊಂದಿಗೆ ಸಭೆ
ಮೈಸೂರು: ಜಿಲ್ಲೆಯ ಪತ್ರಕರ್ತರು ಮತ್ತು ಕುಟುಂಬದ ಸದಸ್ಯರ ಆರೋಗ್ಯ ರಕ್ಷಣೆಗಾಗಿ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ದೃಷ್ಟಿಯಿಂದ ಮೈಸೂರು ಜಿಲ್ಲಾ ಪತ್ರಕತರ ಸಂಘ ಮತ್ತು ಜಿಎಸ್‌ಎಸ್ ಸಮ್ಮೂಹ ಸಂಸ್ಥೆಗಳ ಸಹಯೋಗದಲ್ಲಿ ಎಲ್ಲ ಮಾಧ್ಯಮ ಮುಖ್ಯಸ್ಥರ ಸಭೆ ನಡೆಸಲಾಯಿತು.
ಈನಡುವೆ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಆರೋಗ್ಯ ನಿಧಿಗೆ ರಾಜ್ಯ ಧರ್ಮ ಪತ್ರಿಕೆ ಮುಖ್ಯಸ್ಥರಾದ ಮಹಿ ಮಹೇಶ್, ಹಲೋ ಮೈಸೂರು ದಿನಪತ್ರಿಕೆಯ ಸಂಪಾದಕರಾದ ಟಿ. ಗುರುರಾಜ್ ಮತ್ತು ಜಿಎಸ್‌ಎಸ್ ಸಂಸ್ಥೆಯ ಮುಖ್ಯಸ್ಥರಾದ ಶ್ರೀಹರಿ ದ್ವಾರಕನಾಥ್ ಅವರು ತಲಾ ಒಂದು ಲಕ್ಷ ರೂ.ಗಳ ದೇಣಿಗೆ ನೀಡುವುದಾಗಿ ಪ್ರಕಟಿಸಿದರು.

ಇತ್ತೀಚೆಗೆ ಪತ್ರಕರ್ತರ ಅಕಾಲಿ ಮರಣ, ಅಪಘಾತ ಮತ್ತು ಅನಾರೋಗ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸರಕಾರದ ಯೋಜನೆಗಳು ಎಲ್ಲರಿಗೂ ತಲುಪಲು ಸಾಧ್ಯವಿಲ್ಲವಾದ್ದರಿಂದ ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ರಿಯಾಯ್ತಿ ದರದಲ್ಲಿ ಆರೋಗ್ಯ ಸೇವೆ ಮತ್ತು ಗುಂಪು ಆರೋಗ್ಯ ವಿಮೆ ಜಾರಿ ಕುರಿತು ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಶ್ರೀಹರಿ ದ್ವಾರಕನಾಥ್, ಯಾವುದೇ ಪತ್ರಕರ್ತರು ಮತ್ತು ಕುಟುಂಬ ಸದಸ್ಯರಿಗೆ ಆರೋಗ್ಯದ ಸೇವೆ ಅಗತ್ಯ ಬಿದ್ದರೆ ಅವರಿಗೆ ತಕ್ಷಣ ಚಿಕಿತ್ಸೆ ದೊರಕಬೇಕು, ಅದೂ ರಿಯಾಯ್ತಿ ದರದಲ್ಲಿ ಸಿಗಬೇಕು. ಇದಕ್ಕಾಗಿ ಮೈಸೂರಿನ ಪ್ರಮುಖ ಖಾಸಗಿ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಆರೋಗ್ಯ ಸೇವೆ ಕಲ್ಪಿಸು ಯೋಜನೆ ರೂಪಿಸುವ ಕುರಿತು ಮಾಹಿತಿ ನೀಡಿದರು.

ಹಿರಿಯ ಪತ್ರಕರ್ತರಾದ ಟಿ. ಗುರುರಾಜ್ ಮಾತನಾಡಿ, ಈ ಹಿಂದೆ ರಮೇಶ್ ಕುಮಾರ್ ಅವರು ಆರೋಗ್ಯ ಸಚಿವರಾಗಿದ್ದಾಗ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚದ ದರ ಪಟ್ಟಿಯನ್ನು ಪ್ರಕಟಿಸಲಾಗುತ್ತಿತ್ತು. ಆದರೆ, ಈಗ ಅದನ್ನು ಮರೆಮಾಚಲಾಗುತ್ತಿದೆ. ಯಾವ ಯಾವ ಚಿಕಿತ್ಸೆ ಮತ್ತು ಔಷಧಿ, ಕೊಠಡಿಗಳಿಗೆ ಎಷ್ಟೆಷ್ಟು ಹಣ ಎಂದು ಬರುವ ರೋಗಿಗಳಿಗೆ ತಿಳಿಯಬೇಕು. ಈ ಬಗ್ಗೆ ಸರಕಾರದ ಗಮನಕ್ಕೆ ತರುವ ಕೆಲಸವಾಗಬೇಕೆಂದು ತಿಳಿಸಿದರು.
ಪ್ರಜಾವಾಣಿ ಪತ್ರಿಕೆಯ ಬ್ಯೂರೋ ಮುಖ್ಯಸ್ಥರಾದ ನರಸಿಂಹಮೂರ್ತಿ ಮಾತನಾಡಿ ಖಾಸಗಿ ಆಸ್ಪತ್ರೆಗಳಲ್ಲಿನ ನಿಗೂಢತೆಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ, ಸರಕಾರಿ ಆಸ್ಪತ್ರೆಗಳು ಮತ್ತು ಸಣ್ಣ ಸಣ್ಣ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು. ಹಾಗೆಯೇ ವಿಜಯ ಕರ್ನಾಟಕ ಪತ್ರಿಕೆಯ ಬ್ಯೂರೋ ಮುಖ್ಯಸ್ಥರಾದ ರಮೇಶ್ ಉತ್ತಪ್ಪ, ರಾಜ್ಯ ಧರ್ಮ ಪತ್ರಿಕೆಯ ಮುಖ್ಯಸ್ಥರಾದ ಮಹಿ ಮಹೇಶ್, ಹಿರಿಯ ಪತ್ರಕರ್ತರಾದ ದಯಾಶಂಕರ ಮೈಲಿ, ಟಿವಿ 9 ವಾಹಿನಿ ಜಿಲ್ಲಾ ಪ್ರತಿನಿಧಿ ರಾಮ್, ಪಬ್ಲಿಕ್ ಟಿವಿ ಜಿಲ್ಲಾ ಪ್ರತಿನಿಧಿ ಕೆಪಿ ನಾಗರಾಜ್ ಸೇರಿದಂತೆ ಅನೇಕ ಹಿರಿಯ ಪತ್ರಕರ್ತರು ಸಲಹೆಗಳನ್ನು ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಘದ ಅಧ್ಯಕ್ಷ ಕೆ.ದೀಪಕ್, ಪತ್ರಕರ್ತರು ಮತ್ತು ಅವರ ಕುಟುಂಬ ಸದಸ್ಯರ ಆರೋಗ್ಯ ಸೇವೆ ಒದಗಿಸಲು ಪ್ರಾಥಮಿಕವಾಗಿ ಸರ್ವೆ ಕಾರ್ಯ ನಡೆಸಲಾಗುವುದು. ಖಾಸಗಿ ಆಸ್ಪತ್ರೆ ಮತ್ತು ಸರಕಾರಿ ಆಸ್ಪತ್ರೆಗಳನ್ನು ವಿಶ್ವಾಸಕ್ಕೆ ಪಡೆದು ಆರೋಗ್ಯ ಸೇವೆ ಕಲ್ಪಿಸಲು ಯೋಜನೆ ರೂಪಿಸುವುದರ ಜೊತೆಗೆ ಈಗಾಗಲ ಪತ್ರಕರ್ತರಿಂದ ಪತ್ರಕರ್ತರಿಗಾಗಿ ನೆರವಾಗಲು ಆರಂಭಿಸಿರುವ ʻ ಆಪ್ತ ಮಿತ್ರʼ ಆರೋಗ್ಯ ರಕ್ಷಣೆ ನಿಧಿಯನ್ನು ಶೀಘ್ರದಲ್ಲಿ ಚಾಲ್ತಿ ಮಾಡಲಾಗುವುದು ಎಂದು ತಿಳಿಸಿದರು.

ಶ್ರದ್ಧಾಂತಲಿ ಸಭೆ:
ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತರಾದ ವಾರದ ಮಿತ್ರ ಪತ್ರಿಕೆಯ ಶಿವಶಂಕರಸ್ವಾಮಿ, ರಾಜಕುಮಾರ್ ಬಾಹುಸಾರ್ ಮತ್ತು ಯುವ ಪತ್ರಕರ್ತ ಸೂರಜ್ ಅವರಿಗೆ ಶ್ರದ್ದಾಂಜಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಪತ್ರಕರ್ತರು ಮಾತನಾಡಿ ಶಿವಶಂಕರ್‌ಸ್ವಾಮಿ, ರಾಜಕುಮಾರ್ ಬಾಹುಸಾರ್ ಮತ್ತು ಸೂರಜ್ ಅವರ ಪತ್ರಿಕೋದ್ಯಮದ ಸೇವೆಯನ್ನು ಸ್ಮರಿಸಿದರು.

ಪತ್ರಕರ್ತರಿಗೆ ಕೃತಜ್ಞತೆ:
ಇತ್ತೀಚೆಗೆ ನಡೆದ ಮೈಸೂರು ವಿವಿ ಮತ್ತು ಜಿಎಸ್‌ಎಸ್ ಸಮ್ಮೂಹ ಸಂಸ್ಥೆಗಳು ಸೇರಿದಂತೆ ಮೈಸೂರಿನ ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಸಹಯೋಗದಲ್ಲಿ ನಡೆದ ʻಫಿಟ್ ಮೈಸೂರ್ ʼ ವಾಕ್ ಥಾನ್ ಯಶಸ್ವಿಗೆ ಪತ್ರಿಕಾ ಪ್ರತಿನಿಧಿಗಳಿಗೆ ನೆನಪಿನ ಕಾಣಿಕೆ ನೀಡಿ ಕೃತಜ್ಞತೆ ಸಲ್ಲಿಸಲಾಯಿತು.
ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ಮಾಜಿ ಅಧ್ಯಕ್ಷ ಸಿ.ಕೆ.ಮಹೇಂದ್ರ, ಗ್ರಾಮಾಂತರ ಉಪಾಧ್ಯಕ್ಷ ಹನಗೋಡು ವೆಂಕಟಪ್ಪ, ಕಾರ್ಯದರ್ಶಿಗಳಾದ ಕೃಷ್ಣೋಜಿ ರಾವ್, ದಾರಾ ಮಹೇಶ್, ಖಜಾಂಚಿ ಎನ್. ಸುರೇಶ್, ಕಾರ್ಯಕಾರಿಣಿ ಸದಸ್ಯರಾದ ಕವಿತಾ, ರಾಜು ಕಾರ್ಯ, ಶಿವಣ್ಣ, ರಾಜಣ್ಣ, ಪುನಿತ್, ಹುಲ್ಲಹಳ್ಳಿ ಮೋಹನ್, ವಿದ್ಯುನ್ಮಾನ ಮಾಧ್ಯಮದ ಪ್ರತಿನಿಧಿಗಳಾದ ಜಯಂತ್, ರಾಘವೇಂದ್ರಸ್ವಾಮಿ, ಮಧುಸೂದನ್, ಆನಂದ್, ರಾಹುಲ್, ಹಿರಿಯ ಛಾಯಾಗ್ರಾಹಕ ಪ್ರಗತಿ ಗೋಪಾಲಕೃಷ್ಣ, ಡೆಕ್ಕನ್ ಹೆರಾಲ್ಡ್ ಮುಖ್ಯಸ್ಥರಾದ ಸತೀಶ್, ಪತ್ರಕರ್ತರಾದ ಕೆ.ಎನ್. ನಾಗಸುಂದರ್, ಅಫ್ಸರ್ ಪಾಷ, ನಜೀರ್, ದಿನತಂತಿ ಕಿರಣ್, ಸತೀಶ್ ಕುಮಾರ್, ಸುನೀಲ್, ಬಸವರಾಜ್, ಎಂ.ಟಿ. ಮಹದೇವ್ ಸೇರಿದಂತೆ ಎಲ್ಲ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು.


