ಪಿರಿಯಾಪಟ್ಟಣ: ಶಿಕ್ಷಣದಲ್ಲಿ ಸಂತೋಷವಿಲ್ಲ, ಶಿಕ್ಷೆ ಇದೆ. ಆದ್ದರಿಂದ ಮಕ್ಕಳ ಮನೋವಿಕಾಸಕ್ಕೆ ಪೂರಕವಾದ ಹಾಗೂ ಸಂತಸಕರ ವಾತಾವರಣದಲ್ಲಿ ಕಲಿಕೆಯ ಅಗತ್ಯವಿದೆ ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ತಿಳಿಸಿದರು. ತಾಲ್ಲೂಕಿನ ಗಿರಗೂರು ಗ್ರಾಮದ ಮಿಳಿಂದ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಿಳಿಂದ ಶಾಲಾ ವಾರ್ಷಿಕೋತ್ಸವ ಹಾಗೂ ಮಿಳಿಂದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಶಿಕ್ಷಣವು ವಿದ್ಯಾರ್ಥಿಗಳ ಪಾಲಿಗೆ ಸಂತಸದಾಯಕವಾದ ಅರ್ಥಪೂರ್ಣ ಕಲಿಕೆಯಾಗುವ ಬದಲು ಕಂಠಪಾಠ ಒಪ್ಪಿಸುವ ಶಿಕ್ಷೆಯಾಗಿದೆ ಎಂಬುದು ಸಂಶೋಧನೆಗಳಿಂದ ದೃಢಪಡಿಸಿವೆ. ಆದ್ದರಿಂದ ಮಕ್ಕಳ ಭವಿಷ್ಯ ಉಜ್ವಲವಾಗಬೇಕಾದರೆ ಸಮಾಜವಾದಿ ಚಿಂತಕ ರಾಮಮನೋಹರ ಲೋಹಿಯಾ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಚಿಂತನೆಗಳನ್ನು ಒಳಗೊಂಡ ಶಿಕ್ಷಣವನ್ನು ನೀಡಬೇಕು. ಮಿಳಿಂದ ವಿದ್ಯಾ ಸಂಸ್ಥೆ ಸಮಾಜವಾದಿ ಲೋಹಿಯಾ ಹಾಗೂ ಗಾಂಧಿವಾದ ಸಿದ್ದಾಂತದ ತಳಹದಿಯ ಮೇಲೆ ನಡೆಯುತ್ತಿದೆ ಎಂದು ತಿಳಿಸಿದರು.
ಈ ಸಂಸ್ಥೆಯ ಮೇಲೆ ಅನೇಕರು ಕೆಂಗಣ್ಣು ಬೀರಿದ್ದರೂ ಪ್ರೊ.ಗೋವಿಂಯ್ಯನವರು, ಅನೇಕ ಅಡೆತಡೆಗಳನ್ನು ದಾಟಿ ಈ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಕೊಲ್ಲುವವರಿದ್ದ ಮೇಲೆ ಕಾಯುವವರು ಇದ್ದೇ ಇರುತ್ತಾರೆ. ಮುಂದಿನ ದಿನಗಳಲ್ಲಿ ಸಮಾಜವಾದಿ ಚಿಂತನೆಯುಳ್ಳ ಎಲ್ಲರೂ ನಿಮ್ಮ ಬೆಂಬಲಕ್ಕೆ ನಿಲ್ಲುತ್ತವೆ ಎಂದರು.
ಮೈಸೂರು ವಿಶ್ವವಿದ್ಯಾಲಯ ಸಮಾಜ ಕಾರ್ಯ ವಿಭಾಗದ ವಿಶ್ರಾಂತ ಮುಖ್ಯಸ್ಥ ಪ್ರೊ.ಸಿದ್ದೇಗೌಡ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆ ಮಾಡಲು ವಿಶೇಷವಾದ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ವಿದ್ಯಾರ್ಥಿಯ ವ್ಯಕ್ತಿತ್ವ ರೂಪಿತವಾಗಲಿದೆ.
ವಿದ್ಯೆ ಮತ್ತು ಸಂಸ್ಕಾರ ಬದುಕಿನ ಎರಡು ಕಣ್ಣುಗಳು, ವ್ಯಕ್ತಿತ್ವ ನಿರ್ಮಾಣದಲ್ಲಿ ನಮಗೆ ನಾವೇ ರೂವಾರಿಗಳಾಗಬೇಕು. ವಿದ್ಯಾರ್ಥಿಗಳಲ್ಲಿ ಜ್ಞಾನದ ಹಸಿವಿರಬೇಕು. ಇಂದಿನ ವಿದ್ಯಾರ್ಥಿ ಸಮುದಾಯಕ್ಕೆ ಶಾಂತಿ, ಸಹನೆ ತಾಳ್ಮೆ ಅತ್ಯಂತ ಅವಶ್ಯಕವಾದ ಮಾನದಂಡಗಳಾಗಿದ್ದು, ವಿದ್ಯಾರ್ಥಿಗಳು ಹಿರಿಯರನ್ನು ಗುರಗಳನ್ನು ಗೌರವಿಸುವುದರ ಜತೆಗೆ ವಿದ್ಯಾರ್ಥಿಗಳು ಕೀಳರಿಮೆಯಿಂದ ಹೊರಬಂದಾಗ ಮಾತ್ರ ಸನ್ಮಾನಗಳಿಗೆ ಪಾತ್ರರಾಗಲು ಸಾಧ್ಯ ಹಾಗೆಯೇ ಪೋಷಕರು ಮಕ್ಕಳ ಪ್ರೇರಣಾ ಶಕ್ತಿಯಾಗಿ ಕೆಲಸ ಮಾಡಬೇಕು ಎಂದರು.
ಆದಿವಾಸಿ ಬುಡಕಟ್ಟು ಕೃಷಿಕ ಸಮಾಜದ ಅಧ್ಯಕ್ಷ ಜಯಪ್ಪ ಮಾತನಾಡಿ ಹಿಂದುಳಿದ ಮತ್ತು ಬುಡಕಟ್ಟು ಸಮುದಾಯದ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಪೋಷಕರು ಎಚ್ಚರಿಕೆ ವಹಿಸಬೇಕು ಆಗ ಮಾತ್ರ ಬುಡಕಟ್ಟು ಸಮುದಾಯ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಪ್ರೊ.ಗೋವಿಂದಯ್ಯ, ಆದಿವಾಸಿ ಬುಡಕಟ್ಟು ಸಮುದಾಯದ ಹೋರಾಟಗಾರ ಎಸ್.ಶ್ರೀಕಾಂತ್, ಗ್ರಾಪಂ ಅಧ್ಯಕ್ಷೆ ಗೀತಾ ಗುರುಬಸಪ್ಪ, ಗ್ರಾಪಂ ಸದಸ್ಯ ಸಲೀಂ, ನಿವೃತ್ತ ಶಿಕ್ಷಕಿ ಆಶಾ, ಬಿಬೇಟಿಯನ್ ಸಮುದಾಯದ ಹೋರಾಟಗಾರ್ತಿ ತೇಂಜೀನ್ ಸೊಯಾಂಗ್, ಶಾಲಾ ಮುಖ್ಯೋಪಾಧ್ಯಾಯರಾದ ಝಾನ್ಸಿ , ಗೀತಾ ಎಂ.ಆರ್., , ಶಿಕ್ಷಕ ಸುರೇಶ್ ಕುಮಾರ್,ನಿಂಗರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


