* ಪಿ.ಪಟ್ಟಣ ವ್ಯಾಪ್ತಿಯ ಗುಳೆದಹಳ್ಳಿ ಅರಣ್ಯ ಪ್ರದೇಶದಲ್ಲಿ ಮೃತದೇಹ ಪತ್ತೆ
* ಚಿರತೆ ದೇಹದೊಳಗೆ ಮೂರು ಗುಂಡುಗಳು ಪತ್ತೆ, ಆರೋಪಿಗಳಿಗೆ ಶೋಧ
ಮೈಸೂರು (ಹುಣಸೂರು):ಕಾಡುಗಳ್ಳರ ಗುಂಡೇಟಿಗೆ 2 ವರ್ಷದ ಹೆಣ್ಣು ಚಿರತೆಯೊಂದು ಬಲಿಯಾಗಿರುವ ಘಟನೆ ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ಪಿರಿಯಾಪಟ್ಟಣ ವ್ಯಾಪ್ತಿಯ ಕೊಪ್ಪ ಶಾಖೆ ಗುಳೆದಹಳ್ಳ ಪ್ರಾದೇಶದಲ್ಲಿ ಜರುಗಿದೆ.
ಕಾಡು ಪ್ರಾಣಿಗಳ ಬೇಟೆಗೆ ಬಂದಿರುವ ಕಾಡುಗಳ್ಳರು ನಾಡಬಂದೂಕಿನಿಂದ ಚಿರತೆಗೆ ಗುಂಡು ಹಾರಿಸಿದ್ದಾರೆ. ಈ ಘಟನೆ ಎರಡು ದಿನಗಳ ಹಿಂದೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಗುಳೆದಹಳ್ಳದಿಂದ ಎರಡು ಕಿ.ಮಿ. ದೂರದಲ್ಲಿರುವ ಟಿಬೇಟಿಯನ್ನರಿಗೆ ಸೇರಿದ ಜಮೀನಿನಲ್ಲಿ ಸೋಮವಾರ ಚಿರತೆ ಮರಿ ಪತ್ತೆಯಾಗಿದೆ. ಅರಣ್ಯ ಸಿಬ್ಬಂದಿಗಳು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ ಮೃತ ಚಿರತೆಯ ದೇಹವನ್ನು ಪರೀಕ್ಷೆ ನಡೆಸಿದಾಗ ದೇಹದೊಳಗೆ ಮೂರು ಗಂಡುಗಳು ಪತ್ತೆಯಾಗಿದೆ.
ʻಸಮಗ್ರ ತನಿಖೆಗೆ ಸಚಿವ ಆದೇಶʼ
ಗುಂಡೇಟಿನಿಂದ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿಯಾಗಿದ್ದು, ವನ್ಯಜೀವಿ ಅಂಗಾಂಗಕ್ಕಾಗಿ ಕಳ್ಳಬೇಟೆ ಇನ್ನೂ ನಡೆಯುತ್ತಿದೆ ಎಂಬುದಕ್ಕೆ ಪುಷ್ಟಿ ನೀಡುತ್ತಿದೆ ಈ ನಿಟ್ಟಿನಲ್ಲಿ ತನಿಖೆ ಚಿರತೆ ಸಾವಿಗೀಡಾಗಿರುವ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆಯವರು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಲಿಖಿತ ಸೂಚನೆ ನೀಡಿದ್ದಾರೆ. ಈ ವಲಯದಲ್ಲಿ ಗಸ್ತು ವೈಫಲ್ಯವಾಗಿದ್ದಲ್ಲಿ ಸಂಬಂಧಿತ ಗಸ್ತು ಸಿಬ್ಬಂದಿಯ ಮೇಲೆ ಶಿಸ್ತುಕ್ರಮ ಜರುಗಿಸಲು ಹಾಗೂ ಅರಣ್ಯ ಅಪರಾಧ ನಿಯಂತ್ರಣ ಕೋಶವನ್ನು ಹೆಚ್ಚು ಸಕ್ರಿಯಗೊಳಿಸಲು ಸೂಚನೆ ನೀಡಿದ್ದಾರೆ.
ವನ್ಯಜೀವಿ ಸರ್ಕಲ್ನ ಡಾ.ದರ್ಶನ್ ನೇತ್ರತ್ವದ ತಂಡ ಶವಪರೀಕ್ಷೆ ನಡೆಸಿ ಶವದ ಅಂಗಾಂಗಳ ಸ್ಯಾಂಪಲ್ ಪಡೆದಿದ್ದು, ಪ್ರಯೋಗಾಲಯದಿಂದ ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ. ಇಲಾಖೆ ಈ ಪ್ರಕರಣವನ್ನು
ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ತನಿಖೆ ನಡೆಯುತ್ತಿದ್ದು, ಆರೋಪಿಗಳ ಪತ್ತೆಗೆ ಕ್ರಮವಹಿಸಲಾಗಿದೆ. ಎಂದು ಡಿಸಿಎಫ್ ಆರ್.ಟಿ.ಕಿರುಬನಾಥನ್ ಪತ್ರಿಕೆಗೆ ತಿಳಿಸಿದ್ದಾರೆ.


