ಬೆಂಗಳೂರು:- ಆಡಳಿತರೂಢಾ ಕಾಂಗ್ರೆಸ್ ಹಾಗೂ ಪ್ರತಿಪಕ್ಷವಾದ ಬಿಜೆಪಿ ನಡುವೆ ಜಿದ್ದಾಜಿದ್ದಿಯ ಹೋರಾಟದ ಕಣವಾಗಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಮಂಗಳವಾರ ಸಂಜೆ ತೆರೆ ಬೀದಿದೆ. ಆದರೆ, ನಿಜವಾದ ಚುನಾವಣೆ ಶುರುವಾಗೋದೆ ಮತದಾನಕ್ಕೆ ಎರಡು ದಿನ ಇರುವಂತೆ ಎಂಬುವುದನ್ನು ಉಭಯ ಪಕ್ಷಗಳು ಮನಗೊಂಡಿರುವ ಹಿನ್ನಲ್ಲೆಯಲ್ಲಿ ಅಂತರಂಗ ಆಟ ಶುರುವಾಗಿದೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ ಏ.9ರಂದು ನಡೆಯಲಿದ್ದು, ಮಂಗಳವಾರ ಸಂಜೆ 6ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಿದ್ದು, ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರ ಬಿಟ್ಟು ತೆರಳುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಹಾಗಾಗಿ ಕಳೆದ ಹತ್ತು ದಿನಗಳಿಂದ ಎರಡೂ ಕ್ಷೇತ್ರಗಳಲ್ಲಿ ವಾಸ್ತವ್ಯ ಹೂಡಿ ತಮ್ಮ ಪಕ್ಷದ ಅಭ್ಯರ್ಥಿಪರ ಅಬ್ಬರದ ಪ್ರಚಾರ ನಡೆಸಿದ್ದ ಕಾಂಗ್ರೆಸ್ ಹಾಗೂ ಬಿಜೆಪಿಯ ಘಟಾನುಘಟಿ ನಾಯಕರುಗಳು ಕ್ಷೇತ್ರ ಬಿಟ್ಟು ತಮ್ಮತಮ್ಮ ಊರುಗಳಿಗೆ ಮರಳಿದರು.
ಈ ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟಿದ್ದು, ಕಾಂಗ್ರೆಸ್ ಪರವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಸೇರಿದಂತೆ ಸಚಿವ ಸಂಪುಟದ ಹಲವು ಸಚಿವರು ಹಾಗೂ ಕಾಂಗ್ರೆಸ್‍ನ ಹಲವು ಶಾಸಕರುಗಳು ಕ್ಷೇತ್ರಗಳಲ್ಲೇ ಬೀಡು ಬಿಟ್ಟು ತಮ್ಮ ಅಭ್ಯರ್ಥಿಪರ ಪ್ರಚಾರ ನಡೆಸಿದ್ದರು. ಕಾಂಗ್ರೆಸ್ ಪಕ್ಷದ ಪ್ರಚಾರಕ್ಕೆ ಸವಾಸೇರು ಎಂಬಂತೆ ಬಿಜೆಪಿ ಸಹ ಅಬ್ಬರದ ಪ್ರಚಾರ ನಡೆಸಿತ್ತು.
ಬಿಜೆಪಿ ಅಭ್ಯರ್ಥಿಪರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸದಾನಂದಗೌಡ, ಬಸವರಾಜಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರತಿಪಕ್ಷ ನಾಯಕರುಗಳಾದ ಆರ್. ಅಶೋಕ್, ಚಲವಾದಿ ನಾರಾಯಣಸ್ವಾಮಿ, ಕೇಂದ್ರ ಸಚಿವರುಗಳಾದ ಪ್ರಹ್ಲಾದ್ ಜೋಷಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರಚಾರ ನಡೆಸಿದ್ದರು.
ಪ್ರಚಾರ ಸಂದರ್ಭದಲ್ಲಿ ಎರಡೂ ಪಕ್ಷಗಳ ನಾಯಕರುಗಳ ವಾಕ್ಸಮರ ಸಹ ಬಿರುಸಾಗಿ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದರು. ಇಂದು ಬಹಿರಂಗ ಪ್ರಚಾರ ಅಂತ್ಯವಾಗಲಿದ್ದು, ನಾಳೆ ಮನೆ ಮನೆಯ ಪ್ರಚಾರಕ್ಕೆ ಅವಕಾಶವಿದ್ದು, ಕೊನೆಘಳಿಗೆಯ ಕೊನೆ ಘಳಿಗೆಯ ಕಸರತ್ತು ನಡೆಸಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 25 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರೆ, ಬಾಗಲಕೋಟೆ ಕ್ಷೇತ್ರದಲ್ಲಿ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಹಿರಿಯ ಶಾಸಕರಾಗಿದ್ದ ದಿ. ಶಾಮನೂರು ಶಿವಶಂಕರಪ್ಪ ಹಾಗೂ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ಮಲ್ಲಿಕಾರ್ಜುನ್ ಕಾಂಗ್ರೆಸ್ ಪಕ್ಷದ ಹುರಿಯಾಳಾಗಿದ್ದಾರೆ.
ಬಿಜೆಪಿಯಿಂದ ಶ್ರೀನಿವಾಸ ದಾಸ ಕರಿಯಪ್ಪ, ಅವರು ಅಭ್ಯರ್ಥಿಯಾಗಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿ ನಡುವೆ ಗೆಲುವಿಗೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ಅಲ್ಪಸಂಖ್ಯಾತರು ಮತ್ತು ಲಿಂಗಾಯತ ಸಮುದಾಯದ ಮತಗಳು ಗೆಲುವಿಗೆ ನಿರ್ಣಾಯಕವಾಗಿವೆ.
ಬಾಗಲಕೋಟೆಯಲ್ಲಿ ಮಾಜಿ ಸಚಿವ, ಶಾಸಕರಾಗಿದ್ದ ದಿ. ಹೆಚ್.ವೈ.ಮೇಟಿ ಅವರ ಪುತ್ರ ಉಮೇಶ್ ಮೇಟಿ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದು, ಬಿಜೆಪಿಯಿಂದ ವೀರಣ್ಣ ಚರಂತಿಮಠ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿ ಹೋರಾಟ ನಡೆಸಿದ್ದಾರೆ. ಈ ಕ್ಷೇತ್ರದಲ್ಲಿ ಹಿಂದುಳಿದ ಹಾಗೂ ಲಿಂಗಾಯತ ಸಮುದಾಯದ ಮತಗಳು ಹೆಚ್ಚಿದ್ದು, ಇವೇ ಗೆಲುವಿಗೆ ನಿರ್ಣಾಯಕವಾಗಲಿವೆ.
ಈ ಉಪಚುನಾವಣೆಯ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೂ ಪ್ರತಿಷ್ಠೆಯಾಗಿದ್ದು ಗೆಲುವಿಗಾಗಿ ಎರಡೂ ಪಕ್ಷಗಳು ಎಲ್ಲ ರೀತಿಯ ರಣತಂತ್ರಗಳನ್ನು ರೂಪಿಸಿ ಅದರಂತೆ ಅಬ್ಬರದ ಪ್ರಚಾರ ನಡೆಸಿ ಮತದಾರರ ಮನ ಗೆಲ್ಲುವ ಕಸರತ್ತನ್ನು ನಡೆಸಿವೆ.
ಈ ಎರಡೂ ಕ್ಷೇತ್ರಗಳ ಮತ ಎಣಿಕೆ ಮೇ 4 ರಂದು ನಡೆಯಲಿದ್ದು, ಅಂದು ಮತದಾರರ ತೀರ್ಪು ಬಹಿರಂಗವಾಗಲಿದೆ. ಈ ತಿಂಗಳ 9 ರಂದು ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದ್ದು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಚುನಾವಣಾ ಆಯೋಗ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ.


