Online News in ಕನ್ನಡ

ಚಾಮರಾಜನಗರದಲ್ಲಿ ಐದು ಹುಲಿಗಳ ಓಡಾಟ ಪತ್ತೆ : ಸಿಸಿ ಕ್ಯಾಮರಾದಲ್ಲಿ ಸೆರೆ

ಚಾಮರಾಜನಗರ : ತಾಲೂಕಿನ ನಂಜೇದೇವನಪುರ ಗ್ರಾಮದಲ್ಲಿ ನಿನ್ನೆ ರಾತ್ರಿ 5 ಹುಲಿಗಳು ಸಂಚರಿಸಿರುವುದು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ. ಗ್ರಾಮದ ಕುಮಾರಸ್ವಾಮಿ ಎಂಬುವವರ ಜಮೀನಿನಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಹುಲಿಗಳ ಓಡಾಟ ಸೆರೆಯಾಗಿದ್ದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಂಜೇದೇವನಪುರ ಬಳಿ ಇರುವ ಆನೆಮಡುವಿನ ಕೆರೆ ಕಡೆಯಿಂದ 5 ಹುಲಿಗಳು ತೆರಳಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಇದರಿಂದಾಗಿ ಸುತ್ತಮುತ್ತಲಿನ ಗ್ರಾಮಗಳ ರೈತರಲ್ಲಿ ಆತಂಕ ಮೂಡಿಸಿದೆ.
ಈ ಹಿಂದೆಯೂ ಈ ಭಾಗದಲ್ಲಿ ಹುಲಿಗಳ ಓಡಾಟ ಕಂಡುಬಂದಿತ್ತು. ಈ ವೇಳೆ ಅರಣ್ಯ ಇಲಾಖೆಯಿಂದ ಕೂಂಬಿಂಗ್ ನಡೆಸಲಾಗಿತ್ತು. ಆದರೆ, ಯಾವುದೇ ಹುಲಿ ಸೆರೆಯಾಗಿರಲಿಲ್ಲ. ಆದರೆ, ಈಗ ಒಟ್ಟಿಗೆ 5 ಹುಲಿಗಳ ಓಡಾಟ ಆತಂಕ್ಕೀಡುಮಾಡಿದೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು ಸಿಸಿ ಕ್ಯಾಮರಾ ಹಾಗೂ ಸುತ್ತಮುತ್ತ ಪರಿಶೀಲನೆ ನಡೆಸಿದ್ದಾರೆ.
ಈಗಾಗಲೇ ಜಿಲ್ಲೆಯ ಹಲವು ಕಡೆಗಳಲ್ಲಿ ಹುಲಿಗಳ ದಾಳಿ ನಿರಂತರವಾಗಿ ನಡೆಯುತ್ತಿದ್ದು ಈ ನಡುವೆ ನಂಜೇದೇವನಪುರದಲ್ಲಿ 5 ಹುಲಿಗಳ ಸಂಚಾರ ಮತ್ತಷ್ಟು ಆತಂಕ ಮೂಡಿಸಿದೆ. ರಾತ್ರಿ ವೇಳೆ ಜಮೀನುಗಳಿಗೆ ತೆರಳುವ ರೈತರು ಭಯಭೀತರಾಗಿದ್ದಾರೆ.

Call Now Button