Online News in ಕನ್ನಡ

ಚಲಿಸುತ್ತಿದ್ದ ಬೈಕ್‌ ಟೈರ್‌ ಸ್ಪೋಟ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ಬಾಲಕಿ ಸಾವು

ನಂಜನಗೂಡು : ಚಲಿಸುತ್ತಿದ್ದ ಬೈಕ್‌ ಟೈರ್‌ ಸ್ಪೋಟಗೊಂಡು ಸಂಭವಿಸಿದ ಅಪಘಾತದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ ಯುವತಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಜರುಗಿದೆ. ಚಲಿಸುತ್ತಿದ್ದ ಬೈಕ್‌ ಟೈರ್‌ ಸ್ಪೋಟಗೊಂಡ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಡುವಿನಹಳ್ಳಿ ಗ್ರಾಮದ ಮಹದೇವಸ್ವಾಮಿ ಮತ್ತು ಚಂದ್ರಮ್ಮ ಎಂಬುವರ ಪುತ್ರಿ ಪೂರ್ವಿಕ (16) ಮೃತಪಟ್ಟ ನತದೃಷ್ಟ ಬಾಲಕಿ. ಇಲ್ಲಿನ ಹೆಡಿಯಾಲ ಬೇಗೂರು ಮುಖ್ಯರಸ್ತೆಯ ಗಣೇಶಪುರ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ. ಶ್ರೀ ಬೇಲದ ಕುಪ್ಪೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮತ್ತೆ ಗ್ರಾಮಕ್ಕೆ ಮರಳುತ್ತಿರುವಾಗ ಗಣೇಶಪುರ ಗ್ರಾಮದ ಮುಖ್ಯ ರಸ್ತೆಯಲ್ಲಿ ದ್ವಿಚಕ್ರ ವಾಹನದ ಟೈಯರ್ ಬ್ಲಾಸ್ಟ್ ಆಗಿದೆ.
ಒಂದೇ ಬೈಕ್‌ನಲ್ಲಿ ಕುಟುಂಬದ ನಾಲ್ವರು ಸದಸ್ಯರು ತೆರಳುತ್ತಿದ್ದರು. ಇದರ ಪರಿಣಾಮ ನಾಲ್ಕು ಜನರ ಪೈಕಿ ಪೂರ್ವಿಕ ಮತ್ತು ತಾಯಿ ಚಂದ್ರಮ್ಮ ಗಂಭೀರ ಗಾಯಗೊಂಡು ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಪೂರ್ವಿಕ ಸಾವನ್ನಪ್ಪಿದ್ದಾಳೆ.
ತಗಡೂರು ಗ್ರಾಮದ ಮುರಾರ್ಜಿ ವಸತಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ ಮೃತ ಬಾಲಕಿ ಪೂರ್ವಿಕ . ಮೃತ ಬಾಲಕಿಯ ತಾಯಿ ಚಂದ್ರಮ್ಮ ಗೆ ಗಂಭೀರ ಗಾಯಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇನ್ನುಳಿದಂತೆ ದ್ವಿಚಕ್ರ ವಾಹನದಲ್ಲಿದ್ದ ತಂದೆ ಮಹದೇವಸ್ವಾಮಿ ಮತ್ತು ಮಗ ಪ್ರೀತಮ್ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ
ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಮೃತ ಬಾಲಕಿ ಪೂರ್ವಿಕ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗುವುದು ಎಂದು ಯಡಿಯಾಲ ಪೊಲೀಸರು ತಿಳಿಸಿದ್ದಾರೆ.

Call Now Button