ತಿ.ನರಸೀಪುರ : ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದು, ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಏರಿಸುವ ಗುರಿಯೊಂದಿಗೆ ಪಕ್ಷದ ಕಾರ್ಯಕರ್ತರು ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ಮಾಜಿ ಶಾಸಕ ಹಾಗೂ ನೂತನ ಜೆಡಿಎಸ್ ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಎಂ. ಅಶ್ವಿನ್ ಕುಮಾರ್ ಕರೆ ನೀಡಿದರು.
ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತಾಲೂಕು ಜೆಡಿಎಸ್ ಘಟಕವು ಪಟ್ಟಣದ ಜೆ ಎಸ್‌ಎಸ್ಸ ಭಾ ಭವನದಲ್ಲಿ ಕ್ಷೇತ್ರಾಧ್ಯಕ್ಷ ಸಿ.ಬಿ. ಹುಂಡಿ ಚಿನ್ನಸ್ವಾಮಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
2028ರ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಸಹಕಾರದೊಂದಿಗೆ ಕಾರ್ಯಕರ್ತರು ಸಮನ್ವಯದಿಂದ ಕೆಲಸ ಮಾಡಿ ಪಕ್ಷವನ್ನು ಬಲಪಡಿಸಬೇಕೆಂದು ತಿಳಿಸಿದ ಅಶ್ವಿನ್ ಕುಮಾರ್ ಪಕ್ಷದ ವರಿಷ್ಠ ನಾಯಕರು ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮಾರ್ಗದರ್ಶನದಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಿದರೆ ಕುಮಾರಸ್ವಾಮಿ ಅವರನ್ನು ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಿ ಮಾಡಲು ಸಾಧ್ಯವೆಂದು ವಿಶ್ವಾಸ ವ್ಯಕ್ತಪಡಿಸಿದರು.
ತಮ್ಮ ರಾಜಕೀಯ ಪಯಣವನ್ನು ಸ್ಮರಿಸಿದ ಅಶ್ವಿನ್ ಕುಮಾರ್, ಸೋಮನಾಥಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರವು ರಾಜಕೀಯ ಪ್ರವೇಶಕ್ಕೆ ವೇದಿಕೆ ಒದಗಿಸಿತು ತದ ನಂತರ. 2018ರ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಹಾಗೂ ದೇವೇಗೌಡರ ಆಶೀರ್ವಾದದಿಂದ ತಿ.ನರಸೀಪುರ ಕ್ಷೇತ್ರದ ಜನತೆ ತಮ್ಮನ್ನು ಶಾಸಕನಾಗಿ ಆಯ್ಕೆ ಮಾಡಿದ್ದು, ಆ ವಿಶ್ವಾಸವೇ ಇಂದು ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಸ್ಥಾನಕ್ಕೆ ಕಾರಣವಾಗಿದೆ ಎಂದು ಹೇಳಿ,ತಿ.ನರಸೀಪುರ ತಾಲ್ಲೂಕಿನ ಜನತೆಗೆ ಸದಾ ಚಿರಋಣಿಯಾಗಿರುವೆನೆಂದು ಕೃತಜ್ಞತೆ ಸಲ್ಲಿಸಿದರು.
ಪ್ರಥಮ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದಾಗ ಕ್ಷೇತ್ರದ ಜನತೆ ತೋರಿದ ಪ್ರೀತಿ ಹಾಗೂ ಅಪಾರ ಮತಗಳ ಅಂತರದ ಗೆಲುವನ್ನು ಎಂದಿಗೂ ಮರೆಯಲಾರೆ ಎಂದ ಅವರು, ಶಾಸಕನಾಗಿ ಪಕ್ಷತೀತ ಹಾಗೂ ಜಾತ್ಯಾತೀತವಾಗಿ ಸೇವೆ ಸಲ್ಲಿಸಿದ್ದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿಯೂ ಜನಸೇವೆಗೆ ಸಿದ್ದನಿದ್ದು, ಕಾರ್ಯಕರ್ತರು ಸಣ್ಣಪುಟ್ಟ ವೈಮನಸ್ಸುಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಮನವಿ ಮಾಡಿದರು.
ಸೋಲು ಅಲ್ಲ, ಗೆಲುವಿನ ಮೆಟ್ಟಿಲು
2018ರ ವಿಧಾನಸಭಾ ಚುನಾವಣೆಯಲ್ಲಿ ಅತ್ಯಧಿಕ ಮತಗಳೊಂದಿಗೆ ಜಯಗಳಿಸಿ ಐದು ವರ್ಷ ಸೇವೆ ಸಲ್ಲಿಸಿದೆ. ಆದರೆ ಕೆಲವು ಕಾರಣಾಂತರಗಳಿಂದ 2023ರ ಚುನಾವಣೆ ಯಲ್ಲಿ ಸೋಲನುಭವಿಸಬೇಕಾಯಿತು. ಆ ಸೋಲನ್ನು ನಾನು ಸೋಲು ಎಂದು ಭಾವಿಸಿಲ್ಲ; ಅದು ಮುಂದಿನ ಗೆಲುವಿನ ಮೆಟ್ಟಿಲು ಎಂದು ಪರಿಗಣಿಸಿದ್ದೇನೆ. ಭಾರತ ಸರ್ಕಾರದ ಆದೇಶದಂತೆ ರಾಜ್ಯ ಸರ್ಕಾರ ಮಾರ್ಚ್ 18ರಂದು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಸಲಿದೆ. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಸ್ಥಳದಲ್ಲೇ ಹಾಜರಿದ್ದು ಹೊಸ ಮತದಾರರ ಹೆಸರು ಸೇರಿಸುವುದು ಹಾಗೂ ಅನರ್ಹ ಹೆಸರುಗಳನ್ನು ತೆಗೆಯುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ನಾನು ಕೂಡ ನಿಮ್ಮೊಂದಿಗೆ ಇರುತ್ತೇನೆ
-ಎಂ. ಅಶ್ವಿನ್ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ.
ನಿರೀಕ್ಷೆಗೂ ಮೀರಿದ ಕಾರ್ಯಕರ್ತರು: ಸನ್ಮಾನ ಕಾರ್ಯಕ್ರಮಕ್ಕೆ ತಾಲ್ಲೂಕಿನ ವಿವಿಧ ಗ್ರಾಮಗಾಳಿಂದ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಹಾಗೂ ಅಶ್ವಿನ್ ಕುಮಾರ್ ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಬಾರಿ ಗಾತ್ರದ ಹೊವಿನ ಹಾರಗಳನ್ನು ಹಾಕಿ ಅಭಿನಂದಿಸಿದರು.
ಜನರೊಂದಿಗೆ ಜಾ.ದಳ ಕಾರ್ಯಕ್ರಮ: ಫೆಬ್ರವರಿ 24 ರಂದು ಬನ್ನೂರಿನ ಡೇರಿ ಮುಂಭಾಗದ ಆವರಣದಲ್ಲಿ ‘ಜನರೊಂದಿಗೆ ಜಾತ್ಯಾತೀತ ಜನತಾದಳ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಜಾ.ದಳ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರ ಸ್ವಾಮಿ, ಭಾಗವಹಿಸಲಿದ್ದಾರೆ.
ಕ್ಷೇತ್ರದ ಎಲ್ಲಾ ಭಾಗಗಳಿಂದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮಾಜಿ ಶಾಸಕ ಅಶ್ವಿನ್ ಕುಮಾರ್ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಕ್ಷೇತ್ರಾಧ್ಯಕ್ಷ ಸಿ.ಬಿ. ಹುಂಡಿ ಚಿನ್ನಸ್ವಾಮಿ, ಪ್ರಧಾನ ಕಾರ್ಯದರ್ಶಿ ಹೆಮ್ಮಿಗೆ ಹೊನ್ನನಾಯಕ, ಹಿರಿಯ ಮುಖಂಡ ಕೊಡಗಹಳ್ಳಿ ಚಿಕ್ಕಜವರಪ್ಪ, ರಾಮಸ್ವಾಮಿ, ಮಾಜಿ.ಜಿ.ಪಂ.ಸದಸ್ಯ ಜೈಪಾಲ್ ಭರಣಿ, ಧರ್ಮರತ್ನಕರ ಕುಮಾರ, ತಲಕಾಡು ಕಾಡಿ ಮಹದೇವ, ರಾಜೇಶ್, ಮೋಹನ್ ಕುಮಾರ್ ಗೌಡ, ಕಾಳಿಹುಂಡಿ ದೊಡ್ಡಮಾದನಾಯಕ, ಕಾಳಬಸವನ ಹುಂಡಿ ಕುಮಾರ್,ನಿಲಸೋಗೆ ಮಹೇಶ್, ಕುಕ್ಕೂರು ಉಮಾಪತಿ, ಕಟ್ಟಪುರ ಸಿದ್ದಪ್ಪ, ಹಿರಿಯೂರು ಸೋಮಣ್ಣ, ಮೂಗೂರು ಶಿವಮೂರ್ತಿ, ಕನ್ನಹಳ್ಳಿ ಮರಿಸ್ವಾಮಿ, ಕಾರ್ ರೇವಣ್ಣ, ಸೋಸಲೆ ರಾಜಣ್ಣ, ದಿಲೀಪ್, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ತುರಗನೂರು ಪ್ರಸನ್ನ, ತಾಯೂರು ಪ್ರಕಾಶ್, ದೊಡ್ಡೇಬಾಗಿಲು ಮಹದೇವಯ್ಯ, ಬನ್ನೂರು ಅಪ್ಪುಗೌಡ ,ಕೆಬ್ಬೆ ಹುಂಡಿ ಮಹದೇವ ಸ್ವಾಮಿ, ತಿರಮಕೂಡಲು ಜಯರಾಮು, ಬನ್ನಹಳ್ಳಿ ಹುಂಡಿ ಶಿವಕುಮಾರ್, ಪ್ರಭುಸ್ವಾಮಿ, ಲಿಂಗಪ್ಪಾಜಿ, ವಕೀಲರ ಸಂಘದ ಅಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ, ವಕೀಲ ಪರಮೇಶ್, ಮಂಜುಳ, ಮಾನಸ, ಸುಮಿತ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

