ಬೆಂಗಳೂರು: ಸರ್ವ ಧರ್ಮಗಳೂ ಭಾರತದಲ್ಲಿ ವಾಸಿಸುತ್ತಿರುವಾದ ವಂದೇ ಮಾತರಂ ರಾಷ್ಟ್ರಗೀತೆ ಆಗಲು ಸಾಧ್ಯವಿಲ್ಲ. ಎಲ್ಲ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹೇಳಿ ರಾಷ್ಟ್ರಗೀತೆಯನ್ನು ಹಿಂದಿಕ್ಕುವ ಪ್ರಯತ್ನ ಬಿಜೆಪಿ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ, ಹಿರಿಯ ಕಾಂಗ್ರೆಸ್ಸಿಗ ಬಿ.ಕೆ.ಹರಿಪ್ರಸಾದ್ ತಿಳಿಸಿದರು.
ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ವಂದೇ ಮಾತರಂನಲ್ಲಿ ದೇವರ ಹೆಸರಿದೆ. ಎಲ್ಲ ಧರ್ಮದವರೂ ಈ ದೇಶದಲ್ಲಿ ಇರುವಾಗ ವಂದೇ ಮಾತರಂ ರಾಷ್ಟ್ರಗೀತೆ ಆಗಲು ಸಾಧ್ಯವಿಲ್ಲ. ಕೆಟ್ಟ ಭಾವನೆಗಳನ್ನು, ಕೋಮು ಭಾವನೆ ಕೆರಳಿಸಲು ಇದನ್ನು ತಂದಿದ್ದಾರೆ. ಇದೊಂದು ಚುನಾವಣಾ ಗಿಮಿಕ್ ಎಂದು ಟೀಕಿಸಿದರು.
ಡಿಕೆಶಿ ಬಂಡೆ ಅಲ್ಲ, ರೈಲ್ವೇ ಇಂಜಿನ್…
ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೇವಲ ಬಂಡೆ ಅಲ್ಲ, ಅವರು ರೈಲ್ವೆ ಇಂಜಿನ್ ಇದ್ದಹಾಗೆ. ಅವರು ಬರುವಾಗ ಸೌಂಡ್ ಬರುತ್ತದೆ. ಅವರೊಂದಿಗೆ ಚಾ ಮಾರುವವರು, ತಿಂಡಿ ಮಾರುವವರು ದೊಡ್ಡ ಸೌಂಡ್ ಮಾಡಿಕೊಂಡು ಬರುತ್ತಾರೆ. ಅವರನ್ನೆಲ್ಲ ಎಳೆದುಕೊಂಡು ಹೋಗುವುದು ಡಿಕೆಶಿ ಅವರ ಕರ್ತವ್ಯವಾಗಿದೆ ಎಂದು ನಾಯಕತ್ವದ ಗೊಂದಲಕ್ಕೆ ಬಿ.ಕೆ.ಹರಿಪ್ರಸಾದ್ ಹೊಸ ವ್ಯಾತ್ಯಾನ ನೀಡಿದರು.
ಗೊಂದಲ ಸೃಷ್ಟಿಯಾಗಿರೋದು ಹೈಕಮಾಂಡ್ನಿಂದಲ್ಲ. ಅಂದ ಮೇಲೆ ಅವರೇಕೆ ಗೊಂದಲ ಬಗೆಹರಿಸುತ್ತಾರೆ. ಎಲ್ಲಿ, ಯಾರಿಂದ ಗೊಂದ ಸೃಷ್ಟಿಯಾಗಿದೆ. ಅವರು ಬಗೆಹರಿಸಿಕೊಂಡು ಮುಂದಕ್ಕೆ ಹೋಗುತ್ತಾರೆ. ಈ ಬಗ್ಗೆ ಸಿಎಂ ಮತ್ತು ಡಿಸಿಎಂ ನಡುವೆ ಯಾವುದೇ ಗೊಂದಲ ಇಲ್ಲ ಎಂದು ನುಡಿದರು.
ನಮ್ಮ ದೇಶದ ರಾಷ್ಟ್ರಗೀತೆಯ ಬಗ್ಗೆ ಅಂದೇ ಆರ್ಎಸ್ಎಸ್ನನ ಗೋಳವಲ್ಕರ್ ಅಪಸ್ವರ ಎತ್ತಿದ್ದರು. ಸಂಘದಲ್ಲಿ ಒಂದೇ ಒಂದು ದಿನವೂ ರಾಷ್ಟ್ರಗೀತೆ ಹಾಡಿದವರಲ್ಲ. ಅದೇ ಕಾರಣಕ್ಕೆ ವಂದೇ ಮಾತರಂನನ್ನು ಎಲ್ಲ ಕಡೆ ಕಡ್ಡಾಯ ಮಾಡಿದ್ದಾರೆ. ಇದೀಗ ಪ್ರತಿ ಸಭೆ ಮತ್ತು ಕಾರ್ಯಕ್ರಮದಲ್ಲಿ ವಂದೇ ಮಾತರಂ ಹೇಳಿದ ಬಳಿಕ ರಾಷ್ಟ್ರಗೀತೆ ಹಾಡುತ್ತಿರುವುದು ರಾಷ್ಟ್ರಗೀತೆಗೆ ಅಪಮಾನ ಮಾಡಿದ ಹಾಗೆ. ಬಿಜೆಪಿ ಸರಕಾರ ದೇಶದ ಶಿಷ್ಟಾಚಾರವನ್ನು ಉಲ್ಲಂಘಿಸಿ ಅಪಮಾನ ಮಾಡುತ್ತಿದೆ. ವಂದೇ ಮಾತರಂ ಬೆಂಗಲಾಲ್ ಪ್ರಾಂತ್ಯದ ರಾಷ್ಟ್ರಗೀತೆ ಆಗಿತ್ತೇ ವಿನಃ ಇಡೀ ದೇಶದ ರಾಷ್ಟ್ರಗೀತೆ ಆಗಿರಲಿಲ್ಲ. ಬೆಂಗಾಲ್ ಚುನಾವಣೆ ಸಲುವಾಗಿ ವಂದೇ ಮಾತರಂ ಕಡ್ಡಾಯ ಮಾಡಿದ್ದಾರೆ ಎಂದು ದೂರಿದರು.

