Online News in ಕನ್ನಡ

ʻಕೈ ಕೆಸರೆರಚಾಟʼ : ಹೈ ಮಧ್ಯ ಪ್ರವೇಶಕ್ಕೆ ಕಾಂಗ್ರೆಸ್‌ ಶಾಸಕರ ಒತ್ತಾಯ

ಬೆಂಗಳೂರು: ನಾಯಕತ್ವ ಬದಲಾವಣೆ ವಿಷಯದಲ್ಲಿ ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ ನೀಡಿರುವ ʻನಾಯಿ ಹೇಳಿಕೆʼ ಇದೀಗ ಕಾಂಗ್ರೆಸ್‌ ನಾಯಕರ ವಲಯದಲ್ಲಿ ತೀವ್ರ ಅಸಮಧಾನಕ್ಕೆ ಕಾರಣವಾಗಿದೆ. ಈತನ್ಮಧ್ಯೆ, ಮುಖ್ಯಮಂತ್ರಿ ಬದಲಾವಣೆ ಕುರಿತು ದಿನೇ ದಿನೇ ಪಕ್ಷದ ಶಾಸಕರು ನೀಡುತ್ತಿರುವ ಹೇಳಿಕೆ ಪಕ್ಷ ಮತ್ತು ಸರಕಾರಕ್ಕೆ ಕೆಟ್ಟ ಹೆಸರು ತರುತ್ತಿದ್ದು ಹೈಕಮಾಂಡ್‌ ತಕ್ಷಣ ಮಧ್ಯ ಪ್ರವೇಶಿಸಬೇಕೆಂದು ಕಾಂಗ್ರೆಸ್‌ನ ಕೆಲ ಶಾಸಕರು ಒತ್ತಾಯಿಸಿದ್ದಾರೆ.
ಮಂಡ್ಯ ಶಾಸಕ ರವಿಕುಮಾರ್‌ ಗೌಡ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ ತಕ್ಷಣ ಮಧ್ಯ ಪ್ರವೇಶಿಸಿ ʻಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ ನಡುವೆ ಒಪ್ಪಂದ ಆಗಿತೇ ಇಲ್ಲವೇ ? ಡಿ.ಕೆ.ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ನೀಡಲಾಗುತ್ತಾ, ಇಲ್ಲವೇ ? ಎಂಬ ಬಗ್ಗೆ ಜನತೆಗೆ ಸ್ಪಷ್ಟಪಡಿಸಬೇಕು. ಇಲ್ಲದಿದ್ದರೆ ಪಕ್ಷ ಮತ್ತು ಆಡಳಿತಕ್ಕೆ ದೊಡ್ಡ ನಷ್ಟವಾಗಲಿದೆ ಎಂದು ತಿಳಿಸಿದರು.
ಯಾರೇ ಫಾರಿನ್‌ಗೆ ಹೋದರೂ, ಎಷ್ಟೇ ಶಾಸಕರು ಟೂರ್‌ ಮಾಡಿದರೂ ನಾಯಕತ್ವ ಬದಲಾಗಲ್ಲ ಅಥವಾ ಸರಕಾರ ಬೀಳಿಸಲು ಆಗಲ್ಲ. ಅಥವಾ ನಾನು ಒಂದಷ್ಟು ಜನರನ್ನು ಕರೆದುಕೊಂಡು ದೆಹಲಿಗೆ ಹೋಗಿ ಬಂದರೆ ಸಿಎಂ ಬದಲಾಗಲ್ಲ. ಇದು ಸಾಧ್ಯವಿರೋದು ಹೈಕಮಾಂಡ್‌ನಿಂದ ಮಾತ್ರ. ಯಾರೇ ಯಾವ ರೀತಿಯ ಹೇಳಿಕೆ ನೀಡಿದ್ರೂ ಪ್ರಯೋಜನವಿಲ್ಲ ಎಂದು ಅಭಿಪ್ರಾಯಪಟ್ಟರು.
ಸಮಾಜ ಕಲ್ಯಾಣ ಸಚಿವ ಡಾ. ಮಹಾದೇವಪ್ಪ ಆಡಿರುವ ʻನಾಯಿ ಮಾತುʼ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಹುಶಃ ಡಿ.ಕೆ.ಶಿವಕುಮಾರ್‌ ಅವರು ನಿಷ್ಠೆಗೆ ಹೆಸರಾದವರು. ಪಕ್ಷದ ಹೈಕಮಾಂಡ್‌ಗೆ ನಿಷ್ಠೆ ತೋರಿಸಿದ್ದಾರೆ. ಇದನ್ನು ಪರಿಗಣಿಸಿ ಹಾಗೆ ಹೇಳಿರಬಹುದು ಎಂದು ತಿರುಗೇಟು ನೀಡಿದರು. ಇಂತಹ ಹೇಳಿಕೆಗಳಿಗೆ ಮುಂದೆ ಉತ್ತರ ಸಿಗಲಿದೆ ಎಂದು ನುಡಿದರು.
ಸಿಎಂ ಮಾತಿಗೆ ತಪ್ಪಲ್ಲ :
ಈನಡುಗೆ, ಮತ್ತೆ ಮೌಲ ಮುರಿದಿರುವ ಕುಣಿಗಲ್‌ ಶಾಸಕ ರಂಗನಾಥ್‌, ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂದಿಗೂ ಮಾತಿಗೆ ತಪ್ಪುವವರಲ್ಲ. ಅವರು ಮತ್ತು ಡಿಸಿಎಂ ಶಿವಕುಮಾರ್‌ ನಡುವೆ ಆಗಿರುವ ಒಪ್ಪಂದದ ಬಗ್ಗೆ ಜನರಿಗೆ ತಿಳಿಸಬೇಕು. ಇಲ್ಲವಾದಲ್ಲಿ ಇಲ್ಲ ಎಂದು ಹೇಳಬೇಕು. ಅವರು ಮಾತು ಉಳಿಸಿಕೊಳ್ಳುತ್ತಾರೆ ಎಂದು ನಾವೆಲ್ಲ ನಂಬಿದ್ದೇವೆ ಎಂದು ತಿಳಿಸಿದರು.
ಈತನ್ಮಧ್ಯೆ, ನಿನ್ನೆ ಮೈಸೂರು ನಗರದಲ್ಲಿ ಮಾತನಾಡಿರುವ ಸಿಎಂ ಪುತ್ರ, ವಿಧಾನ ಪರಿಷತ್‌ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ, ನವೆಂಬರ್‌ ತಿಂಗಳಿನಿಂದಲೂ ಕೇವಲ ನಾಯಕತ್ವದ ವಿಷಯವೇ ಚರ್ಚೆ ಆಗುತ್ತಿದೆ. ಎಲ್ಲದಕ್ಕೂ ಒಂದು ಅಂತ್ಯವಿದೆ. ಎಲ್ಲರ ಮಾತಿಗೂ ಉತ್ತರ ಕೊಟ್ಟುಕೊಂಡು ಹೋಗಲು ಸಾಧ್ಯವಿಲ್ಲ. ಆಧಾರ ರಹಿತ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದರೆ ಅಂತ್ಯ ಅನ್ನೋದೆ ಇರೋದಿಲ್ಲ. ಬಿಜೆಪಿಯಲ್ಲಿ ಕೆಲಸ ನಿಲ್ಲದೆ ಖಾಲಿ ಕುಳಿತವರು ತಮ್ಮ ಅಸ್ಥಿತ್ವವನ್ನು ಸಾಭೀತು ಪಡಿಸಲು ಇಂತಹ ನಿರಾಧಾರ ಆರೋಪ ಮಾಡುತ್ತಿದ್ದಾರೆ ಎಂದು ನುಡಿದರು.

Call Now Button