Online News in ಕನ್ನಡ

HD ದೇವೇಗೌಡ ಸುದ್ದಿಗೋಷ್ಠಿ; ಪ್ರಮುಖ ಅಂಶಗಳು ಇಲ್ಲಿವೆ ನೋಡಿ…

ಬೆಂಗಳೂರು: ನಗರದ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಜೆಡಿಎಸ್‌ ಬಿಜೆಪಿ ಮೈತ್ರಿ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ನನ್ನ ಮೋದಿ ಸ್ನೇಹ ತುಂಬಾ ಚೆನ್ನಾಗಿದೆ

ನನ್ನ ಮತ್ತು ಮೋದಿ ಅವರ ನಡುವಿನ ಸ್ನೇಹ ತುಂಬಾ ಚೆನ್ನಾಗಿದೆ. ನಮ್ಮ ಮೈತ್ರಿಯಲ್ಲಿ ಯಾವುದೇ ಬಿರುಕು ಇಲ್ಲ. ನಾವು ಒಂದಾಗಿ ಮುಂದಿನ ಎಲ್ಲಾ ಚುನಾವಣೆಗಳನ್ನೂ ಎದುರಿಸುತ್ತೇವೆ ಎಂದು ತಿಳಿಸಿದರು. ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಚುನಾವಣೆಯಲ್ಲಿ ನಾವು ಕನಿಷ್ಠ 50-60 ಸ್ಥಾ‌ನ‌ ಗೆಲ್ಲಬೇಕು. ಅದಕ್ಕಾಗಿ ಸಭೆ ನಡೆಸಲು ತೀರ್ಮಾನ ಮಾಡಿದ್ದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾವೇಶ ಮಾಡುತ್ತೇವೆ. ಜಿಬಿಎ ಚುನಾವಣೆಯಲ್ಲಿ 50 ಸ್ಥಾನವಾದ್ರೂ ಗೆಲ್ಲುವ ಸಂಕಲ್ಪ ಇದೆ ಎಂದು ಇದೇ ವೇಳೆ ತಿಳಿಸಿದರು.

ನಾನೇ ಕಲಬುರಗಿಗೆ ಹೋಗುತ್ತೇನೆ

ರಾಜ್ಯದಲ್ಲಿ ಉಂಟಾದ ಪ್ರವಾಹ ವಿಚಾರವಾಗಿ ಮಾತನಾಡಿದ ಅವರು, ಅನೇಕ ಹಳ್ಳಿ, ರಸ್ತೆ, ಸೇತುವೆ ಸೇರಿದಂತೆ ಮನೆಗಳು ಹಾನಿಯಾಗಿವೆ. ಮೊದಲ ಬಾರಿಗೆ ಇಂತಹ ಭೀಕರ ನೋವು ತರುವಂತ ಅತಿವೃಷ್ಟಿ ನಿರ್ಮಾಣವಾಗಿದೆ. ಜಿಲ್ಲಾಧಿಕಾರಿಗಳು, ಸಚಿವರಿಗೆ ಸರ್ಕಾರ ನಿರ್ದೇಶನ ಕೊಡಬೇಕು. ನಾಲ್ಕಾರು ಕಡೆ ವೀಕ್ಷಣೆ ಮಾಡುತ್ತೇನೆ. ಪರಿಹಾರ ಕಾರ್ಯ ಏನಾಗಿದೆ ಎಲ್ಲ ತಿಳಿದುಕೊಳ್ಳುತ್ತೇನೆ. ನಾನೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಹೋಗಿ ಸಮಸ್ಯೆ ಆಲಿಸುತ್ತೇನೆ. ಆ ಬಳಿಕ ಕೇಂದ್ರಕ್ಕೆ ನಾನು ಪತ್ರ ಬರೆಯುತ್ತೇನೆ. ಕುಮಾರಸ್ವಾಮಿ‌ ಈಗಾಗಲೆ ಪತ್ರ ಬರೆದಿದ್ದಾರೆ. ಪ್ರಧಾನಿ ಅವರು ಬಿಡುವಿಲ್ಲದ ಕಾರ್ಯಕ್ರಮದಲ್ಲಿದ್ದಾರೆ. ದೆಹಲಿಗೆ ಹೋಗಿ ಅವರನ್ನು ಭೇಟಿ ಮಾಡಿ ಪರಿಹಾರಕ್ಕೆ ಒತ್ತಾಯ ಮಾಡುತ್ತೇನೆ ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಈಗ ಆರೋಗ್ಯವಾಗಿದ್ದಾರೆ

ಕೇಂದ್ರ ಸಚಿವ ಹೆಚ್​​ಡಿ ಕುಮಾರಸ್ವಾಮಿ 4 ತಿಂಗಳಿಂದ ರಾಜ್ಯದಲ್ಲಿ ಪ್ರವಾಸ ಮಾಡುತ್ತಿಲ್ಲ. ಆರೋಗ್ಯ ಸ್ವಲ್ಪ ಸುಧಾರಿಸಿಕೊಳ್ಳಬೇಕಿತ್ತು. ಈಗ ಆರೋಗ್ಯ ಸಂಪೂರ್ಣ ಚೇತರಿಕೆ ಆಗಿದೆ. ವಿದೇಶದಿಂದ ವೈದ್ಯರು ಬಂದು ಆರೋಗ್ಯ ತಪಾಸಣೆ ಮಾಡಿದ್ದಾರೆ. ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ನಿಖಿಲ್ ಕುಮಾರಸ್ವಾಮಿ ಚುರುಕಾಗಿ ಎಲ್ಲೆಡೆ ಓಡಾಡುತ್ತಿದ್ದಾರೆ. ಅನುಭವಿ ರಾಜಕಾರಣಿ ರೀತಿ ನಿಖಿಲ್ ಕೆಲಸ ಮಾಡುತ್ತಿದ್ದಾರೆ. ನನಗೆ ಮಂಡಿನೋವು ಬಿಟ್ಟರೆ ಬೇರೆ ಏನೂ ತೊಂದರೆ ಇಲ್ಲ ಎಂದು ಹೇಳಿದ್ದಾರೆ.

Call Now Button