ಬೆಳಗಾವಿ : ಇದು ನನ್ನ ಸರಕಾರವಲ್ಲ, ನಮ್ಮ ಸರಕಾರ, ಐದು ವರ್ಷಗಳ ಕಾಲ ಸುಭದ್ರ ಸರಕಾರ ನೀಡುತ್ತೇವೆ, ಈಗಲೂ ನಾನೇ ಮುಖ್ಯಮಂತ್ರಿ, ಹೈಕಮಾಂಡ್ ಹೇಳುವವರೆಗೂ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ…ʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಘೋಷಿಸಿದ್ದಾರೆ. ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರ ನೀಡಿದ ಅವರು, ಮುಂಬರುವ 2028ರ ಚುನಾವಣೆಯಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಬಿಜೆಪಿಯವರಿಗೆ ವಿರೋಧ ಪಕ್ಷ ಖಾಯಂ ಆಗಲಿದೆ ಎಂದು ತಿರುಗೇಟು ನೀಡಿದರು.
ಉರಿಯುವುದರ ಮೇಲೆ ಉಪ್ಪು ಹಾಕಬಾರದೆಂಬ ಎಂಬ ಗಾದೆ ಮಾತಿದೆ. ವಿರೋಧಪಕ್ಷದವರು ಇರುವುದೇ ಉರಿಯುವುದರ ಮೇಲೆ ಉಪ್ಪು ಸುರಿಯಲು. ವಿರೋಧ ಪಕ್ಷದವರು ಏನೇ ಪ್ರಚೋದನೆ ಮಾಡಿದರೂ, ನಮ್ಮ ಶಾಸಕರಾರೂ ಪ್ರಚೋದಿತರಾಗುವುದಿಲ್ಲ. ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿರಬೇಕೆಂದು ಜನರು ಆಶೀರ್ವಾದ ಮಾಡಿ ಕಳಿಸಿದ್ದಾರೆ. 140 ಶಾಸಕರು ನಮ್ಮೊಂದಿಗಿದ್ದಾರೆ. ವಿರೋಧ ಪಕ್ಷದವರು ಇದರಲ್ಲಿ ಹುಳಿ ಹಿಂಡುವ ಅಗತ್ಯವಿಲ್ಲ ಎಂದರು.
ಜನರ ನಾಡಿಮಿಡಿತ ಕಾಂಗ್ರೆಸ್ ಸರ್ಕಾರಕ್ಕೆ ತಿಳಿದಿದೆ :
2023 ರಲ್ಲಿ ಜನರು ಆಶೀರ್ವಾದ ಮಾಡಿದಂತೆ 2028 ರಲ್ಲಿಯೂ ಕಾಂಗ್ರೆಸ್ ಸರ್ಕಾರವೇ ಆಡಳಿತಕ್ಕೆ ಬರಲಿದೆ. ಜನರ ನಾಡಿಮಿಡಿತ ಸರ್ಕಾರಕ್ಕೆ ತಿಳಿದಿದೆ. ಕರ್ನಾಟಕದ ಜನ ಬಿಜೆಪಿಗೆ ಎಂದಿಗೂ ಅಧಿಕಾರಕ್ಕೆ ತರುವುದಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಎರಡು ಬಾರಿ ಅಧಿಕಾರ ನಡೆಸಿದರೂ, ಒಂದು ಬಾರಿಯೂ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿಲ್ಲ. 2008 , 2018 ರಲ್ಲಿ ಆಪರೇಷನ್ ಕಮಲ ಮಾಡಿ, ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದಾರೆ. ರಾಜ್ಯದ ಜನ ಬಿಜೆಪಿಗೆ ಆಶೀರ್ವಾದ ಮಾಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ. 2019 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಾರದೆಂಬ ಉದ್ದೇಶದಿಂದ ಜೆಡಿಎಸ್ ನೊಂದಿಗೆ ಸರ್ಕಾರ ರಚಿಸಲಾಯಿತು. ಆದರೆ ಬಿಜೆಪಿಯವರು, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಉದ್ದೇಶದ ಬಗ್ಗೆ ಪ್ರಶ್ನಿಸಿದರು.
ಐದು ವರ್ಷ ಸುಭದ್ರ ಸರ್ಕಾರ ನೀಡುತ್ತೇವೆ :
ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಮಾತು ಅಂತಿಮವಾಗಿರುತ್ತದೆ. ಆದರೆ ಬಿಜೆಪಿಯ ಅಧ್ಯಕ್ಷಗಿರಿ ಆಯ್ಕೆಯಲ್ಲಿ ಒಮ್ಮತ ಸಾಧಿಸಿಲ್ಲ. ಬಿಜೆಪಿಯವರಿಗೆ ಅಸೂಯೆ ಕಾಡುತ್ತಿದೆ. ಐದು ವರ್ಷ ಸುಭದ್ರ ಸರ್ಕಾರ ನೀಡುತ್ತೇವೆ ಹಾಗೂ ಮತ್ತೆ ಚುನಾವಣೆ ಎದುರಿಸಿ 2028 ರಲ್ಲಿಯೂ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. 2023ರಲ್ಲಿಯೂ ಕಾಂಗ್ರೆಸ್ಗೆ ಜನರು ಆಶೀರ್ವಾದ ಮಾಡಿದ್ದಾರೆ, ಆದರೆ ಬಿಜೆಪಿಯವರಿಗೆ ಒಮ್ಮೆಯೂ ಜನಾದೇಶ ದೊರೆತಿಲ್ಲ ಹಾಗೂ ಭವಿಷ್ಯದಲ್ಲಿಯೂ ದೊರೆಯುವುದಿಲ್ಲ. ಬಿಜೆಪಿಯವರು ಸದಾ ವಿರೋಧಪಕ್ಷದ ಸ್ಥಾನದಲ್ಲಿಯೇ ಇರಲಿದೆ.
ʻನಾನು’ ಹೋದರೆ ಹೋದೇನುʼ ಅಂತ ಕನಕದಾಸರು ಹೇಳಿದ್ದರು. ʻಇದು ನನ್ನ ಸರ್ಕಾರವಲ್ಲ, ನಮ್ಮ ಸರ್ಕಾರʼ. ಈಗಲೂ ನಾನೇ ಮುಖ್ಯಮಂತ್ರಿ. ಹೈಕಮಾಂಡ್ ಹೇಳುವ ತನಕವೂ ನಾನೇ ಮುಖ್ಯಮಂತ್ರಿ ಎಂದು ಸದನದಲ್ಲಿ ಸಿದ್ದರಾಮಯ್ಯ ಘರ್ಜಿಸಿದರು.


