ಬೆಳಗಾವಿ: ಇಂದಿನಿಂದ ಆರಂಭಗೊಂಡಿರುವ ಬೆಳಗಾವಿ ಚಳಗಾಲ ಅಧಿವೇಶನದಲ್ಲಿ ಹಿರಿಯ ರಾಜಕಾರಣಿಗಳಾದ ಎಂ.ವೈ. ಮೇಟಿ, ಆರ್. ವಿ. ದೇವರಾಜ್, ಶಿವಪ್ಪ ಶರಣಪ್ಪಗೌಡ ಪಾಟೀಲ್, ಖ್ಯಾತ ಕಾದಂಬರಿಗಾರ ಎಸ್.ಎಲ್.ಭೈರಪ್ಪ, ಸಾಲುಮರದ ತಿಮ್ಮಕ್ಕ ಮತ್ತು ಖ್ಯಾತ ಹಾಸ್ಯ ನಟ ಉಮೇಶ್ ಅವರಿಗೆ ಸಂತಾಪ ಸೂಚನೆ ನಿರ್ಣಯವನ್ನು ಮಂಡಿಸಲಾಯಿತು.
ಅಧಿವೇಶನದ ಆರಂಭದಲ್ಲಿ ರಾಷ್ಟ್ರಗೀತೆ ಮತ್ತು ಸಂವಿಧಾನ ಪೀಠಿಕೆ ಬೋಧಿಸುವ ಮೂಲಕ ಸಭಾಪತಿ ಯು.ಟಿ. ಖಾದರ್ ಅವರು ಮೇಲಿನ ಎಲ್ಲ ಗಣ್ಯರ ಸಾಧನೆಯನ್ನು ಸಭೆಗೆ ತಿಳಿಸಿಕೊಟ್ಟರು.
ಸಂತಾಪ ಸೂಚನೆ ನಿರ್ಣಯದ ಮೇಲೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಂ.ವೈ. ಮೇಟಿ ಅವರು ಓರ್ವ ಸಜ್ಜನ ಮತ್ತು ಪ್ರಾಮಾಣಿಕ ರಾಜಕಾರಣಿ. 1983ರಿಂದ ಅವರೊಂದಿಗೆ ಒಡನಾಟ ಇಟ್ಟುಕೊಂಡಿದ್ದೆ. ಅಂದಿನಿಂದ ಇಂದಿನವರೆಗೂ ಬಹಳ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಾಗಿ ಉಳಿದುಕೊಂಡಿದ್ದರು, ಅತ್ಯಂತ ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ ಮೂಲಕ ಸಚಿವ ಸ್ಥಾನದವರೆಗೂ ಬೆಳೆದು ನಿಂತಿದ್ದರು. ನನ್ನ ದೊಡ್ಡ ಅಭಿಮಾನಿಯಾಗಿದ್ದರು. ನಾನು ಏನೇ ಹೇಳಿದ್ರೂ ಅದರ ವಿರುದ್ಧ ನಿಲ್ಲುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ನನ್ನ ಬಗ್ಗೆ ಅಧಿಮಾನ ಇಟ್ಟಿದ್ದರು ಎಂದರು.
ಬಾಲಗೋಟೆಯಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗುವುದು ಸುಲಭದ ಮಾತಲ್ಲ. ಅವರೊಬ್ಬ ಜಾತ್ಯಾತೀತ ರಾಜಕಾರಣಿಯಾಗಿ ಎಲ್ಲರ ಮನ ಗೆದ್ದಿದ್ದರು.
ಹಾಗೇ ಇತ್ತೀಚೆಗೆ ನಿಧನರಾದ ಕಾಂಗ್ರೆಸ್ನ ಮತ್ತೋರ್ವ ಮಾಜಿ ಶಾಸಕ ಆರ್.ವಿ.ದೇವರಾಜ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶಿವಪ್ಪ ಶರಣಪ್ಪಗೌಡ ಪಾಟೀಲ್, ಖ್ಯಾತ ಕಾದಂಬರಿಗಾರ ಎಸ್.ಎಲ್. ಭೈರಪ್ಪ, ಸಾಲುಮರದ ತಿಮ್ಮಕ್ಕ ಮತ್ತು ಹಾಸ್ಯ ನಟ ಉಮೇಶ್ ಅವರಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದರು. ತಿಮ್ಮಕ್ಕ ಹೆಸರಿನಲ್ಲಿ ಪ್ರಶಸ್ತಿಗೂ ಸರಕಾರ ನಿರ್ಧರಿಸಿದೆ ಎಂದು ಸಿಎಂ ತಿಳಿಸಿದರು.


