Online News in ಕನ್ನಡ

`ಚುನವಣಾ ರಾಜಕಾರಣಕ್ಕೆ ಮರಳಿ ಬರಲ್ಲ’ :  ಮಾಜಿ ಸಚಿವ ಎಸ್.ಎ.ರಾಮದಾಸ್ ಭಾವುಕ ನುಡಿ

ಮೈಸೂರು: `ನಾನು ರಾಜಕೀಯ ಪ್ರವೇಶಿಸಿದ್ದೇ ಒಂದು ಆಕಸ್ಮಿಕ, ನನಗೆ ಮಿಲಿಟರಿಯಲ್ಲಿ ಕೆಲಸ ಮಾಡಬೇಕೆಂಬ ಆಸೆ ಇತ್ತು. ಆದರೆ, ನನಗೆ ಶಾಸಕನಾಗುವ, ಸಚಿವನಾಗುವ ಅವಕಾಶಗಳೂ ದೊರಕಿತು. ಆದರೆ, ಕೆಲ ಸನ್ನಿವೇಶಗಳು ನಾನು ರಾಜಕೀಯದಿಂದ ದೂರ ಉಳಿಯುವಂತ್ತೆ ಮಾಡಿದೆ. ನನಗೆ ಮುಂದೆ ಚುನಾವಣಾ ರಾಜಕೀಯ ಮಾಡಲು ಆಸಕ್ತಿ ಇಲ್ಲ’ . ನಾಲ್ಕು ಬಾರಿ ಶಾಸಕರಾಗಿ, ವೈದ್ಯಕೀಯ ಶಿಕ್ಷಣ ಸಚಿವರಾಗಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ ಬಳಿಕ ಸಾರ್ವಜನಿಕ ಜೀವನದಿಂದ ದೂರ ಸರಿಸಿದ್ದ ಎಸ್.ಎ.ರಾಮದಾಸ್ ಇಂದು ತಮ್ಮ ಮನದಾಳದ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.
ಮೈಸೂರು ನಗರ ಪತ್ರಿಕಾ ವಿತರಕರ ಸಂಘದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮತ್ತು ಸಾಧಕ ಪತ್ರಕರ್ತರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಧಿಕಾರ ಇದ್ದಾಗ ಸುತ್ತ ಸಾವಿರಾರು ಜನ ಇರುತ್ತಾರೆ, ಮರು ದಿನವೇ ಅಧಿಕಾರ ಕಳೆದುಕೊಂಡಾಗ ಒಬ್ಬರೂ ನಮ್ಮ ನಡುವೆ ಇರುವುದಿಲ್ಲ. ಈ ಎರಡೂ ಸ್ಥಿತಿಯನ್ನು ಸಮಚಿತ್ತದಿಂದ ಸ್ವೀಕರಿಸುವವನೇ ನಿಜವಾದ ನಾಯಕ. ನಾನೂ ಸಹ ಈ ಎರಡು ಸ್ಥಿತಿಯನ್ನು ಸಮಚಿತ್ತದಿಂದಲೇ ಸ್ವೀಕರಿಸಿದ್ದೇನೆ ಎಂದು ನುಡಿದರು.
ಶ್ರೀರಾಮನು ಪಟ್ಟಾಭಿಷೇಕ ಮಾಡುವ ಹಿಂದಿನ ದಿನ ಅವರಿಗೆ ಕಾಡಿಗೆ ತೆರಳಲು ಹೇಳಿದಾಗ ಆತ ಮರು ಮಾತನಾಡದೆ ತಂದೆಯ ಆದೇಶವನ್ನು ಪಾಲನೆ ಮಾಡಿದಂತೆ ನಾನು ರಾಮದಾಸನಾಗಿ ಪಕ್ಷದ ವರಿಷ್ಠರ ಆದೇಶವನ್ನು ಪಾಲನೆ ಮಾಡಿದ್ದೇನೆ. ಚುನಾವಣೆಯಲ್ಲಿ ನನಗೆ ಟಿಕೆಟ್ ಕೈತಪ್ಪುವ ಮುನ್ಸೂಚನೆ ಅರಿತಿದ್ದ ಕಾಂಗ್ರೆಸ್ಸಿನ ಓರ್ವ ಪ್ರಭಾವಿ ನಾಯಕರು ನನಗೆ ಕರೆ ಮಾಡಿ `ನೀವು ನಮ್ಮ ಪಕ್ಷಕ್ಕೆ ಬನ್ನಿ, ನಿಮ್ಮಿಂದ ಒಂದು ಪೈಸೆ ಹಣ ಖರ್ಚು ಮಾಡಿಸಲ್ಲ, ನೀವು ಗೆಲ್ಲುತ್ತೀರಿ’ ಎಂದು ಆಹ್ವಾನಿಸಿದ್ದರು. ಆದರೆ, `ರಾಜಕೀಯವಾಗಿ ಜನ್ಮ ಕೊಟ್ಟ ಪಕ್ಷವನ್ನು ತಾಯಿಯಂತೆ ಭಾವಿಸಿದ್ದೇನೆ. ತಾಯಿ ದ್ರೋಹ ಮಾಡಲು ಇಷ್ಟವಿಲ್ಲ. ನಿಮ್ಮ ವಿಶ್ವಾಸವಿರಲಿ’ ಎಂದು ಹೇಳಿದೆ. ಆದ್ದರಿಂದ ಈಗಲೂ ನಾನು ಬಿಜೆಪಿ ಪಕ್ಷಕ್ಕೆ ಮಾತ್ರ ನನ್ನ ನಿಷ್ಠೆ ಎಂದು ತಿಳಿಸಿದರು.

ಮಾನ್ಯತೆ ಪಡೆದ ಪತ್ರಕರ್ತರನ್ನು ಗುರುತಿಸಿರುವ ಮಾದರಿಯಲ್ಲಿಯೇ ಪತ್ರಿಕಾ ವಿತರಕರಿಗೂ ಸರಕಾರದ ಮಾನ್ಯತೆ ಬೇಕಾಗಿದೆ. ಆಗ ಮಾತ್ರ ಸರಕಾರದಿಂದ ಯೋಜನೆಗಳನ್ನು ಮತ್ತು ಸವಲತ್ತುಗಳನ್ನು ನೀಡಲು ಸಾಧ್ಯ. ಯಾರು ಸೈಕಲ್, ಸೂಟ್ಕರ್‍ನಲ್ಲಿ ಪತ್ರಿಕೆಗಳನ್ನು ಮನೆ ಮನೆಗೆ ತೆರಳಿ ಹಂಚುತ್ತಾರೆ ಅವರು ನಿಜವಾದ ವಿತರಕರು. ಸಾಮಾಜಿಕವಾಗಿ, ಆರ್ಥಿಕವಾಗಿ ಪತ್ರಕರ್ತರು ಮತ್ತು ಪತ್ರಿಕಾ ವಿತರಕರ ನಡುವೆ ತುಂಬಾ ವ್ಯತ್ಯಾಸವೇನೂ ಇಲ್ಲ. ಆದ್ದರಿಂದ ಪತ್ರಿಕಾ ವಿತರಕರನ್ನು ಸಹಕಾರ ಸಂಘದ ವ್ಯಾಪ್ತಿಗೆ ತರುವ ಬಗ್ಗೆ ಕಾನೂನಿನ ಸಲಹೆ ಪಡೆದು ಅಗತ್ಯ ಕ್ರಮಕೈಗೊಳ್ಳಲಾಗುವುದು
– ಕೆ.ದೀಪಕ್, ಅಧ್ಯಕ್ಷ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘ

ರಾಜಕೀಯವಾಗಿ ನಾನು ಮಾಡಿದ ಕೆಲಸ ನನಗೆ ತೃಪ್ತಿ ತಂದಿದೆ. ಕಾರ್ಮಿಕ ಸಂಘಟನೆಯ ಪ್ರತಿನಿಧಿಯಾಗಿ, ಪತ್ರಿಕಾ ವಿತರಕರ ಸಮಸ್ಯೆಗಳಿಗೆ ಧ್ವನಿಯಾಗಿ, ಜನರ ನಿರೀಕ್ಷೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ಈಗಲೂ ನಾನೇನು ಎಲ್ಲಯೂ ದೂರ ಸರಿದಿಲ್ಲ. ನಾನು ಒಂದಿಷ್ಟು ಜನ ಉಪಯೋಗಿ ಕೆಲಸದಲ್ಲಿ ತೊಡಗಿದ್ದೇನೆ. ಒಂದು ಸಾರ್ಥಕ ಜೀವನಕ್ಕಾಗಿ ಸಾಧನೆ ಮಾಡಬೇಕಿದೆ. ನನಗೆ ಈಗ ಆತ್ಮತೃಪ್ತಿಗೆ ಸೇವೆ ಮಾಡಬೇಕಾಗಿದೆಯೇ ವಿನಃ ರಾಜಕೀಯ ಉದ್ದೇಶಕ್ಕಲ್ಲ ಎಂದು ಭಾವೋದ್ದೇಗಕ್ಕೆ ಒಳಗಾಗಿ ನುಡಿದರು.
ವಿತರಕರಿಗೆ ವಿತರಣಾ ಕೇಂದ್ರ: ನಾವು ಒಂದು ಸಮಾಜದಲ್ಲಿ ಗುರುತಿಸಿಕೊಳ್ಳಲು ಪತ್ರಿಕಾ ವಿತರಕರ ಶ್ರಮವೂ ಇದೆ. ನಾವು ಬರೆದದ್ದನ್ನು ಓದುಗರಿಗೆ ತಲುಪಿಸುವ ಮೂಲಕ ನಮ್ಮ ಪ್ರತಿಭೆಗೆ ಪ್ರೋತ್ಸಾಹ ನೀಡಿದ್ದಾರೆ. ಇಂತಹ ವಿತರಕರಿಗೆ ಮೈಸೂರು ನಗರದಲ್ಲಿ ಸುರಕ್ಷಿತವಾಗಿರುವ ವಿತರಣಾ ಕೇಂದ್ರವನ್ನು ನಿರ್ಮಿಸಿಕೊಡಲು ಜಲದರ್ಶಿನಿಯಲ್ಲಿ ಜಾಗ ಗುರುತಿಸಲಾಗಿದೆ. ನಿಮ್ಮ ಬೇಡಿಕೆಗೆ ಅನುಗುಣವಾಗಿ ವಿತರಣಾ ಕೇಂದ್ರ ನಿರ್ಮಿಸಿಕೊಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಡಾ. ಕೆ.ಶಿವಕುಮಾರ್ ತಿಳಿಸಿದರು.
ಕನ್ನಡ ಪ್ರಭ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪದಕ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ನಮ್ಮ ಬರವಣಿಗೆಯನ್ನು ಓದುಗರಿಗೆ ತಲುಪಿಸಿ ನಮ್ಮನ್ನು ಯಶಸ್ವಿ ಪತ್ರಕರ್ತರನ್ನಾಗಿ ಮಾಡಿದವರಲ್ಲಿ ವಿತರಕರೂ ಪ್ರಮುಖರಾಗಿದ್ದಾರೆ. ಆದ್ದರಿಂದಲೇ ಬೆಂಗಳೂರಿನ ಕಾರ್ಯಕ್ರಮವನ್ನು ಬಿಟ್ಟು ವಿತರಕರ ಕಾರ್ಐಕ್ರಮಕ್ಕೆ ಬಂದಿದ್ದೇನೆ. ಅಸಂಘಟಿತ ವಲಯವನ್ನು ಒಂದು ಸೂರಿನಡಿ ತಂದ ಮಾಜಿ ಸಚಿವ ಎಸ್.ಎ.ರಾಮದಾಸ್ ಅವರು ಸಮಾಜಿಕವಾಗಿ ಮತ್ತೆ ಕ್ರಿಯಾಶೀಲರಾಗಬೇಕು ಎಂದು ಸಲಹೆ ನೀಡಿದರು.

Call Now Button