Online News in ಕನ್ನಡ

ಬಳ್ಳಾರಿ ದ್ವೇಷದ ದಳ್ಳುರಿ : ಜನಾರ್ಧನ ರೆಡ್ಡಿ, ಶ್ರೀರಾಮುಲು ಸೇರಿ 11 ಮಂದಿ ವಿರುದ್ಧ ಎಫ್‌ಐಆರ್‌

ಬಳ್ಳಾರಿ: ಗಣಿ ದೂಳಿನಿಂದಲೇ ಸದಾ ಸುದ್ದಿಯಾಗುತ್ತಿದ್ದ ಬಳ್ಳಾರಿ, ಇದೀಗ ರಾಜಕೀಯ ದ್ವೇಷದ ದಳ್ಳುರಿಗೆ ಸಾಕ್ಷಿಯಾಗಿದೆ. ಬ್ಯಾನರ್ ವಿಚಾರವಾಗಿ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ನಡುವಿನ ಸಂಘರ್ಷ ಓರ್ವ ಕಾಂಗ್ರೆಸ್‌ ಕಾರ್ಯಕರ್ತನನ್ನು ಬಲಿತೆಗೆದುಕೊಂಡಿದೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಸದ್ಯ ಬಳ್ಳಾರಿ ರಾಜಕೀಯ ದ್ವೇಷದ ಜ್ವಾಲೆಯಲ್ಲಿ ಹೊತ್ತಿ ಉರಿಯುತ್ತಿದೆ.
ನಾರಾ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿಯ ಖಾಸಗಿ ಗನ್ ಮ್ಯಾನ್ ನಡೆಸಿದ ಫೈರಿಂಗ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಗಾಳಿಯಲ್ಲಿ 12ಕ್ಕೂ ಹೆಚ್ಚು ಸುತ್ತು ಫೈರಿಂಗ್ ಮಾಡಲಾಗಿದೆ. ಆರಂಭದಲ್ಲಿ ಒಂದು ಬುಲೆಟ್ ಪತ್ತೆಯಾಗಿದ್ದು, ಇದೀಗ ಜನಾರ್ದನ ರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆಯಾಗಿದೆ.
ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕಾಂಗ್ರೆಸ್ ಕಾರ್ಯಕರ್ತ ಗುಂಡೇಟಿಗೆ ಬಲಿಯಾದ ಘಟನೆಗೆ ಸಂಬಂಧಿಸಿದಂತೆ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ಆಪ್ತ ಸಹಾಯಕ ಚಾನೆಲ್ ಶೇಖರ್ ನೀಡಿದ ದೂರಿನ ಆಧಾರದ ಮೇಲೆ ಇಂದು ಎಫ್‌ಐಆರ್ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ಜನಾರ್ದನ ರೆಡ್ಡಿ ಅವರನ್ನು ಮೊದಲ ಆರೋಪಿಯನ್ನಾಗಿ ಹೆಸರಿಸಲಾಗಿದೆ. ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ಅವರನ್ನು ಎರಡನೇ ಆರೋಪಿಯನ್ನಾಗಿ ಹೆಸರಿಸಲಾಗಿದೆ. ಮಾಜಿ ಸಚಿವ ಬಿ. ಶ್ರೀರಾಮುಲು ಅವರನ್ನು ಮೂರನೇ ಆರೋಪಿಯಾಗಿ, ಮತ್ತು ಬಳ್ಳಾರಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಶ್ರೀನಿವಾಸ್ ಮೋತ್ಕರ್ ಅವರನ್ನು ನಾಲ್ಕನೇ ಆರೋಪಿಯನ್ನಾಗಿ ಮಾಡಲಾಗಿದೆ. ಎಫ್‌ಐಆರ್‌ನಲ್ಲಿ ಒಟ್ಟು 11 ಜನರನ್ನು ಹೆಸರಿಸಲಾಗಿದೆ.
ಬಳ್ಳಾರಿ ಫೈರಿಂಗ್ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಬಳ್ಳಾರಿಗೆ ಭೇಟಿ ನೀಡಲಿದ್ದು, ದೊಡ್ಡ ಮಟ್ಟದಲ್ಲಿ ಹೋರಾಟ ರೂಪಿಸಲು ಮುಂದಾಗಿದ್ದಾರೆ.

Call Now Button