ಬೆಳಗಾವಿ, ಡಿಸೆಂಬರ್ 17, 2025 : ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ೧೧ ವರ್ಷದ ಆಡಳಿತದಲ್ಲಿ ೨ ಲಕ್ಷ ಕೋಟಿ ರೂ. ಸಾಲ ಮಾಡಿದ್ದು, ದೇಶವನ್ನು ಸಾಲದ ಕೂಪಕ್ಕೆ ತಳ್ಳಿದ್ದಾರೆ. ಇದನ್ನು ಮರೆಮಾಚಲು ಕಾಂಗ್ರೆಸ್ ನಾಯಕರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬಿಜೆಪಿಯವರ ಸುಳ್ಳು ಆರೋಪಗಳು, ಸುಳ್ಳು ಮೊಕದ್ದಮೆಗಳಿಗೆ ಕಾಂಗ್ರೆಸ್ ಕೈಕಟ್ಟಿ ಕೂರುವ ಪಕ್ಷವಲ್ಲ. ಇದರ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಮನಮೋಹನ್ ಸಿಂಗ್ ಅವರು ದೇಶದ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶದ ಸಾಲ ಸುಮಾರು 53.11 ಲಕ್ಷ ಕೋಟಿ ಆಗಿತ್ತು. ಆದರೆ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಸಾಲದ ಮೊತ್ತ ಸುಮಾರು 2 ಲಕ್ಷ ಕೋಟಿಯನ್ನೂ ಮೀರಿದೆ. ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದು 11 ವರ್ಷಗಳಲ್ಲಿ ಈ ಸಾಲದ ಮೊತ್ತವು 148 ಲಕ್ಷ ಕೋಟಿ ಹೆಚ್ಚಾಗಿದೆ. ಬಿಜೆಪಿಯವರು ತಮ್ಮ ಈ ತಪ್ಪನ್ನು ಮರೆಮಾಚಲು ಇಂತಹ ಸುಳ್ಳು ಪ್ರಕರಣಗಳ ಮೊರೆಹೋಗುತ್ತಿದೆ ಎಂದರು.
ಪ್ರಧಾನಿ ಮೋದಿಯವರ ಸುಳ್ಳು ಭರವಸೆ :
ಮೋದಿಯವರು ಅಧಿಕಾರಕ್ಕೆ ಬಂದ ತಕ್ಷಣ, ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದ್ದು, ಪ್ರತಿವರ್ಷ 2 ಕೋಟಿ ಉದ್ಯೋಗವನ್ನು ಸೃಷ್ಟಿಸುವುದಾಗಿ ಘೋಷಿಸಿದ್ದರು. ವಿದೇಶದಲ್ಲಿನ ಕಪ್ಪುಹಣವನ್ನು ದೇಶಕ್ಕೆ ತಂದು ದೇಶದ ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂ.ಗಳನ್ನು ನೀಡುವುದಾಗಿ ಹೇಳಿದರು. ಈ ಯಾವುದೇ ಭರವಸೆಗಳನ್ನು ಮೋದಿಯವರು ಈಡೇರಿಸಲಿಲ್ಲ. ಇತ್ತೀಚೆಗೆ ದೈನಂದಿನ ಬಳಕೆಯ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆಗಳು ಗಗನಕ್ಕೇರಿವೆ. ಬಿಜೆಪಿಯವರು ತಮ್ಮ ಇಂತಹ ತಪ್ಪುಗಳನ್ನು ಮರೆಮಾಚಲು , ಇಂತಹ ಸುಳ್ಳು ಪ್ರಕರಣಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ, ದೇಶದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.
ಬಿಜೆಪಿಯವರ ದ್ವೇಷದ ರಾಜಕಾರಣ
ಬಿಜೆಪಿಯವರ ದ್ವೇಷದ ರಾಜಕಾರಣ. ಕೇಂದ್ರ ಅಥವಾ ರಾಜ್ಯಗಳಾಗಲಿ, ಬಿಜೆಪಿ ಅಧಿಕಾರದಲ್ಲಿರುವ ಕಡೆಗಳೆಲ್ಲಾ ಕಾಂಗ್ರೆಸ್ ನವರನ್ನು ಗುರಿಯಾಗಿಸಿ, ಅವರನ್ನು ಅಪರಾಧಿಗಳಾಗಿ ಬಿಂಬಿಸಿ, ನ್ಯಾಯಾಲಯಕ್ಕೆ ಎಡತಾಕುವಂತೆ ಮಾಡುತ್ತಿದ್ದಾರೆ. ಇಂತಹ ಅಸತ್ಯವಾದ ವಿಚಾರವನ್ನು ಮುನ್ನಲೆಗೆ ತಂದು ಬಿಜೆಪಿಯು ದುರುದ್ದೇಶದಲ್ಲಿ ತೊಡಗಿದ್ದಾರೆ. ಬಿಜೆಪಿಯವರು ತಮ್ಮ ತಪ್ಪುಗಳನ್ನು ಮರೆಮಾಚಲು ಇಂತಹ ದುಷ್ಕೃತ್ಯಕ್ಕೆ ಕೈಹಾಕಿದ್ದಾರೆ. ಇಂದು ದೇಶದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ದೇಶದಲ್ಲಿ ಹಣದುಬ್ಬರ ಹೆಚ್ಚಿದ್ದು ನಿರುದ್ಯೋಗದ ಪ್ರಮಾಣ ಏರಿಕೆಯಾಗಿದೆ. ಜನರ ಮೇಲೆ ತೆರಿಗೆಗಳನ್ನು ಮನಬಂದಂತೆ ಹೇರಿ, ಭಾರತವನ್ನು ಸಾಲಗಾರ ದೇಶವನ್ನಾಗಿ ಮಾಡಲಾಗುತ್ತಿದೆ ಎಂದರು.
ಬಿಜೆಪಿಯವರಿಗೆ ಬಡವರ ಬಗ್ಗೆ ಕಾಳಜಿಯಿಲ್ಲ :
ಮಹಾತ್ಮಾಗಾಂಧಿ ಹಾಗೂ ಅಂಬೇಡ್ಕರ್ ರವರ ಚಿಂತನೆಗಳನ್ನು ಇಷ್ಟಪಡದ ಬಿಜೆಪಿಯವರಿಗೆ ಬಡವರನ್ನೂ ಕಂಡರೂ ಆಗುವುದಿಲ್ಲ. ದೇಶದ ಬಡವರಿಗೆಂದು ತಂದಿರುವ ಯಾವುದೇ ಯೋಜನೆಗಳಿಗೆ ಬಿಜೆಪಿಯವರ ಸಹಮತಿಯಿಲ್ಲ. ಬಡವರು, ದೀನದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರನ್ನು ಕಡೆಗಣಿಸುವ ಬಿಜೆಪಿಯವರು , ಕರ್ನಾಟಕದಲ್ಲಿ ಬಡವರಿಗಾಗಿ ತಂದ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದರು. ಆದರೆ ಈ ಜನಪರ ಯೋಜನೆಯನ್ನು ದೇಶದೆಲ್ಲೆಡೆ ಬಿಜೆಪಿ ಅನುಸರಿಸುತ್ತಿದೆ ಎಂದರು.
ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ :
ಇಂದು ಈ ತೀರ್ಪಿನ ಪರವಾಗಿ ಪ್ರತಿಭಟನೆಯನ್ನು ಕೈಗೊಂಡಿದ್ದು, ಸದನದ ಒಳಗೆ ಮತ್ತು ಹೊರಗೆ ಈ ಪ್ರತಿಭಟನೆಯನ್ನು ಮುಂದುವರೆಸಲಿದ್ದೇವೆ. ರಾಜ್ಯ ಹಾಗೂ ದೇಶದುದ್ದಕ್ಕೂ ಬಿಜೆಪಿಯ ಕುತಂತ್ರ ನೀತಿಯನ್ನು ವಿರೋಧಿಸಿ ಪ್ರತಿಭಟನೆಯನ್ನು ಕೈಗೊಳ್ಳುತ್ತೇವೆ. ಕಾಂಗ್ರೆಸ್ ಎಂದಿಗೂ ಕೈಕಟ್ಟಿ ಕೂರುವ ಪಕ್ಷವಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟದ್ದು ಕಾಂಗ್ರೆಸ್ ಪಕ್ಷ. ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ. ಆದರೆ ಈಗ ದ್ವೇಷ ರಾಜಕಾರಣವನ್ನು ಮಾಡುತ್ತಿದೆ. ಸುವರ್ಣಸೌಧದ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಂಡರು ಎಂದರು.


