ಮೈಸೂರು: ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗಳಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಒಳಮೀಸಲಾತಿ ವರದಿಯ ಸಮಸ್ಯೆ ಪೂರ್ಣವಾಗಿ ಬಗೆಹರಿಯುವ ತನಕ ಪ್ರಸ್ತುತ ಶೈಕ್ಷಣಿಕ ಮತ್ತು ಉದ್ಯೋಗಕ್ಕೆ ಅನ್ವಯಿಸುತ್ತಿರುವ ಕಾರ್ಯಚಟುವಟಿಕೆಗಳಿಗೆ ಶೀಘ್ರ ತಡೆಯಾಜ್ಞೆ ನೀಡಬೇಕೆಂದು ಮೈಸೂರು ವಿಶ್ವ ವಿದ್ಯಾನಿಲಯದ ಪರಿಶಿಷ್ಟ ಜಾತಿ ಬಲಗೈ ವಿದ್ಯಾರ್ಥಿಗಳ ಒಕ್ಕೂಟ ಒತ್ತಾಯಿಸಿದೆ.
ಈ ಸಂಬಂಧ ನಾಳೆ (ಮಂಗಳವಾರ) ಮೈಸೂರು ವಿವಿಯ ಮಾನಸಗಂಗೋತ್ರಿ ಆವರಣದಿಂದ ಹೊಸ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಬೃಹತ್ ಮೌನ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಮೈಸೂರು ವಿವಿ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ಕೆ.ಆರ್.ರಮೇಶ್ ತಿಳಿಸಿದ್ದಾರೆ.

ಕಾಂಗ್ರೆಸ್ ಸರಕಾರದಲ್ಲಿ ನಮ್ಮದೇ ಪ್ರಭಾವಿ ಸಚಿವರಾದ ಡಾ. ಹೆಚ್.ಡಿ.ಮಹಾದೇವಪ್ಪ, ಡಾ. ಜಿ. ಪರಮೇಶ್ವರ್, ಪ್ರಿಯಾಂಕ ಖರ್ಗೆ ಅಂತವರು ಇದ್ದೂ ಸಹ ಇಂತಹ ಅನ್ಯಾಯವಾಗುತ್ತಿದೆ. ಇವರಿಗೆ ಸಮುದಾಯದ ಹಿತಾಸಕ್ತಿಗಿಂತ ಅಧಿಕಾರವೇ ಹೆಚ್ಚಾಗಿದೆ. ಅಧಿಕಾರ ಬಿಟ್ಟು ಸಮುದಾಯದ ಪರ ಬಂದು ಹೋರಾಟಕ್ಕೆ ನಿಲ್ಲಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಡಾ. ನಟರಾಜ್ ಶಿವಣ್ಣ ಮಾತನಾಡಿ, ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯ ೧೦೧ ಜಾತಿಗಳ ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಡಾ. ಹೆಚ್.ಎನ್. ನಾಗಮೋಹನ್ ದಾಸ್ ವರದಿ ಅವೈಜ್ಞಾನಿಕವಾಗಿದ್ದು, ಈ ವರದಿಯಿಂದ ಪರಿಶಿಷ್ಟ ಜಾತಿ ಬಲಗೈ ವರ್ಗದ ೧೯ ಜಾತಿಗಳಿಗೆ ಹಾಗೂ ಆದಿ ಆಂಧ್ರ, ಆಧಿ ದ್ರಾವಿಡ ಮತ್ತು ಆಡಿ ಕರ್ನಾಟಕ ಜನರಿಗೆ ಸಮಾಜಿಕ ಅನ್ಯಾಯವಾತ್ತಿದೆ. ಇದನ್ನು ಸರಿಪಡಿಸದೆ ಅನೇಕ ವಿವಿಗಳಲ್ಲಿ ಉದ್ಯೋಗ ನೇಮಕಾತಿಗೆ ಮುಂದಾಗಿರುವುದು ಬಲಗೈ ಸಮುದಾಯಕ್ಕೆ ದ್ರೋಹವಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ಥಿತ್ವಕ್ಕೆ ಬದಲು ಪರಿಶಿಷ್ಟ ಜಾತಿಯ ಬಲಗೈ ಸಮುದಾಯವೇ ಕಾರಣ. ಕಳೆದ ಚುನಾವಣೆಯಲ್ಲಿ ಶೇ. ೮೦ಕ್ಕೂ ಹೆಚ್ಚು ಪ್ರಮಾಣದಲ್ಲಿ ಬಲಗೈ ಸಮುದಾಯ ಕಾಂಗ್ರೆಸ್ ಕೈ ಹಿಡಿದಿದೆ. ನಮ್ಮ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದಿರುವ ಸರಕಾರದಿಂದ ಅದೇ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದರೆ ನಂಬಲಾಗುತ್ತಿಲ್ಲ. ಈ ಬಗ್ಗೆ ನಮ್ಮ ಸಮುದಾಯವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳಿಗೆ ಏಕೆ ಇದು ಅರ್ಥವಾಗಿಲ್ಲ ಎಂದು ವಿಷಾದಿಸಿದರು.
ಸಂಶೋಧನ ವಿದ್ಯಾರ್ಥಿ ಲಿಂಗರಾಜು ಮಾತನಾಡಿ, ಸದರಿ ಹೊಸ ನೀತಿಯಿಂದಾಗಿ ಪರಿಶಿಷ್ಟ ಜಾತಿ ಎಲ್ಲ ಬಿ ಮತ್ತು ಸಿ ಕ್ಯಾಟಗರಿಗೂ ಅನ್ಯಾಯವಾಗಿರುವುದರಿಂದ ಹೊರ ಜಾತಿ ಪ್ರಮಾಣ ಪತ್ರವನ್ನು ವಿತರಿಸುವುದನ್ನು ತುರ್ತಾಗಿ ನಿಲ್ಲಿಸಬೇಕು ಮತ್ತು ಹಳೆ ಜಾತಿ ಪ್ರಮಾಣ ಪತ್ರವನ್ನೇ ಮುಂದುವರೆಸಬೇಕೆಂದು. ಈ ಗೊಂದಲಗಳು ಪರಿಹಾರವಾಗುವ ತನಕ ಹಳೇ ಮೀಸಲಾತಿಯನ್ನೇ ಅನ್ವಯಿಸಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಶೋಧನಾ ವಿದ್ಯಾರ್ಥಿಗಳಾದ ಡಾ. ಮನೋಜ್ ಕುಮಾರ್ ಎಂ.ಜಿ. ಕಾರ್ತಿಕ್, ವಿಶ್ವ ಪ್ರಸಾದ್ ಹಾಜರಿದ್ದರು.

