ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಈಗ ನಮ್ಮ ಜೊತೆ ಇಲ್ಲ/. ಅವರು ಬೇರೆ ಬೇರೆ ಮಹಾನ್ ನಾಯಕರ ಜೊತೆ ಇದ್ದಾರೆ. ಪಕ್ಷದ ಬಗ್ಗೆ ನಿಯತ್ತು, ನಿಷ್ಠೆ ಯಾವುದೂ ಇಲ್ಲದವರನ್ನು ನಾವು ಜೊತೆಯಲ್ಲಿ ಇಟ್ಟುಕೊಳ್ಳಬೇಕಾ ? ಎಂದು ಕೇಂದ್ರ ಸಚಿವ, ಜನತಾದಳ (ಜಾತ್ಯಾತೀತ) ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಇನ್ನು ಮುಂದೆ ಪದೇ ಪದೇ ಜಿ.ಟಿ.ದೇವೇಗೌಡರ ಹೆಸರನ್ನು ಪ್ರಸ್ತಾಪಿಸಬೇಡಿ. ನನ್ನ ಮನಸ್ಸಿಗೆ ಬಹಳ ನೋವಾಗುವ ಘಟನೆಗಳು ನಡೆದಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ʻರಾಜ್ಯದ ಇಂದಿನ ಪರಿಸ್ಥಿತಿ ನೋಡಿದರೆ ನಾನು ಇಲ್ಲೇ ಇರಬೇಕಿತ್ತು ಎನಿಸುತ್ತಿದೆ. ಕಾಲ ಬಂದಾಗ ಮತ್ತೆ ರಾಜ್ಯಕ್ಕೆ ಬರುತ್ತೇನೆʼ
– ಹೆಚ್.ಡಿ.ಕುಮಾರಸ್ವಾಮಿ, ಜಾತ್ಯಾತೀತ ಜನತಾದಳ ರಾಜ್ಯಾಧ್ಯಕ್ಷ
ಮುಡಾ ಹಗರಣದಲ್ಲಿ ನಮ್ಮನ್ನು ರಾಜೀನಾಮೆ ಕೊಡುತ್ತಾರಾ ಎಂದು ಕೇಳಿ ಸಿಎಂಗೆ ಸರ್ಟಿಫಿಕೆಟ್ ಕೊಡುತ್ತಾರೆ. ನಮಗೆ ಒಂದು ದಿನವೂ ಸರ್ಟಿಫಿಕೆಟ್ ಕೊಡಲಿಲ್ಲ. ಅವರನ್ನು ಜೊತೆಯಲ್ಲಿಟ್ಟುಕೊಂಡು ಓಡಾಡಬೇಕಾ ? ನಾನು ರಾಜೀನಾಮೆ ಕೊಡುವ ತಪ್ಪನ್ನು ಏನು ಮಾಡಿದ್ದೆ ಎಂದು ಮರು ಪ್ರಶ್ನೆ ಹಾಕಿದರು.
ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲು ಬಹಳಷ್ಟು ಜನ ಇದ್ದಾರೆ. ಅಲ್ಲಿ ಯಾರೇ ನಿಂತ್ತರೂ ಗೆಲ್ಲುತ್ತಾರೆ. ನನಗೂ ಚಾಮುಂಡೇಶ್ವರಿ ಕ್ಷೇತ್ರಕ್ಕೂ ಭಾವನಾತ್ಮಕ ಸಂಬಂಧವಿದೆ. ಇವರು ಬಹಳಷ್ಟು ಜನರನ್ನು ಮೆರೆಸಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ. ಈಗ ಯಾರೋ ಒಬ್ಬರನ್ನು ಮೆರಸಲು ಹೊರಟಿದ್ದಾರೆ. ಅವರಿಗೆ ನಿಯತ್ತು ಇದೆಯಾ ? ಪಕ್ಷದ ಕಾರ್ಯಕರ್ತರಿಗೆ ನೋವಾಗಬಾರದು ಎಂಬ ಕಾರಣಕ್ಕೆ ಈ ವಿಷಯ ಹೇಳುತಿದ್ದೇನೆ ಎಂದು ತಿಳಿಸಿದರು.
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ ಎಲ್ಲ 11 ಕ್ಷೇತ್ರಗಳಲ್ಲಿ ಜೆಡಿಎಸ್-ಬಿಜೆಪಿ ಅಭ್ಯರ್ಥಿಗಳು ಎಲ್ಲ ಕ್ಷೇತ್ರದಲ್ಲೂ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.

