Online News in ಕನ್ನಡ

ಅಲೆಮಾರಿ ಸಮುದಾಯಗಳ ಪ್ರತಿಭಟನೆಗೆ ಸಾಥ್‌ ನೀಡಿದ ಬಿಜೆಪಿ

ಬೆಂಗಳೂರು: ಪರಿಶಿಷ್ಟ ಜಾತಿಯ ಪ್ರವರ್ಗದಡಿಯಲ್ಲಿ ಒಳಮೀಸಲಾತಿಯನ್ನು ಅವೈಜ್ಞಾನಿಕವಾಗಿ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿ ನಗರದ ಫ್ರೀಡಂ ಪಾರ್ಕ್ ನಲ್ಲಿ ಬಂಜಾರ, ಭೋವಿ, ಕೊರಚ ಮತ್ತು ಕೊರಮ ಸಮುದಾಯಗಳು ನಡೆಸುತ್ತಿರುವ ಬೃಹತ್ ಧರಣಿಗೆ ಬಿಜೆಪಿ ಬೆಂಬಲ ನೀಡಿದೆ.

ಇಂದು ಪ್ರತಿಭಟನೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪಾಲ್ಗೊಂಡು ಧರಣಿಗೆ ಬೆಂಬಲ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿತಾಸಕ್ತಿಯನ್ನು ಕಡೆಗಣಿಸಿ ಆಡಳಿತ ನಡೆಸುತ್ತಿದೆ. ಶೋಷಿತ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಿ ದಮನಿತ ಸಮುದಾಯಗಳ ಒಗ್ಗಟ್ಟು ಮುರಿಯಲು ಹೊರಟಿದೆ. ಪರಿಶಿಷ್ಟ ಜಾತಿ ಸಮುದಾಯಗಳ 101 ಜಾತಿಗಳಲ್ಲಿ ಯಾವುದೇ ಒಂದು ಸಮುದಾಯಕ್ಕೆ ಅನ್ಯಾಯವಾಗದ ರೀತಿಯಲ್ಲಿ ಸರ್ವೋಚ್ಛ ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ಸರ್ಕಾರ ಒಳ ಮೀಸಲಾತಿಯನ್ನು ಹಂಚಿಕೆ ಮಾಡಲಿ. ಸದ್ಯ ಜಾರಿಗೆ ತಂದಿರುವ ಒಳ ಮೀಸಲಾತಿ ನೀತಿಯ ದೋಷಗಳನ್ನು ಈ ಕೂಡಲೇ ಸರಿಪಡಿಸಲಿ ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.


ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪಿ.ರಾಜೀವ್, ಮಾಜಿ ಸಚಿವರಾದ ಪ್ರಭು ಚೌಹಾಣ್, ಸುನೀಲ್ ವಲ್ಯಾಪುರೆ, ಮಾಜಿ ಸಂಸದರಾದ ಉಮೇಶ್ ಜಾಧವ್, ಶಾಸಕರಾದ ಮಾನಪ್ಪ ವಜ್ಜಲ್, ಎಂ. ಚಂದ್ರಪ್ಪ, ಚಂದ್ರು ಲಮಾಣಿ, ಕೃಷ್ಣ ನಾಯಕ್, ಡಾ. ಅವಿನಾಶ್ ಜಾಧವ್, ರಾಜ್ಯ ಕಾರ್ಯದರ್ಶಿ ಶರಣು ತಳ್ಳೀಕೆರೆ ಸೇರಿದಂತೆ ಸಮುದಾಯಗಳ ಪ್ರಮುಖರು ಉಪಸ್ಥಿತರಿದ್ದರು.

Call Now Button