ಮೈಸೂರು: ಮೈಸೂರಿನಲ್ಲಿ ಯಾವುದೇ ಡ್ರಗ್ಸ್ ತಯಾರಿಕಾ ಘಟಕ ಪತ್ತೆಯಾಗಿಲ್ಲ. ಅಥವಾ ಡ್ರಗ್ಸ್ ತಯಾರಿಸುವ ಯಾವ ಕಚ್ಛ ವಸ್ತುಗಳೂ ದೊರಕಿಲ್ಲ ಎಂದು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಮೈಸೂರಿಗಿಂದು ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನ್ಯಾಷನಲ್ ಕ್ರೈಂ ಬ್ಯೂರೋ ಅಧಿಕಾರಿಗಳು ನಗರಕ್ಕೆ ಭೇಟಿ ನೀಡಿದ್ದು ಹಳೆ ಪ್ರಕರಣದ ತನಿಖೆಯ ಮುಂದುವರೆದ ಭಾಗ ಅಷ್ಟೆ ಎಂದು ತಿಳಿಸಿದರು.
ಸದರಿ ಅಧಿಕಾರಿಗಳು ದಾಳಿ ಮಾಡಿದ ಘಟಕದಲ್ಲಿ ಫೆನಾಯಿಲ್ ತಯಾರಿಸಲಾಗುತಿತ್ತು. ಅಲ್ಲಿ ಯಾವುದೇ ರೀತಿಯ ಡ್ರಗ್ಸ್‌ಗೆ ಸಂಬಂಧಿಸಿದ ವಸ್ತುಗಳು ಪತ್ತೆಯಾಗಿಲ್ಲ. ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ವ್ಯಕ್ತಿಗಳ ಸಂಬಂಧಿಗಳು ಇಲ್ಲಿ ಇದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿ ಮಾಡಿ ವಿಚಾರಣೆ ನಡೆಸಿದ್ದಾರೆ. ಯಾರನ್ನೂ ವಶಕ್ಕೆ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವ ಜಾರ್ಜ್ ರಾಜೀನಾಮೆ ಒಂದು ಊಹಾಪೋಹ ಸುದ್ದಿ ಅಷ್ಟೆ. ಅವರ ಸುತ್ತ ಇರುವ ಗೆಳೆಯರೇ ಈ ವದಂತಿ ಹಬ್ಬಿಸಿದ್ದಾರೆ. ಈ ಬಗ್ಗೆ ಜಾರ್ಜ್ ಸ್ಪಷ್ಟೀಕರಣ ನೀಡಿದ್ದಾರೆ ಎಂದು ಗೃಹ ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಾಕಿಸ್ತಾನ ಜಿಂಚಾಬಾದ್ ಎಂದು ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ನ್ಯಾಯಾಲಯದಲ್ಲಿದೆ. ಈ ಬಗ್ಗೆ ವಿಚಾರಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.


