Online News in ಕನ್ನಡ

ಮೈಸೂರಿನಲ್ಲಿ ಸದ್ದು ಮಾಡಿದ ಜೆಸಿಬಿ: ಸರಕಾರಿ ಜಾಗ ಒತ್ತುವರಿ ತೆರವು

ಮೈಸೂರು: ಇಂದು ಮುಂಜಾನೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದು ಒತ್ತುವರಿ ಮಾಡಿಕೊಂಡಿದ್ದ ಸರಕಾರಿ ಜಾಗವನ್ನು ವಶಕ್ಕೆ ಪಡೆದಿದ್ದಾರೆ.
ಮೈಸೂರು ತಾಲ್ಲೂಕು ಕಸಬಾ ಹೋಬಳಿ ಹಿನಕಲ್ ಗ್ರಾಮದ ಸ.ನಂ 264 ರಲ್ಲಿ 6.13 ಎಕರೆ ಪ್ರದೇಶವನ್ನು ಒತ್ತುವರಿ ಮಾಡಿಕೊಳ್ಳಲಾಗಿತ್ತು.


ಸದರಿ ಜಮೀನನ್ನು ಮೈಸೂರು ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿಯು ವಿಜಯ ನಗರ ಬಡಾವಣೆ ನಿರ್ಮಾಣ ಮಾಡುವ ಉದ್ದೇಶಕ್ಕಾಗಿ ಸಾರ್ವಜನಿಕ ಉದ್ದೇಶಕ್ಕಾಗಿ 1984ರ ಮಾರ್ಚ್‌ 29ರಂದು ಅಧಿಸೂಚನೆಯನ್ನು ಹೊರಡಿಸಿತ್ತು. ನಂತರ 1986, ಏಪ್ರಿಲ್‌ 21ರಂದು ಸಾಮಾನ್ಯ ಅವಾರ್ಡ್ ನಿರ್ಣಯಿಸಿದ್ದು ಜಮೀನಿಗೆ ರೂ.98,670 ಭೂಪರಿಹಾರವನ್ನು ನಿಗಧಿಪಡಿಸಲಾಗಿತ್ತು.
ಭೂಸ್ವಾಧಿನ ಪ್ರಕ್ರಿಯೆಯನ್ನು ಪ್ರಶ್ನಿಸಿ ಅರತಮ್ಮ ಕೋಂ ಮಂಡ @ ತಮ್ಮಯ್ಯ ಮತ್ತು ಇತರರು ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಿದ ರಿಟ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮಾನ್ಯ ಉಚ್ಚ ನ್ಯಾಯಾಲಯವು 20.05.2014 ರಂದು ಹೊರಡಿಸಿದ ಆದೇಶದಲ್ಲಿ ರಿಟ್ ಅರ್ಜಿಯನ್ನು ತಿರಸ್ಕರಿಸಿ ಆದೇಶಿಸಿತ್ತು.
ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಮುಡಾ ಅಧಿಕಾರಿಗಳು ಪೊಲೀಸ್ ಭದ್ರತೆಯೊಂದಿಗೆ ತೆರಳಿ ಶೆಡ್‌ಗಳನ್ನು ತೆರವು ಮಾಡಿ ವಶಕ್ಕೆ ಪಡೆದರು.

Call Now Button