Online News in ಕನ್ನಡ

ಮೈಸೂರಿನಲ್ಲಿ ಆಪರೇಷನ್ ಪೊಲೀಸ್ : 14 ಮಂದಿ ಸಿಬ್ಬಂದಿಗಳ ವರ್ಗಾವಣೆ

ಮೈಸೂರು : ನಗರದಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ ಯಾದ ಬೆನ್ನಲ್ಲೇ ಮೈಸೂರು ನಗರದಲ್ಲಿ ಆಪರೇಷನ್ ಪೊಲೀಸ್ ಆರಂಭವಾಗಿದ್ದು ಸಿಸಿಬಿ ಘಟಕದ 10 ಮಂದಿಯನ್ನು ಎತ್ತಂಗಡಿ ಮಾಡಲಾಗಿದೆ. ಹಾಗೂ ರೌಡಿ ಪ್ರತಿಬಂಧಕ ದಳದ ಮೂವರು ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಯ ಆದೇಶವಾದ ಮರು ಕ್ಷಣವೇ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ.

ಬಹಳ ವರ್ಷಗಳ ಕಾಲ ಸಿಸಿಬಿಯಲ್ಲೇ ಉಳಿದಿದ್ದ ಶಿವಣ್ಣ, ದೊಡ್ಡಗೌಡ, ಅನಿಲ್, ರಾಜು, ಉಮಾ ಮಹೇಶ್ವರ್, ರಾಮಸ್ವಾಮಿ, ಪ್ರಕಾಶ್, ಗೋವಿಂದ ಸೇರಿದಂತೆ ಒಟ್ಟು 10 ಮಂದಿಯನ್ನು ವರ್ಗಾವಣೆ ಮಾಡಲಾಗಿದೆ.
ಇದರೊಂದಿಗೆ ರೌಡಿ ಪ್ರತಿಬಂಧಕ ದಳದ 3 ಸಿಬ್ಬಂದಿಯನ್ನೂ ಕೂಡಾ ವರ್ಗಾವಣೆ ಮಾಡಲಾಗಿದೆ.
ಮೈಸೂರಿನಲ್ಲಿ ಇತ್ತೀಚೆಗೆ ಡ್ರಗ್ ದಂಧೆ ನಿರೀಕ್ಷೆಗೂ ಮೀರಿ ನಡೆದಿದ್ದು, ಮಹಾರಾಷ್ಟ್ರ ಹಾಗೂ ಗುಜರಾತ್ ಪೊಲೀಸರು ಮೈಸೂರಿನ ಎರಡು ಕಡೆ ಎರಡು ಬಾರಿ ಪ್ರತ್ಯೇಕವಾಗಿ ದಾಳಿ ಮಾಡಿ ನೂರಾರು ಕೋಟಿ ರೂ. ಮೌಲ್ಯದ ಡ್ರಗ್ ಜಪ್ತಿ ಮಾಡಿದ್ದಲ್ಲದೆ, ಹಲವರನ್ನು ವಶಕ್ಕೆ ಪಡೆದಿದ್ದರು.
ಇದರಿಂದ ಅವಮಾನಕ್ಕೊಳಗಾದೆ ಮೈಸೂರು ನಗರ ಪೊಲೀಸರು ಡ್ರಗ್ ವಿರುದ್ಧ ನಡೆದ ವಿಶೇಷ ಕಾರ್ಯಾಚರಣೆ ನಡೆಸಿದ ವೇಳೆ ಹಲವಾರು ಮಂದಿ ಡ್ರಗ್ ಸಮೇತ ಸಿಕ್ಕಿಬಿದ್ದು ಜೈಲಿನಲ್ಲಿದ್ದಾರೆ.

ಡ್ರಗ್ ಜಾಲ ವ್ಯಾಪಕವಾಗಿ ಹರಡಿದ್ದರೂ, ಅದನ್ನು ಹತ್ತಿಕ್ಕುವಲ್ಲಿ ಸಿಸಿಬಿ ಘಟಕ ವಿಫಲವಾದ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಪೊಲೀಸ್‌ ಆಯುಕ್ತರು ವರ್ಗಾವಣೆಯ ಶಿಕ್ಷೆ ನೀಡಿದ್ದಾರೆ ಎನ್ನಲಾಗಿದೆ.ಈ  ಸಿಸಿಬಿ ಮತ್ತು ರೌಡಿ ಪ್ರತಿಬಂಧಕ ದಳ ಮೈಸೂರು ನಗರ ಪೊಲೀಸ್ ಇಲಾಖೆಯಲ್ಲಿ ಪ್ರಮುಖ ಭಾಗವಾಗಿದ್ದು, ಎರಡು ವಿಭಾಗಗಳನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ವರ್ಗಾವಣೆ ಮಾಡಲಾಗಿದೆ.

ಇದು ಮುಂದುವರಿ ಯಲಿದೆ ಎಂದು ನಗರ ಪೊಲೀಸ್‌ ಆಯುಕ್ತರಾದ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

Call Now Button