ಮೈಸೂರು : ರಾಜ್ಯದಲ್ಲಿ ಜಾತ್ಯತೀತ ಜನತಾದಳ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.
ಮೈಸೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಬಿಜೆಪಿ – ಜೆಡಿಎಸ್ ಸೇರಿ ಬಹುಮತ ಬಂದರೂ ಜೆಡಿಎಸ್ ಪಕ್ಷಕ್ಕೆ ಅಧಿಕಾರ ಕೊಡಲ್ಲ ಎಂದು ಅಭಿಪ್ರಾಯಪಟ್ಟರು.
ಹಾಸನದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಭಾಷಣ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಸುಮ್ಮನೆ ರಾಜಕೀಯವಾಗಿ ಭಾಷಣ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.
ಹೆಚ್.ಡಿ. ರೇವಣ್ಣ ಬಂಧಿಸಿದ ವಿಚಾರ ಕುರಿತ ಮಾತನಾಡಿ, ನಾವು ಯಾವುದೇ ಪ್ರಕರಣದಲ್ಲಿ
ತಲೆ ಹಾಕುವುದಿಲ್ಲ. ಪೊಲೀಸರು ಕಾನೂನಿನ ಪ್ರಕಾರ ಕ್ರಮಕೈಗೊಂಡಿದ್ದಾರೆ. ಇವರು ಸುಮ್ಮನೆ ಏನೇನೊ ಸುಳ್ಳು ಹೇಳುತ್ತಿದ್ದಾರೆ. ರೇವಣ್ಣ ಏನು ನಮ್ಮ ಶತ್ರುನಾ ? ಎಂದು ಸಿಎಂ ಪ್ರಶ್ನೆ ಹಾಕಿದರು.
ರಾಜ್ಯದಲ್ಲಿ ಬಿಜೆಪಿ ಅಥವಾ ಜೆಡಿಎಸ್ ಎಂದಿಗೂ ಅಧಿಕಾರಕ್ಕೆ ಬರಲ್ಲ. 2028ಕ್ಕೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರು.
ಫೆಬ್ರವರಿ 2ಕ್ಕೆ ಬಜೆಟ್ ತಯಾರಿಗೆ ಅಧಿಕೃತ ಸಭೆ ಆರಂಭವಾಗಲಿದೆ. ಈಗಾಗಲೆ ಸಿದ್ಧತೆ ನಡೆಯುತ್ತಿದೆ. ರಾಜ್ಯಕ್ಕೆ ಬಂಡಾವಳ ಹೂಡಿಕೆದಾರರೂ ಮುಕ್ತವಾಗಿ ಆಸಕ್ತಿ ತೋರುತ್ತಿದ್ದಾರೆ ಎಂದು ತಿಳಿಸಿದರು.
ರಾಜ್ಯಪಾಲರ ಭಾಷಣ ನಿರಾಕರಣೆ ಕುರಿತು ಮಾತನಾಡಿ, ಸಂವಿಧಾನದ ನಿಯಮವನ್ನು ಉಲ್ಲಂಘಿಸಿದ್ದಾರೆ. ಘಟನೆ ಬಗ್ಗೆ ಅವರು ರಾಷ್ಟ್ರಪತಿಗಳಿಗೆ ವಿವರಣೆ ನೀಡಬಹುದು. ನಾವು ನೀಡುವುದಿಲ್ಲ. ನಾಳೆ ಗಣರಾಜ್ಯೋತ್ಸದ ಬಗ್ಗೆ ಏನು ಮಾಡುತ್ತಾರೆ ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಿಲ್ಲಾಮಂತ್ರಿ ಡಾ. ಹೆಚ್.ಸಿ. ಮಹಾದೇವಪ್ಪ, ಎಂಎಲ್ಸಿ ಡಾ.ತಿಮ್ಮಯ್ಯ, ಡಿಸಿಸಿ ಅಧ್ಯಕ್ಷ ಡಾ. ವಿಜಯಕುಮಾರ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಹಾಜರಿದ್ದರು.


