Online News in ಕನ್ನಡ

ಕೆ.ಆರ್.ನಗರ: ಶ್ರೀರಾಮ ಸಕ್ಕರೆ ಕಾರ್ಖಾನೆ ಆರಂಭಕ್ಕೆ ರೈತರಿಂದ ಮುಖ್ಯಮಂತ್ರಿಗೆ ಮನವಿ

ಬೆಂಗಳೂರು: ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಿ ರೈತರಿಗಾಗುತ್ತಿರುವ ಸಾಗಾಣಿಕೆ ಹೊರೆಯನ್ನು ತಡೆಗಟ್ಟಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ರೈತ ಸಂಘ ಮನವಿ ಮಾಡಿದೆ.
ಕೆ.ಆರ್.ನಗರದ ಶಾಸಕ ಡಿ. ರವಿಶಂಕರ್‌ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ರೈತರು, ಶ್ರೀರಾಮ ಸಕ್ಕರೆ ಕಾರ್ಖಾನೆ ಸ್ಥಗಿತದಿಂದ ಸುತ್ತ ಮುತ್ತಲ 5 ತಾಲೂಕಿನ ಕಬ್ಬು ಬೆಳೆಗಾರರು 100ರಿಂದ 150 ಕಿ.ಮೀವರೆಗೆ ಸಾಗಾಣಿಕೆ ದರವನ್ನು ಭರಿಸಬೇಕಾಗಿದ್ದು ಇದಕ್ಕಾಗಿ 25ರಿಂದ 30 ಕೋಟಿ ರೂ. ಹಣ ವೆಚ್ಚವಾಗುತ್ತಿದೆ ಎಂದು ತಿಳಿಸಿದರು.


ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರಕಾರ ನಿಗದಿ ಮಾಡಿರುವ ಎಫ್‌ ಆರ್‌ ಸಿ ಬೆಲೆಯನ್ನು ಪರಿಶೀಲಿನ ರಾಜ್ಯ ಸರಕಾರ ಟನ್‌ ಕಬ್ಬಿಗೆ 5 ಸಾವಿರ ರೂ.ಗಳನ್ನು ನಿಗದಿ ಪಡಿಸಬೇಕು ಹಾಗೂ ದರ ನಿಗದಿಯಲ್ಲಿ ಉತ್ತರ, ದಕ್ಷಿಣ ಎಂಬ ತಾರತಮ್ಯ ಮಾಡಬಾರದು ಎಂದು ಮನವಿ ಮಾಡಿದರು.
ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳ ಮುಂಭಾಗ ಎಪಿಎಂಸಿ ಮೂಲಕ ತೂಕದ ಯಂತ್ರ ಅಳವಡಿಸಬೇಕು ಹಾಗೂ ಸಕ್ಕರೆ ಇಳುವರಿಯಲ್ಲಿ ಕಾರ್ಖಾನೆಗಳು ಮೋಸ ತೋರಿಸುತ್ತಿದ್ದು ಅದನ್ನು ತಪಿಸಲು ಪ್ರಯೋಗಾಲಯ ಲ್ಯಾಬ್‌ ಅನ್ನು ಸ್ಥಾಪಿಸಬೇಕೆಂದು ಎಂದೂ ಸಹ ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ರೈತರ ನಿಯೋಗದಲ್ಲಿ ಸಂಘದ ರಾಜ್ಯಾಧ್ಯಕ್ಷ ಬಿ.ರವಿ, ಉಪಾಧ್ಯಕ್ಷ ಅಂಕನಹಳ್ಳಿ ತಿಮ್ಮಪ್ಪ, ಅತ್ತಹಳ್ಳಿ ಸ್ವಾಮಿರಾಜ್‌, ಕೃಷ್ಣಪ್ಪ, ನಾಗರಾಜ್‌, ಶಿವರಾಜ್‌, ರವಿ ಸಿಹಳ್ಳಿ ಮೊದಲಾದವರು ಉಪಸ್ಥಿತರಿದ್ದರು.

Call Now Button