Online News in ಕನ್ನಡ

ಯುದ್ಧ ಮತ್ತು ಹಿಂಸೆ ದೃಶ್ಯ ಮಾದ್ಯಮದ ಪಾಲಿಗೆ ಮನರಂಜನೆ : ಪತ್ರಕರ್ತ ಕೆ.ದೀಪಕ್‌ ವಿಷಾದ

ಮೈಸೂರು: ಭಾರತದಲ್ಲಿ ಯುದ್ಧಗಳನ್ನು ದೃಶ್ಯ ಮಾಧ್ಯಮಗಳು ಮನರಂಜನೆಯನ್ನಾಗಿ ಬಿಂಬಿಸುತ್ತಿರುವುದು ಹಾಗೂ ದೇಶದ ರಕ್ಷಣೆಯ ವಿಷಯದಲ್ಲಿ ರಾಜಕೀಯ ಪಕ್ಷಗಳು ಕ್ಷುಲ್ಲಕ ರಾಜಕಾರಣ ಮಾಡುತ್ತಿರುವ ಪರಿಪಾಠ ಅತ್ಯಂತ ಅಪಾಯಕಾರಿ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್‌ ಕಳವಳ ವ್ಯಕ್ತಪಡಿಸಿದರು.
ನಗರದ ಆಲ್ಫಾ ಲೀಡ್‌ ಅಕಾಡೆಮಿಯ ವತಿಯಿಂದ ಇಂದು ನಡೆದ ರಕ್ಷಣಾ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮತ್ತು ಆಲ್ಫಾ ಲೀಡ್‌ ಗೆಜೆಟ್‌ ಪತ್ರಿಕೆಯ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಒಂದು ದೇಶದ ಬಲ ಮತ್ತು ಪ್ರಗತಿಯನ್ನು ಜಿಡಿಪಿ ಒಂದರಿಂದ ಅಳೆಯಲು ಸಾಧ್ಯವಿಲ್ಲ. ಬದಲಿಗೆ ಆ ದೇಶದ ರಕ್ಷಣಾ ವ್ಯವಸ್ಥೆಯೂ ಮುಖ್ಯವಾಗಿದೆ. ದೇಶದ ರಕ್ಷಣೆ ಮತ್ತು ಯುದ್ಧಗಳ ವಿಷಯದಲ್ಲಿ ಮಾಧ್ಯಮಗಳು ಹೆಚ್ಚು ಹೊಣೆಗಾರಿಕೆಯನ್ನು ಹೊಂದಿರಬೇಕು ಹಾಗೂ ರಾಜಕೀಯ ಪಕ್ಷಗಳು ತಮ್ಮ ತಮ್ಮ ರಾಜಕೀಯ ಲಾಭಕ್ಕೆ ದೇಶದ ರಕ್ಷಣಾ ವ್ಯವಸ್ಥೆಯನ್ನು ಅಣಕಿಸುವ, ಅನುಮಾನಿಸುವುದನ್ನು ಬಿಡಬೇಕು. ಇದರಿಂದ ದೇಶ ಕಾಯುವ ವೀರ ಯೋಧರ ಮನೋಬಲ ಕುಸಿಯಲಿದೆ. ಈನಿಟ್ಟಿಯಲ್ಲಿ ಪತ್ರಕರ್ತರಿಗೆ ಅಗತ್ಯ ತರಬೇತಿಯೂ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಭಾರತದಲ್ಲಿ ನಮ್ಮ ವೀರ ಯೋಧರು ಯುದ್ಧಗಳನ್ನು ಗೆದ್ದರೆ ಅಥವಾ ಯಶಸ್ವಿ ಕಾರ್ಯಾಚರಣೆ ನಡೆಸಿದರೆ ಅದರ ಲಾಭವನ್ನು ಆಡಳಿತ ರೂಢ ಪಕ್ಷಗಳು ತಮ್ಮ ಸಾಧನೆ ಎಂಬಂತೆ ಬಿಂಬಿಸುತ್ತಿವೆ. ದೇಶದ ಪ್ರಧಾನಿಯೇ ಯುದ್ಧ ಮಾಡಿ ಬಂದಂತೆ ಪ್ರಚಾರ ಪಡೆಯುತ್ತಿದ್ದಾರೆ. ಇದನ್ನು ಮಾಧ್ಯಮಗಳು ಮನರಂಜನೆಯ ವಿಷಯವಾಗಿ ಪ್ರಸಾರ ಮಾಡುತ್ತಿದ್ದಾರೆ. ಇದು ದೇಶದ ಹಿತಾಸಕ್ತಿಯಿಂದ ಅತ್ಯಂತ ಅಪಾಯಕಾರಿ ಎಂದು ನುಡಿದರು.
ನಮ್ಮ ಸೈನಿಕರು ದೇಶದ ಗಡಿಯನ್ನು ಕಾಯುತ್ತಿದ್ದರೆ, ಪತ್ರಕರ್ತರು ದೇಶದೊಳಗಿನ ಪ್ರಜಾಪ್ರಭುತ್ವವನ್ನು ಕಾಯುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಒಂದು ದೇಶ ಸುರಕ್ಷಿತವಾಗಿ ಮುನ್ನಡೆಯಬೇಕಾದಲ್ಲಿ ಸೈನಿಕರು ಮತ್ತು ಪತ್ರಕರ್ತರ ಕೊಡುಗೆ ಅಪಾರವಾದುದು. ಆದರೆ, ಇತ್ತೀಚೆಗೆ ದೇಶದ ಗಡಿಯಲ್ಲಿ ಸಂಭವಿಸಿದ ಭದ್ರತಾ ಲೋಪ, ಭಯೋತ್ಪಾದಕರ ದಾಳಿ, ಪ್ರತಿರೋಧದ ಕಾರ್ಯಾಚರಣೆಗಳ ಬಗ್ಗೆ ನಿಷ್ಪಕ್ಷಪಾತ ವರದಿಗಳನ್ನು ಮಾಡುವಲ್ಲಿ ವಿಫಲವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಇಂಡಿಯನ್‌ ಏರ್‌ ಫೋರ್ಸ್‌ನ ನಿವೃತ್ತ ಗ್ರೂಪ್‌ ಕ್ಯಾ. ವಿನಯ್‌ ವಿಠಲ್‌, ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕಾರ್ಯಾಂಗ, ಶಾಸಕಾಂತ ಮತ್ತು ನ್ಯಾಯಾಂಗ ಒಂದು ಭಾಗವಾದರೆ, ಪತ್ರಿಯೋದ್ಯಮ ಮತ್ತೊಂದು ಭಾಗವಾಗಿದೆ. ಆದ್ದರಿಂದ ದೇಶದ ಭದ್ರತೆ ಮತ್ತು ಯುದ್ಧಗಳ ವಿಷಯದಲ್ಲಿ ಮಾಧ್ಯಮಗಳು ಹೆಚ್ಚು ಹೊಣೆಗಾರಿಕೆಯನ್ನು ಹೊಂದಿರುತ್ತವೆ ಎಂದು ತಿಳಿಸಿದರು.
ಇದಕ್ಕು ಮುನ್ನ ಮೈಸೂರಿನ ಪತ್ರಕರ್ತರಾದ ಇಂಡಿಯನ್‌ ಎಕ್ಸ್‌ಪ್ರೆಸ್‌ನ ವರದಿಗಾರ ಕಾರ್ತಿಕ್‌ ನಾಯಕ್‌ ಮತ್ತು ಡೈಲಿ ಮೇಲ್‌ ಪತ್ರಿಕೆಯ ಪ್ರಸನ್ನಕುಮಾರ್ ಅವರಿಗೆ ರಕ್ಷಣಾ ಪತ್ರಿಕೋದ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಸ್ಥೆಯ ಮುಖ್ಯಸ್ಥ ನಿವೃತ್ತ ಗ್ರೂಪ್‌ ಕ್ಯಾ. ಅಭಿನವ್‌ ಚತುರ್ವೇದಿ, ಕಾರ್ತಿಕ್‌ ನಾಯಕ್‌, ಪ್ರಸನ್ನ ಕುಮರಾ, ಸ್ವಾತಿ ಎಂ. ಶೇಡ್‌, ನಿಶಾ, ಮಣಿಕಂಠ ಹಾಜರಿದ್ದರು.

Call Now Button