ಬೆಂಗಳೂರು: ದಿ.ದೇವರಾಜ ಅರಸು ರವರು ತಮ್ಮ ಅಧಿಕಾರಾವಧಿಯಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಮಾನತೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಮೈಸೂರು ರಾಜ್ಯವನ್ನು ‘ಕರ್ನಾಟಕ’ ಎಂದು ನಾಮಕಾರಣ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿ, ಸಮಾಜದ ಎಲ್ಲ ವರ್ಗಗಳಿಗೂ ನ್ಯಾಯ ಒದಗಿಸಲು ಶ್ರಮಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಹಿಂದುಳಿದ ವರ್ಗಗಳ ಕಲ್ಯಾಣ ಲಾಖೆ ವತಿಯಿಂದ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 110 ನೇ ಜನ್ಮದಿನಾಚರಣೆ ಹಾಗೂ ದೇವರಾಜ ಅರಸು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ದೇವರಾಜ ಅರಸು ಅವರು ಎಂಟು ವರ್ಷಗಳ ಕಾಲ ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಅವರ ನಂತರ ಹೆಚ್ಚು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದು ನಾನೇ. ಅವರಂತೆ ನಾನೂ ಮುಖ್ಯಮಂತ್ರಿಯಾಗಿ 5 ವರ್ಷಗಳನ್ನು ಪೂರೈಸಿದ್ದೇನೆ. ಈ ವಿಚಾರದಲ್ಲಿ ನಮ್ಮಿಬ್ಬರಿಗೂ ಸಾಮ್ಯತೆ ಇದೆ ಎಂದರು. ದೇವರಾಜ ಅರಸು ಅವರು ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥ ಬರಲು ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ದೊರಕಬೇಕೆಂದು ನಂಬಿದ್ದರು. ಇವುಗಳಿಲ್ಲದೇ ರಾಜಕೀಯ ಸ್ವಾತಂತ್ರ್ಯ ಸಾಧ್ಯವಿಲ್ಲ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರೂ ಹೇಳಿದ್ದರು. ಸಮಾಜದಲ್ಲಿ ಎಲ್ಲಿಯವರೆಗೆ ಅಸಮಾನತೆ ಇರುತ್ತದೆಯೋ ಅಲ್ಲಿಯವರೆಗೆ ಸ್ವಾತಂತ್ರ್ಯ ಸೌಧ ಗಟ್ಟಿಯಾಗಿರಲು ಸಾಧ್ಯವಿಲ್ಲ. ಅಸಮಾನತೆಯಿಂದ ನರಳುವ ಜನ ಎಂದಾದರೂ ಸ್ವಾತಂತ್ರ್ಯ ಸೌಧವನ್ನು ಧ್ವಂಸ ಮಾಡುತ್ತಾರೆ ಎಂದು ಹೇಳಿದ್ದರು. ಈ ವಿಚಾರದಲ್ಲಿ ಅಪಾರವಾದ ನಂಬಿಕೆಯನ್ನಿಟ್ಟವರು ದೇವರಾಜ ಅರಸು ಎಂದರು.
ಚಲನಶೀಲ ಸಮಾಜದಿಂದ ಮಾತ್ರ ಜಾತಿ ವ್ಯವಸ್ಥೆಗೆ ಮುಕ್ತಿ
ಬಸವಣ್ಣನವರು ಹನ್ನೆರಡನೇ ಶತಮಾನದಲ್ಲಿಯೇ ಇವನಾರವ ಎನ್ನದಿರಿ ಎಂದರು. ಆದರೆ ಜಾತಿ ವ್ಯವಸ್ಥೆಗೆ ಜಡತ್ವ ಇದೆ. ಇದಕ್ಕೆ ಚಲನೆ ಸಿಗಲು ಆರ್ಥಿಕ, ಸಾಮಾಜಿಕ ಬದಲಾವಣೆಗಳು ಆಗಬೇಕು. ಇಲ್ಲದಿದ್ದರೇ ಚಲನತಹಿತವಾಗಿರುತ್ತದೆ. ಬಸವಣ್ಣ, ಬುದ್ಧ, ಗಾಂಧಿ, ಅಂಬೇಡ್ಕರ್, ಯಾರು ಹೇಳಿದರೂ ಜಾತಿ ವ್ಯವಸ್ಥೆ ಹೋಗಿಲ್ಲ. ಚಲನಶೀಲತೆ ಸಿಕ್ಕಾಗ ಮಾತ್ರ ಜಾತಿ ವ್ಯವಸ್ಥೆ ಹೋಗಲು ಸಾಧ್ಯ. ಅದು ಅಷ್ಟು ಸುಲಭವಾಗಿ ಹೋಗುವಂತಿಲ್ಲ. ಇದಕ್ಕೆ ನೀರೆರೆಯುವ ಸಮಾಜಿಕ ಪಟ್ಟಭದ್ರ ಹಿತಾಸಕ್ತರು ಕೂಡ ಸಮಾಜದಲ್ಲಿ ಇದ್ದಾರೆ. ಇದು ಬದಲಾಗಲು ಸಾಮಾಜಿಕ ನ್ಯಾಯ, ಸಮಾನ ಅವಕಾಶಗಳು ಹಾಗೂ ಆರ್ಥಿಕ, ಸಮಾಜಿಕವಾಗಿ ಶಕ್ತಿ ಬರಬೇಕು ಎಂದರು.
ಭೂ ಸುಧಾರಣೆ ಕಾಯ್ದೆ ಜಾರಿ ಸುಲಭದ ಮಾತಾಗಿರಲಿಲ್ಲ
ವಿರೋಧದ ನಡುವೆಯೂ ಭೂ ಸುಧಾರಣೆ ಕಾಯ್ದೆಯ ಉಳುವವನಿಗೆ ಭೂಮಿ ಎನ್ನುವ ಕಾನೂನನ್ನು ಜಾರಿ ಮಾಡುವುದು ಸುಲಭದ ಮಾತಾಗಿರಲಿಲ್ಲ. ಹಾವನೂರು ಆಯೋಗವನ್ನು ರಚಿಸಿ ಹಿಂದುಳಿದವರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಜಾರಿ ಮಾಡಿದ್ದನ್ನು ಮೆಚ್ಚಲೇಬೇಕಾದ ಕೆಲಸ. ವಿಧಾನಸೌಧ ಕೆಲವೇ ಜನರ ಪ್ರಾತಿನಿಧಿಕ ಸಭೆಯಾಗಿರುವುದನ್ನು ಮನಗಂಡ ಅರಸುರವರು ಹಿಂದುಳಿದವರೂ ವಿಧಾನಸೌದದ ಮೆಟ್ಟಿಲನ್ನು ಹತ್ತುವಂತೆ ಮಾಡಿದರು. ಜೀತಪದ್ಧತಿ ಹಾಗೂ ಮಲಹೊರುವ ಪದ್ಧತಿ ನಿಷೇಧ, ಋಣಪರಿಹಾರ ಕಾಯ್ದೆ ಜಾರಿಗೆ ತಂದರು.
ಅನ್ನಕ್ಕಾಗಿ ಬಡವರು ಕೈಯೊಡ್ಡಬಾರದೆಂದು ಅನ್ನಭಾಗ್ಯ ಯೋಜನೆ ಜಾರಿ
ಅಕ್ಕಿ ಬಳಸುವುದೂ ಶ್ರೀಮಂತರ ಸ್ವತ್ತಾಗಿದ್ದ ಕಾಲದಲ್ಲಿ, ಹಿಂದುಳಿದವರಿಗೆ ಅನ್ನವೂ ಉಣ್ಣುವ ಪರಿಸ್ಥಿತಿ ಇರಲಿಲ್ಲ. ಆದ್ದರಿಂದ ರಾಜ್ಯದಲ್ಲಿ ಯಾರೊಬ್ಬರೂ ಅನ್ನಕ್ಕಾಗಿ ಕೈಒಡ್ಡಬಾರದೆಂಬ ಸದುದ್ದೇಶದಿಂದ ಅನ್ನಭಾಗ್ಯ ಯೋಜನೆಗೆಯನ್ನು ನಾನು ಜಾರಿಗೆ ತಂದೆನು. ಪ್ರಸ್ತುತ ಅನ್ನಭಾಗ್ಯಯೋಜನೆಯಡಿ 10 ಕೆಜಿ ಅಕ್ಕಿ ನೀಡಲಾಗುತ್ತಿದೆ ಎಂದು ಸಿಎಂ ತಿಳಿಸಿದರು.
ಯೋಗ್ಯ ವ್ಯಕ್ತಿಯನ್ನು ಪ್ರಶಸ್ತಿಗೆ ಆಯ್ಕೆ ಸಂತಸ ತಂದಿದೆ
ದೇವರಾಜ ಅರಸು ಅವರ ಹೆಸರಿನಲ್ಲಿ ಸರ್ಕಾರ ಪ್ರಶಸ್ತಿಯನ್ನು ನೀಡುತ್ತಿದ್ದು, ಈ ವರ್ಷ ಹಿರಿಯ ಪತ್ರಕರ್ತರಾದ ಕಲ್ಲೆ ಶಿವೋತ್ತಮ ರಾವ್ ಅವರು ಆಯ್ಕೆಯಾಗಿರುವುದು ಸಂತೋಷದ ವಿಚಾರ. ಅವರಿಗೆ ಬಹಳ ಹಿಂದೆಯೇ ಈ ಪ್ರಶಸ್ತಿ ದೊರೆಯಬೇಕಿತ್ತು. ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಿರುವುದು ನನಗೆ ಅತೀವ ಸಂತಸ ತಂದಿದೆ ಎಂದರು. ಕಲ್ಲೆ ಶಿವೋತ್ತಮ ರಾವ್ ಅವರೂ ಸಮಾಜವಾದಿ ಹಿನ್ನೆಲೆಯಿಂದ ಬಂದವರು. ಅನೇಕ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದು, ಸರ್ಕಾರವನ್ನು ಯಾವುದೇ ಮುಲಾಜಿಲ್ಲದೇ ನೇರವಾಗಿ ಟೀಕಿಸುತ್ತಿದ್ದರು. ನನ್ನನ್ನೂ ಕೂಡ ಟೀಕಿಸಿದ್ದಾರೆ. ಅವರಿಗೆ ಸರ್ಕಾರದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿ ಕಲ್ಲೆ ಶಿವೋತ್ತಮ ರಾವ್ ಅವರಿಗೆ 96 ವರ್ಷಗಳಾಗಿದ್ದು, ಅವರು ನೂರು ವರ್ಷಕ್ಕೂ ಹೆಚ್ಚು ಕಾಲ ಬಾಳಲಿ ಎಂದು ಹಾರೈಸಿದರು.
ಹಿಂದುಳಿದ ವರ್ಗಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಗ್ಯಾರಂಟಿ ಯೋಜನೆಗಳ ರಾಜ್ಯ ಮಟ್ಟದ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್, ಶಾಸಕರಾದ ರಿಜ್ವಾನ್ ಅರ್ಷದ್, ವಿಯಾನಂದ ಕಾಶಪ್ಪನವರ್, ಎ.ಆರ್ .ಕೃಷ್ಣಮೂರ್ತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಸೂರಜ್ ಹೆಗಡೆ, ಮಾಜಿ ಶಾಸಕ ಕೊಂಡಜ್ಜಿ ಮೋಹನ್ ಉಪಸ್ಥಿತರಿದ್ದರು.


