Online News in ಕನ್ನಡ

ಕೆಎಎಸ್‌ ಪರೀಕ್ಷಾ ಅಕ್ರಮ : ಸಂದರ್ಶನ ರದ್ದಿಗೆ ಆಗ್ರಹ

ಬೆಂಗಳೂರು: ಇತ್ತೀಚೆಗೆ ನಡೆದ ಕೆಎಎಸ್‌ ಮುಖ್ಯ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ಅನುಮಾನ ಮತ್ತು ಆರೋಪಗಳು ಕೇಳಿ ಬಂದಿರುವ ಹಿನ್ನಲ್ಲೆಯಲ್ಲಿ ಮಾರ್ಚ್‌ 23ರಂದು ನಡೆಯಲಿರುವ ಸಂದರ್ಶನವನ್ನು ರದ್ದುಪಡಿಸಬೇಕೆಂದು ಬಿಜೆಪಿ ಶಾಸಕ ವಿ. ಸುನೀಲ್‌ ಕುಮಾರ್‌ ಸರಕಾರವನ್ನು ಆಗ್ರಹಿಸಿದರು.
ಬಜೆಟ್‌ ಅಧಿವೇಶನದ ಚರ್ಚೆಯಲ್ಲಿ ಈ ವಿಷಯ ಪ್ರಸ್ತಾಪಿಸಿದರ ಅವರು, ಒಂದೇ ಪರೀಕ್ಷಾ ಕೊಠಡಿಯಿಂದ 15 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದರಲ್ಲೂ ಒಂದೇ ಕ್ರಮ ಸಂಖ್ಯೆಯವರು ಪಾಸಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೆ, ಒಂದೇ ಕುಟುಂಬದ ನಾಲ್ವರು ಉತ್ತೀರ್ಣರಾಗಿದ್ದು, ಮುಖ್ಯ ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆಗಳ ಕವರ್‌ ಓಪನ್‌ ಆಗಿತ್ತು ಎಂದು ಅಭ್ಯರ್ಥಿಗಳು ಆರೋಪಿಸಿ ಲಿಖಿತ ದೂರನ್ನೂ ಸಹ ನೀಡಲಾಗಿದೆ. ಆದರೆ, ಇದರ ಬಗ್ಗೆ ಸರಕಾರ ಸಮಗ್ರ ತನಿಖೆ ನಡೆಸಬೇಕಿದೆ ಎಂದು ಒತ್ತಾಯಿಸಿದರು.
ಕೆಪಿಎಸ್‌ಸಿ ಒಂದು ಬಗೆಯಲ್ಲಿ ಅಕ್ರಮಗಳ ಕೂಪವಾಗಿದೆ. ಒಂದು ನೇಮಕಾತಿ ಪ್ರಕ್ರಿಯೆ ಆರಂಭಗೊಂಡು ಮುಗಿಯುವವರೆಗೆ ನಾಲ್ಕು ಮಂದಿ ಕಾರ್ಯದರ್ಶಿಗಳು ಬದಲಾಗುತ್ತಾರೆ. ಇಲ್ಲಿ ನಡೆಯುವ ಅಕ್ರಮಗಳಿಗೆ ಯಾರು ಹೊಣೆ. ಹಾಗಾಗಿ, ಕೆಪಿಎಸ್‌ಸಿಯನ್ನು ಸಮಗ್ರವಾಗಿ ಬದಲಾವಣೆ ಮಾಡಬೇಕಾದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.
ಇಷ್ಟೆಲ್ಲ ಗೊಂದಲಗಳು ಇದ್ದರೂ ಮಾರ್ಚ್‌ 23ಕ್ಕೆ ಕೆಎಎಸ್‌ ಅರ್ಹ ಅಭ್ಯರ್ಥಿಗಳ ಸಂದರ್ಶನ ನಡೆಯುತ್ತಿದೆ. ಆದ್ದರಿಂದ ಸಂದರ್ಶನ ತಡೆಗಟ್ಟಿ ಸಮಗ್ರ ತನಿಖೆ ನಂತರ ಪ್ರಕ್ರಿಯೆ ಆರಂಭಿಸಬೇಕು ಮತ್ತು ಒಂದು ನೇಮಕಾತಿ ಪ್ರಕ್ರಿಯೆ ಆರಂಭಗೊಂಡ ನಂತರ ಅದು ಅಂತ್ಯವಾಗುವವರೆಗೂ ಒಂದೇ ಕಾರ್ಯದರ್ಶಿ ಇರಬೇಕು ಮತ್ತು ಅಕ್ರಮಗಳಿಗೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಸರಕಾರ ನಿರ್ಧರಿಸಬೇಕೆಂದು ಹೇಳಿದರು.

Call Now Button