ಮೈಸೂರು: ಮೈಸೂರು ಅರಮನೆ ಮಂಡಳಿ ವತಿಯಿಂದ ಅರಮನೆ ಆವರಣದಲ್ಲಿ ಆಯೋಜಿಸಲಾಗಿದ್ದ “ಅರಮನೆ ಫಲಪುಷ್ಪ ಪ್ರದರ್ಶನ-2025” ಕಾರ್ಯಕ್ರಮ, ಛಾಯಾಚಿತ್ರ ಪ್ರದರ್ಶನ, ಬೊಂಬೆ ಮನೆ ಹಾಗೂ ಕುಸ್ತಿ ಪಂದ್ಯಾವಳಿಗೆ ನರಸಿಂಹ ರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ಚಾಲನೆ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಅವರು ಮಾತನಾಡಿ ಮೈಸೂರು ಎಂದರೆ ದಸರಾ, ರೇಷ್ಮೆ,ವೀಳ್ಯದೆಲೆ, ರಸಬಾಳೆ, ಮೈಸೂರು ಮಹಾರಾಜರು ಕೊಡುಗೆಯಾಗಿ ನೀಡಿರುವ ಮೈಸೂರು ಸ್ಯಾಂಡಲ್ ಸಾಬೂನು, ಇನ್ನೂ ಅನೇಕ ವಿಚಾರಗಳಿಗೆ ತನ್ನದೇ ಆದಂತಹ ಹೆಸರು ಪಡೆದುಕೊಂಡಿದೆ. ಒಡೆಯರ ಸಂಸ್ಥಾನದವರು ಕಲೆ, ಪರಂಪರೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿರುವುದರಿಂದ ಮೈಸೂರು ದೊಡ್ಡ ಪ್ರಾಂತ್ಯವಾಗಿ ಬೆಳೆದು ನಿಂತಿದೆ ಎಂದು ಹೇಳಿದರು.

ಅರಮನೆಯ ವತಿಯಿಂದ ಫಲಪುಷ್ಪ ಪ್ರದರ್ಶನವನ್ನು ಬಹಳ ಅರ್ಥಪೂರ್ಣವಾಗಿ ಆಯೋಜನೆ ಮಾಡಲಾಗಿದ್ದು, ಮೈಸೂರಿನ ಸಂಸ್ಕೃತಿಯನ್ನು ಪರಂಪರೆಯನ್ನು ಸಾರುವ ಅನೇಕ ಕಾರ್ಯಕ್ರಮಗಳಲ್ಲಿ ಫಲಪುಷ್ಪ ಪ್ರದರ್ಶನವು ಕೂಡ ಒಂದಾಗಿದೆ. ಪ್ರವಾಸಿಗರನ್ನು ಹೆಚ್ಚು ಗಮನ ಸೆಳೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ ಅವರು ಮಾತನಾಡಿ ಮೈಸೂರಿನಲ್ಲಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ನಮ್ಮ ಸುಯೋಗ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರಿಗೆ ನೀಡಿರುವ ಕೊಡುಗೆ ಅಪಾರವಾದದ್ದು, ಕರ್ನಾಟಕದ ಅಭಿವೃದ್ಧಿಗೆ ಒಂದು ನೆಲೆಯನ್ನು ನೀಡಿದವರು. ಅವರು ಉಳಿಸಿಕೊಂಡು ಬಂದಂತಹ ಸಂಸ್ಕೃತಿಯನ್ನು ಬೆಳೆಸಿ ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀವತ್ಸ ಅವರು ಮಾತನಾಡಿ ಮೈಸೂರು ಎಂದರೆ ಚಾಮುಂಡಿ ಬೆಟ್ಟ ಅರಮನೆ ಹಾಗೂ ಇನ್ನಿತರೆ ಪ್ರವಾಸಿ ತಾಣಗಳು ಪ್ರಸಿದ್ಧಿ ಪಡೆದಿವೆ ಇದಕ್ಕೆಲ್ಲ ಕಾರಣ ನಮ್ಮ ಮಹಾರಾಜರು ಹಾಗಾಗಿ ಇಲ್ಲಿ ಯಾವಾಗಲೂ ಅನೇಕ ಕಾರ್ಯಕ್ರಮಗಳು ನಡೆಯುತ್ತವೆ ಇದರಿಂದ ಹಲವಾರು ಕಲಾವಿದರಿಗೆ ಅವಕಾಶಗಳು ಸಿಗಲಿದೆ, ಅದೇ ರೀತಿ ದಸರಾ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಅವಕಾಶ ಸಿಗದ ಕಲಾವಿದರಿಗೆ ಈ ಉತ್ಸವದಲ್ಲಿ ಆವಕಾಶ ನೀಡಲಾಗಿದೆ ಎಂದು ಅರಮನೆ ಮಂಡಳಿ ಅವರಿಗೆ ಧನ್ಯವಾದ ತಿಳಿಸಿದರು.
ವಿವಿಧ ಬಗೆಯ ಫಲಪುಷ್ಪಗಳಿಂದ ಕಲಾ ಕೃತಿಗಳ ನಿರ್ಮಾಣ :

ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಬಗೆಯ ಹೂಕುಂಡಗಳನ್ನು ಇಡಲಾಗಿದ್ದು, ಗುಲಾಬಿ, ಸೇವಂತಿಗೆ, ಆಸ್ಟರ್, ಆಂಟಿನಂ, ಜಲಿಯ ಸಾಲ್ವಿಯ, ಚೆಂಡು ಹೂ, ಸೂರ್ಯಕಾಂತಿ, ಹೂವುಗಳು ಸೇರಿದಂತೆ ಹಲವು ಬಗೆಯ ಹೂವುಗಳನ್ನು ಇಲ್ಲಿ ಕಾಣಬಹುದಾಗಿದೆ. ಶೃಂಗೇರಿಯ ಶಾರದಾಂಬೆ ದೇಗುಲ, ಸಾಲುಮರದ ತಿಮ್ಮಕ್ಕ, ಮುಮ್ಮಡಿ ಕೃಷ್ಣರಾಜ ಒಡೆಯರ್, ಸಂವಿಧಾನ ಪೀಠಿಕೆ, ಕಾಳಿಂಗ ಮರ್ದನ , ಯುದ್ಧ ನೌಕೆಗಳು, ಮಹಿಳಾ ಕ್ರಿಕೆಟ್ ಚಾಂಪಿಯನ್ ಕಪ್, ಸೇರಿದಂತೆ ಇನ್ನೂ ಹಲವು ವಿಭಿನ್ನ ಮಾದರಿಯ ಕಲಾ ಕೃತಿಗಳು ಹೂವಿನಿಂದ ಅರಳಿಸಲಾಗಿದ್ದು, ಪ್ರತಿಕೃತಿಗಳ ತಯಾರಿಕೆಗೆ ಸುಮಾರು 25 ಲಕ್ಷಕ್ಕೂ ಹೆಚ್ಚು ಹೂಗಳ ಬಳಕೆ ಮಾಡಲಾಗಿದೆ.

ಬೊಂಬೆ ಮನೆ, ಛಾಯಾಚಿತ್ರಗಳ ಪ್ರದರ್ಶನ ಹಾಗೂ ಕುಸ್ತಿ ಪಂದ್ಯಾವಳಿ ಆಯೋಜನೆ
ಪ್ರತಿ ವರ್ಷದಂತೆ ಈ ಬಾರಿಯೂ ಅರಮನೆಯ ಆವರಣದಲ್ಲಿ ಮೈಸೂರು ಅರಮನೆ ಮತ್ತು ರಾಜ ಮನೆತನಗಳ ಇತಿಹಾಸ ಹಾಗೂ ಸಂಸ್ಕೃತಿಗೆ ಸಂಬಂಧಿಸಿದಂತೆ ಛಾಯಾಚಿತ್ರಗಳ ಪ್ರದರ್ಶನ ಹಾಗೂ ವಿವಿಧ ಬೊಂಬೆಗಳ ಪ್ರದರ್ಶನ ವೀಕ್ಷಕರನ್ನು ಆಕರ್ಷಿಸಿದವು. ಇದರ ಜೊತೆಗೆ ಅರಮನೆಯ ವರಾಹ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ಕುಸ್ತಿ ಪಂದ್ಯಾವಳಿಯು ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಲು ಬಂದಂತಹ ನೋಡುಗರ ಗಮನ ಸೆಳೆಯಿತು.
ಸಂಗೀತ ಸಂಭ್ರಮ” ಕಾರ್ಯಕ್ರಮಕ್ಕೆ ಮನಸೋತ ವೀಕ್ಷಕರು
ಖ್ಯಾತ ಪಂಚಭಾಷಾ ಸಂಗೀತ ನಿರ್ದೇಶಕರಾದ ಮಣಿಕಾಂತ್ ಕದ್ರಿ ಹಾಗೂ ಖ್ಯಾತ ಬಾಲಿವುಡ್ ಗಾಯಕಿ ವಿದೂಷಿ ಹಂಸಿಕಾ ಅಯ್ಯರ್ ಮತ್ತು ತಂಡದವರಿoದ ಆಯೋಜಿಸಲಾಗಿದ್ದ “ಸಂಗೀತ ಸಂಭ್ರಮ” ಕಾರ್ಯಕ್ರಮವು ನೆರೆದಿದ್ದಂತಹ ಸಾವಿರಾರು ವೀಕ್ಷಕರನ್ನು ತನ್ನತ್ತ ಸೆಳೆಯುವುದರ ಮೂಲಕ ಮಧುರವಾದ ಸಂಗೀತಕ್ಕೆ ಮನಸೋಲುವಂತೆ ಮಾಡಿತು. ಫಲಪುಷ್ಪ ಪ್ರದರ್ಶನ ಹಾಗೂ ಅರಮನೆ ದೀಪಾಲಂಕಾರವು ಡಿಸೆಂಬರ್ 21 ರಿಂದ 31 ರವರೆಗೆ ನಡೆಯಲಿದ್ದು, ಫಲಪುಷ್ಪ ಪ್ರದರ್ಶನವು ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿದ್ದು, ಅರಮನೆ ವಿದ್ಯುತ್ ದೀಪಾಲಂಕಾರವು ಸಂಜೆ 7 ರಿಂದ 9 ರವರೆಗೆ ಇರಲಿದೆ.
ಈ ಸಂದರ್ಭದಲ್ಲಿ 2026 ನೇ ಸಾಲಿನ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರಾಮಪ್ಪ, ಜಿಲ್ಲಾಧಿಕಾರಿಗಳಾದ ಜಿ.ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳಾದ ಎಸ್. ಯುಕೇಶ್ ಕುಮಾರ್, ಮೈಸೂರು ಅರಮನೆ ಮಂಡಳಿಯ ಉಪ ನಿರ್ದೇಶಕರಾದ ಟಿ. ಎಸ್. ಸುಬ್ರಮಣ್ಯ, ಅವರು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.


