ಮಂಡ್ಯ (ಪಾಂಡವಪುರ) : ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಸಮಾರಂಭದಲ್ಲಿ ಬಾಬಾ ಸಾಹೇಬರ ಪಕ್ಕ ಬಾಬು ಜಗಜೀವನ ರಾಂ ಭಾವಚಿತ್ರ ಇರಿಸಿದ್ದು ಬಲಗೈ-ಎಡಗೈ ಸಮುದಾಯದ ನಡುವೆ ಸಂಘರ್ಷಕ್ಕೆ ಕಾರಣವಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ತಾಲೂಕು ಆಡಳಿತ ರದ್ದು ಪಡಿಸಿದ ಘಟನೆ ಜರುಗಿದೆ.
ಈನಡುವೆ, ತಾಲೂಕು ಆಡಳಿತದ ಅಧಿಕಾರಿಗಳು ಪದೇ ಪದೇ ಎಡಗೈ ಮತ್ತು ಬಲಗೈ ನಡುವೆ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದು, ಈ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಒಂದು ಗಂಟೆಗೂ ಹೆಚ್ಚು ಕಾಲ ಪಾಂಡವಪುರ ಮುಖ್ಯ ರಸ್ತೆ ತಡೆದು ಪ್ರತಿಭಘಟನೆ ನಡೆಸಲಾಯಿತು. ಇದರಿಂದ ಈ ಮಾರ್ಗದ ರಸ್ತೆ ಸಂಚಾರ ಅಸ್ಥವ್ಯಸ್ಥಗೊಂಡಿತ್ತು.

ಪಾಂಡವಪುರ ತಾಲೂಕು ಅಧಿಕಾರಿಗಳು ದಲಿತರ ವಿಷಯಗಳನ್ನು ಲಘುವಾಗಿ ಪರಿಗಣಿಸುತ್ತಿದ್ದಾರೆ. ಈ ಹಿಂದೆ ಎಸ್ಸಿ/ಎಸ್ಟಿ ಅಟ್ರಾಸಿಟಿ ಜಾಗೃತಿ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳನ್ನು ಆಹ್ವಾನಿಸಲಾಗಿತ್ತು. ಆದರೆ, ಕೆಲವರ ಕುಮ್ಮಕ್ಕಿನಿಂದ ಕಾರ್ಯಕ್ರಮಕ್ಕೆ ಬಾರದಂತೆ ತಡೆಯಲಾಯಿತು. ಇದೀಗ ಅಂಬೇಡ್ಕರ್ ಜಯಂತಿ ವೇಳೆ ಜಗಜೀವನ ರಾಮ್ ಭಾವಚಿತ್ರವಿಟ್ಟು ಬಲಗೈ ಸಮುದಾಯದ ಭಾವನೆಗೆ ಧಕ್ಕೆ ತಂದಿದೆ. ಇದಕ್ಕೆ ಕಾರಣರಾದ ತಹಶೀಲ್ದಾರ್ ಬಸವರೆಡ್ಡಪ್ಪ ರೋಣದ ಹಾಗೂ ಸಮಾಜ ಕಲ್ಯಾಣ ಅಧಿಕಾರಿ ಕೋಮಲ ಅವರನ್ನು ಅಮಾನತ್ತು ಪಡಿಸಬೇಕು
– ಯೋಗೇಶ್, ದಲಿತ ಮುಖಂಡರು

ಘಟನೆ ವಿವರ:
ಪಾಂಡವಪುರ ತಾಲೂಕು ಆಡಳಿತವು ತಾಲೂಕು ಪಂಚಾಯ್ತಿ ಕಚೇರಿ ಆವರಣದಲ್ಲಿ ಇಂದು ಡಾ.ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಆಯೋಜಿಸಲಾಗಿತ್ತು. ತಹಶೀಲ್ದಾರ್ ಬಸವರೆಡ್ಡಪ್ಪ ರೋಣದ, ಸಮಾಜ ಕಲ್ಯಾಣಾಧಿಕಾರಿ ಕೋಮಲಾ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ವೀಣಾ, ಪ್ರಧಾನ ಭಾಷಣಕಾರರಾಗಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.
ಬೆಳಗ್ಗೆ ಬಾಬಾ ಸಾಹೇಬರ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆದು ಕಾರ್ಯಕ್ರಮದ ಸ್ಥಳಕ್ಕೆ ಸಾರ್ವಜನಿಕರು ಆಗಮಿಸಿದರು. ಜಯಂತಿ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಜರುಗಿತು. ನಂತರ ವೇದಿಕೆ ಕಾರ್ಯಕ್ರಮ ಆರಂಭಗೊಳ್ಳುವ ಸಂದರ್ಭದಲ್ಲಿ ಬಲಗೈ ಸಮುದಾಯದ ಸ್ಥಳೀಯ ಮುಖಂಡರು ವೇದಿಕೆಯ ಮೇಲೆ ಡಾ. ಅಂಬೇಡ್ಕರ್ ಭಾವಚಿತ್ರದ ಜೊತೆ ಬಾಬು ಜಗಜೀವನ ರಾಮ್ ಭಾವಚಿತ್ರವನ್ನು ಇಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಏಪ್ರಿಲ್ 5ರಂದು ನಡೆದ ಬಾಬು ಜಗಜೀವನ ರಾಂ ಜಯಂತಿ ವೇಳೆ ಡಾ. ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟಿರಲಿಲ್ಲ. ಈಗ ಅಂಬೇಡ್ಕರ್ ಜಯಂತಿಯಲ್ಲಿ ಜಗಜೀವನ ರಾಂ ಅವರ ಭಾವಚಿತ್ರ ಏಕೆ ಇಡಬೇಕು. ಯಾರೋ ಒಬ್ಬ ಎಡಗೈ ನಾಯಕರ ಕುಮ್ಮಕ್ಕಿಗೆ ಮಳಿದು ತಾಲೂಕು ಆಡಳಿತದ ಅಂಬೇಡ್ಕರ್ ಅವರನ್ನು ಅವಮಾನ ಮಾಡಿದೆ ಎಂದು ಆರೋಪಿಸಲಾಯಿತು. ನೆರೆದಿದ್ದವರೆಲ್ಲ ಏಕಾಏಕಿ ತಾಹಶೀಲ್ದಾರ್ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅಂಬೇಡ್ಕರ್ ಅವರ ಮೆರವಣಿಗೆಗೂ ಮುನ್ನ ಕೇವಲ ಅಂಬೇಡ್ಕರ್ ಭಾವಚಿತ್ರವಿತ್ತು, ಮೆರವಣಿಗೆ ಮುಗಿಯುವ ವೇಳೆಗೆ ಜಗಜೀವನ ರಾಮ್ ಫೋಟೋ ಬಂದಿದ್ದು ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ಸಮಂಜಸವಾದ ಉತ್ತರ ನೀಡಲು ಅಧಿಕಾರಿಗಳು ವಿಫಲರಾದರು. ಈ ಹಿಂದೆ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾರ್ಯಕ್ರಮದಲ್ಲೂ ಬಲಗೈ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದರು. ಏಕವಚನದಲ್ಲೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲಾಯಿತು.
ಪರಿಸ್ಥಿತಿ ಅತಿರೇಖಕ್ಕೆ ತಿರುಗಿ ವೇದಿಕೆ ಏರಿದ ಎಡ-ಬಲ ಸಮುದಾಯದ ಮುಖಂಡರು ಅಧಿಕಾರಿಗಳತ್ತ ಮುಗಿಬಿದ್ದರು. ಹೆಚ್ಚಿನ ಪೊಲೀಸ್ ವ್ಯವಸ್ಥೆ ಇಲ್ಲದಿದ್ದ ಕಾರಣ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇತ್ತು. ಇನ್ನೇನು ಕಾರ್ಯಕ್ರಮ ಮುಂದುವರೆಸುವುದು ಸೂಕ್ತವಲ್ಲ ಎಂಬ ಕಾರಣಕ್ಕೆ ಜಯಂತಿ ಕಾರ್ಯಕ್ರಮವನ್ನು ಮುಂದೂಡಲಾಯಿತು.
ರಸ್ತೆ ತಡೆದು ಪ್ರತಿಭಟನೆ:
ತದನಂತರ, ಉದ್ರಿಕ್ತ ಬಲಗೈ ಸಮುದಾಯದ ಮುಖಂಡರು ಪಾಂಡವಪುರ ಸರ್ಕಲ್ ಬಳಿ ರಸ್ತೆ ತಡೆದು ಪ್ರತಿಭಟನೆಗೆ ಮುಂದಾದರು. ಸುಮಾರು 45 ನಿಮಿಷಗಳಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ ಪರಿಣಾಮ ನೂರಾರು ವಾಹನಗಳು ನಿಂತಲ್ಲೇ ನಿಂತು ವಾಹನ ಸಂಚಾರ ಅಡಚಣೆ ಉಂಟಾಯಿತು. ಪದೇ ಪದೇ ದಲಿತರ ವಿಷಯದಲ್ಲಿ ಎಡ-ಬಲ ಸಮುದಾಯವನ್ನು ಎತ್ತಿಕಟ್ಟುತ್ತಿರುವ ತಾಲೂಕು ಆಡಳಿತದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

