ಮೈಸೂರು: ನಾಡಹಬ್ಬ ದಸರಗೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಎಲ್ಲೆಡೆ ವಿವಿಧ ಕಾರ್ಯಕ್ರಮಗಳು ಸಡಗರದಿಂದ ನಡೆಯುತ್ತಿವೆ. ಇದೇ ರೀತಿ ಮಹಿಷ ದಸರಾ ಆಚರಣೆಗೆ ಕೆಲವು ಸಂಘಟನೆಗಳು ಮುಂದಾಗಿದ್ದು, ಇದಕ್ಕೆ ಪೊಲೀಸರು ತಡೆ ನೀಡಿದ್ದಾರೆ.
ಚಾಮುಂಡಿ ಬೆಟ್ಟದ ಮೇಲೆ ಇರುವ ಮಹಿಷ ವೃತ್ತದ 200 ಮೀಟರ್ ಸುತ್ತಲೂ ಸೆಕ್ಷನ್ 144 ಹೇರಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಮಧ್ಯರಾತ್ರಿಯಿಂದಲೇ ನಿಷೇದಾಜ್ಞೆ ಜಾರಿಯಾಗಿದ್ದು ನಾಳೆ ಬೆಳಿಗ್ಗೆ ಆರು ಗಂಟೆ ವರೆಗೂ ಈ ನಿರ್ಬಂಧ ಮುಂದುವರಿಯಲಿದೆ. ಒಂದು ಕಡೆ ಮಹಿಷ ದಸರಾ ಆಚರಣೆ ಸಮಿತಿಯವರಿಂದ ಮಹಿಷ ಮೂರ್ತಿಗೆ ಪುಷ್ಪಾರ್ಚೆನೆ ಮಾಡಲು ಅನುಮತಿ ಕೋರಲಾಗಿತ್ತು. ಇದಕ್ಕೆ ನಿರಾಕರಿಸಿರುವ ಪೊಲೀಸರು ನಿಷೇದಾಜ್ಞೆ ಜಾರಿ ಮಾಡಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಇದರಿಂದಾಗಿ ಮಹಿಷ ಪ್ರತಿಮೆಯ ಇನ್ನೂರು ಮೀಟರ್ ಅಂತದಲ್ಲಿ ಯಾವುದೇ ಸಭೆ, ಸಮಾರಂಭ, ಮೆರವಣಿಗೆ ನಡೆಸುವಂತಿಲ್ಲ. ಕೆಲವು ಪ್ರಗತಿಪರ, ಕಮ್ಯುನಿಸ್ಟ್ ಸಂಘಟನೆಗಳು ಕಳೆದ ಒಂದೆರಡು ವರ್ಷಗಳಿಂದ ಮಹಿಷ ದಸರಾ ನಡೆಸುತ್ತಿವೆ. ಈ ವರ್ಷ ಬಾನು ಮುಷ್ತಾಕ್ ಅವರಿಂದ ಉದ್ಘಾಟನೆಯ ಹಿನ್ನೆಲೆಯಲ್ಲಿ ಈ ಮಹಿಷ ದಸರಾ ನಡೆಯಲಿದೆಯೇ ಎನ್ನುವ ಅನುಮಾನ ಇತ್ತು. ಅದರ ಜೊತೆಗೆ ಪ್ರೊ.ಮಹೇಶ ಚಂದ್ರ ಗುರು ಅವರು ಈ ಹಿಂದೆ ಮಹಿಷ ದಸರಾ ಆಚರಣೆಗೆ ನೇತೃತ್ವ ವಹಿಸಿಕೊಳ್ಳುತ್ತಿದ್ದರು. ಅವರ ನಿಧನದ ಬಳಿಕ ಮಹಿಷ ದಸರಾ ಆಚರಣೆಯ ಕೂಗು, ಅದಕ್ಕೆ ಸಂಬಂಧಿಸಿದ ಕಾರ್ಯಚಟುವಟಿಕೆಗಳು ಕಡಿಮೆ ಆಗುತ್ತಿವೆ ಎನ್ನುವ ಅಭಿಪ್ರಾಯಗಳೂ ಕೇಳಿ ಬರುತ್ತಿವೆ.


