೨೬ ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಶಾಸಕ ರವಿಕುಮಾರ್‌ಗೌಡ
ಮಂಡ್ಯ: ಮಂಡ್ಯ ನಗರಕ್ಕೆ ಹೈಟೆಕ್ ಸ್ಪರ್ಶ ಹಿನ್ನಲೆಯಲ್ಲಿ ತಲೆ ಎತ್ತಲಿರುವ ನಾಡಪ್ರಭು ಕೆಂಪೇಗೌಡರ ಬೃಹತ್ ಪ್ರತಿಮೆಯನ್ನು ನಿರ್ಮಾಣ ಮಾಡುವ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಮುಂದಾಗಿದ್ದಾರೆ. ಮಂಡ್ಯ ಶಾಸಕ ರವಿಕುಮಾರ್ ಗೌಡ ಅವರ ಇಚ್ಛಾಶಕ್ತಿಯಿಂದಾಗಿ ನಾಡಪ್ರಭು ಕೆಂಪೇಗೌಡರ ಬೃಹತ್ ಪ್ರತಿಮೆ ಸಕ್ಕರೆ ನಾಡಿನಲ್ಲಿ ತಲೆಯೆತ್ತಲಿದೆ.

ಈ ಸಂಬಂಧ ಇಂದು ಶಾಸಕ ರವಿಕುಮಾರ್ ಗೌಡ ಅವರು ಶಿಲ್ಪಿ ಅರುಣ್ ಯೋಗಿರಾಜ್ ಅವರೊಂದಿಗೆ ಪ್ರತಿಮೆ ನಿರ್ಮಾಣ ಮಾಡುವ ಪ್ರಮುಖ ಸಂಜಯ್ ವೃತ್ತದಲ್ಲಿ ಸ್ಥಳ ಪರಿಶೀಲನೆ ನಡೆಸಿದರು. ಸುಮಾರು ೨೬ ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆಯನ್ನು ೨ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಇದೇ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ರವಿಕುಮಾರ್‌ಗೌಡ, ಮಂಡ್ಯಕ್ಕೆ ಹೊಸ ಸ್ಪರ್ಶ ನೀಡಲು ಮುಂದಾಗಿದ್ದು, ಈಗಾಗಲೇ ಮಂಡ್ಯವನ್ನು ಗುಂಡಿ ಮುಕ್ತ ನಗರವನ್ನಾಗಿ ಮಾಡಿದ್ದೇನೆ. ಈಗ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಮಾಡುವ ಅವಕಾಶ ದೊರಕಿದೆ. ಈ ಕಾರ್ಯವನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಮೆಯನ್ನು ನಿರ್ಮಾಣ ಮಾಡಿ ದೇಶದ ಗಮನ ಸೆಳೆದಿದ್ದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆಂಪೇಗೌಡರ ಪ್ರತಿಮೆ ನಿರ್ಮಾಣದ ಜವಾಬ್ದಾರಿಯನ್ನು ತೆಗೆದುಕೊಂಡಿದ್ದು, ಈ ಸಂಬಂಧ ಅವರು ಮಾತನಾಡಿ, ನಾಡಪ್ರಭು ಕೆಂಪೇಗೌಡರ ಚರಿತ್ರೆ, ವ್ಯಕ್ತಿತ್ವ, ಸಾಧನೆಗಳನ್ನು ಗಮನದಲ್ಲಿ ಇಟ್ಟುಕೊಂಡು ವರ್ತಮಾನದ ಕೆಂಪೇಗೌಡರ ಪ್ರತಿಮೆಯನ್ನು ನಿರ್ಮಿಸಲಾಗುವುದು. ಮಂಡ್ಯ ನಮ್ಮ ತಾಯಿಯ ಊರಾದ್ದರಿಂದ ನಮಗೆ ವಿಶೇಷ ಅಭಿಮಾನ ಇದೆ ಎಂದು ತಿಳಿಸಿದರು.
ಮುಡಾ ಅಧ್ಯಕ್ಷ ಬಿಪಿ ಪ್ರಕಾಶ್, ನಗರಸಭೆ ಮಾಜಿ ಅಧ್ಯಕ್ಷ ಮಂಜು, ಕೃಷ್ಣ ಸೇರಿ ಹಲವರು ಉಪಸ್ಥಿತರಿದ್ದರು.

