ರಾಜ್ಯ ಹಾಗೂ ಮೈಸೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮೈಸೂರಿನ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿನಿಧಿ ಫೌಂಡೇಶನ್ ಮತ್ತು ಜಿಎಸ್ಎಸ್ ಮಾಧ್ಯಮದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ನಗರದ ಜೆಎಲ್ಬಿ ರಸ್ತೆಯಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ನ ಸಭಾಂಗಣದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ರಾಜ್ಯ ಸರ್ಕಾರದ ವತಿಯಿಂದ ನೀಡಲಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಹಿರಿಯ ಪತ್ರಕರ್ತರು ಹಾಗೂ ಕನ್ನಡಪ್ರಭ ದಿನಪತ್ರಿಕೆಯ ಸ್ಥಾನಿಕ ಸಂಪಾದಕರಾದ ಅಂಶಿ ಪ್ರಸನ್ನಕುಮಾರ್ ಅವರೊಂದಿಗೆ ಮೈಸೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಧರ್ಮಾಪುರ ನಾರಾಯಣ್, ದಯಾಶಂಕರ್ ಮೈಲಿ, ಶೇಖರ್ ಕಿರುಗುಂದ, ಮಹೇಶ್ ಭಗೀರಥ, ವೀರಭದ್ರಪ್ಪ ಬಿಸ್ಲಳ್ಳಿ, ಎಚ್.ಎಸ್. ದಿನೇಶ್ ಕುಮಾರ್, ಕೆ.ಬಿ. ರಮೇಶ್ ನಾಯಕ್, ಎಂ.ಎ.ಶ್ರೀರಾಮ್, ಹಂಪಾ ನಾಗರಾಜು, ಸುಧೀಂದ್ರ ಕುಮಾರ್, ಈ. ಕಾರ್ತಿಕ್ ಹಾಗೂ ಎಂ.ಟಿ. ಯೋಗೇಶ್ ಕುಮಾರ್ ಅವರುಗಳನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.
ನೈತಿಕತೆ, ವಿಶ್ವಾಸಾರ್ಹತೆ ಇರಲಿ:
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಂಶಿ ಪ್ರಸನ್ನಕುಮಾರ್, ಪತ್ರಕರ್ತರು ತಮ್ಮ ಕೆಲಸದ ಮೂಲಕ ಗುರುತಿಸುವಂತೆ ಬೆಳೆಯಬೇಕಿದ್ದು, ಪತ್ರಕರ್ತರಿಗೆ ನೈತಿಕತೆ ಮತ್ತು ವಿಶ್ವಾಸಾರ್ಹತೆ ಇರಬೇಕು. ಸಮಾಜ ಪ್ರತಿಯೊಂದನ್ನು ಸಹ ಗಮನಿಸಿಲಿದ್ದು, ಇದನ್ನೆಲ್ಲಾ ಅರಿತು ಆತ್ಮಾವಲೋಕನ ಮಾಡಿಕೊಂಡ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಪತ್ರಕರ್ತರಾಗಿ ನಾವೆಲ್ಲರೂ ಕೂಡ ಸಮಾಜದ ವಿಶ್ವಾಸಾರ್ಹತೆ ಉಳಿಸಿಕೊಂಡು ಕೆಲಸ ಮಾಡುತ್ತಾ, ಕೆಲಸದ ಮೂಲಕವಾಗಿ ನಾವು ಸಮಾಜದಲ್ಲಿ ಗುರುತಿಸಿಕೊಳ್ಳೋಣ ಎಂದರು.
ಮೈಸೂರಿನ ಪತ್ರಿಕೋದ್ಯಮ ತನ್ನದೇ ಗೌರವ ಹಾಗೂ ಘನತೆ ಹೊಂದಿದ್ದು, ಪತ್ರಕರ್ತರ ಸಂಘಕ್ಕೂ 90 ವರ್ಷಗಳು ಪೂರ್ಣಗೊಂಡಿದೆ. ಮೈಸೂರಿನ ಪತ್ರಕರ್ತರು ಪೈಪೋಟಿಯಿಂದ ಕೆಲಸ ಮಾಡಲಿದ್ದು, ಹೀಗಾಗಿ ಮೈಸೂರಿನ ಪತ್ರಿಕೋದ್ಯಮಕ್ಕೆ ಒಳ್ಳೆಯ ಹೆಸರು ಲಭಿಸಿದೆ. ನನಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿದ್ದು, ಮೈಸೂರಿಗೆ ಹಾಗೂ ಮೈಸೂರಿನ ಪತ್ರಿಕೋದ್ಯಮಕ್ಕೆ ಸಂದ ಗೌರವವಾಗಿದೆ. ಪ್ರತಿಬಾರಿ ನನಗೆ ಪ್ರಶಸ್ತಿಗಳು ಬಂದಾಗಲೂ ಪತ್ರಕರ್ತರು, ರಾಜಕಾರಣಿಗಳು ಸೇರಿದಂತೆ ಪ್ರತಿಯೊಬ್ಬರು ನನಗೆ ಅತ್ಯಂತ ಹೆಚ್ಚಿನ ಪ್ರೀತಿ ನೀಡಿ, ಉತ್ಸಾಹ ತುಂಬುತ್ತಾರೆ. ಇದಕ್ಕಾಗಿ ನಾನು ಸದಾ ಋಣಿ ಆಗಿರುತ್ತೇನೆ ಎಂದ ಅವರು, ಸದಾ ಪ್ರತಿಯೊಬ್ಬರ ಒಳಿತನ್ನು ಬಯಸುವ ಶ್ರೀಹರಿ ಅವರು ಎಲ್ಲರೊಂದಿಗೆ ಬೆರೆಯುವ ಮನಸ್ಥಿತಿ ಹೊಂದಿದ್ದು, ಹೀಗಾಗಿ ಪತ್ರಕರ್ತರನ್ನು ಒಟ್ಟಾಗಿ ಸೇರಿಸಿ, ಸನ್ಮಾನಿಸುವ ಮೂಲಕ ಎಲ್ಲರೂ ಒಟ್ಟಾಗಿ ಹೋಗೋಣ ಎಂಬ ಸಂದೇಶ ನೀಡಿದ್ದಾರೆ ಎಂದು ಶ್ಲಾಘಿಸಿದರು.
ಅಸ್ಮಿತೆಯ ಸಮಸ್ಯೆ ಕಾಡುತ್ತಿದೆ :
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಎಲ್ಲರನ್ನೂ ಅಸ್ಮಿತೆಯ ಸಮಸ್ಯೆ ಕಾಡುತ್ತಿದೆ. ಇಂತಹ ಸ್ವಾರ್ಥದ ಕಾಲಘಟ್ಟದಲ್ಲಿ ಜಾತಿ, ಧರ್ಮ, ಮನಸ್ಸು ಮತ್ತು ಸಮಾಜಗಳನ್ನು ಒಡೆದು ತಮ್ಮ ಅಸ್ಮಿತೆಗಳನ್ನು ಉಳಿಸಿಕೊಳ್ಳುವ ಪ್ರಯತ್ನಗಳು ಹೆಚ್ಚಾಗಿದೆ. ಈ ರೀತಿಯ ಪ್ರಯತ್ನಗಳ ನಡುವೆ ಸಮಾಜ ಕಟ್ಟುವಿಕೆ, ಒಗ್ಗೂಡಿಸುವ ವ್ಯಕ್ತಿಗಳು ಸಿಗುವುದು ಅತ್ಯಂತ ವಿರಳವಾಗಿದ್ದು, ಅಂತಹ ವ್ಯಕ್ತಿಗಳಲ್ಲಿ ಶ್ರೀಹರಿ ಅವರು ಒಬ್ಬರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಪ್ರತಿನಿಧಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಸಿ.ಕೆ. ಮಹೇಂದ್ರ ಅವರು ಪ್ರಾಸ್ತಾವಿಕ ಭಾಷಣ ನೆರವೇರಿಸಿ, ಸನ್ಮಾನಿತರ ಪರಿಚಯ ಮಾಡಿಕೊಟ್ಟರು. ಜಿಎಸ್ಎಸ್ ಮಾಧ್ಯಮ ವಿಭಾಗದ ಮುಖ್ಯಸ್ಥೆ ರೂಪಶ್ರೀ ಕಾರ್ಯಕ್ರಮ ನಿರೂಪಿಸಿದರು. ಆಂದೋಲನ ದಿನಪತ್ರಿಕೆ ಮುಖ್ಯಸ್ಥ ರವಿ ಕೋಟಿ, ಹಿರಿಯ ಪತ್ರಕರ್ತರಾದ ಸತೀಶ್, ಬಿ. ರಾಘವೇಂದ್ರ, ಪ್ರತಿನಿಧಿ ಪತ್ರಿಕೆ ಸುದ್ದಿ ವಿಭಾಗದ ಮುಖ್ಯಸ್ಥ ಮುಳ್ಳೂರು ರಾಜು ಸೇರಿದಂತೆ ಹಲವರಿದ್ದರು.

ವಿಕಾ ಸುದ್ದಿ


