Online News in ಕನ್ನಡ

ಕಾಂಗ್ರೆಸ್‌ ವಕ್ತಾರ ಎಂ. ಲಕ್ಷ್ಮಣ್‌ ವಿರುದ್ಧ ಪೊಲೀಸ್‌ ಮಹಾ ನಿರ್ದೇಶಕರಿಗೆ ಬಿಜೆಪಿ ಶಾಸಕ ಶ್ರೀವತ್ಸ ದೂರು

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್‌ ಷಾ ಅವರ ಚಿತಾವಣೆಯಿಂದ ಬಳ್ಳಾರಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತನ ಹೆಣ ಬಿದ್ದಿದೆ ಎಂದು ಹೇಳಿಕೆ ನೀಡಿರುವ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ವಿರುದ್ಧ ಮೈಸೂರು ನಗರದ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಅವರು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಿಗೆ ದೂರು ನೀಡಿದ್ದಾರೆ.


ಈ ಸಂಬಂಧ ಇಂದು ಬೆಂಗಳೂರಿನಲ್ಲಿ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಡಾ. ಎಂ.ಎ.ಸಲೀಂ ಅವರನ್ನು ಭೇಟಿ ಮಾಡಿದ ಶಾಸಕ ಟಿ.ಎಸ್.ಶ್ರೀವತ್ಸ, ಸುಳ್ಳು ಹಾಗೂ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.


ಎಂ.ಲಕ್ಷ್ಮಣ್‌ ರವರು ಎಸಗಿರುವ ಕೃತ್ಯವು ಗಂಭೀರ ಸ್ವರೂಪದ ಕ್ರಿಮಿನಲ್‌ ಪ್ರಕರಣವಾಗಿದ್ದು, ಭಾರತೀಯ ನ್ಯಾಯ ಸಂಹಿತ-೨೦೨೩ರ ಕಾಲಂ ೧೨೫, ೩೫೧ ಹಾಗೂ ೩೫೩ ಅಡಿ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದೇ ಜನವರಿ ೮ರಂದು ಮೈಸೂರಿನ ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ವಕ್ತಾರ ಎಂ. ಲಕ್ಷ್ನಣ್‌, ಕೇಂದ್ರ ಸಚಿವರಾದ ಅಮಿತ್‌ ಷಾ ಅವರ ಚಿತಾವಣೆಯಿಂದ ಬಳ್ಳಾರಿಯಲ್ಲಿ ಗಲಾಟೆ ನಡೆದು ಕಾಂಗ್ರೆಸ್‌ ಕಾರ್ಯಕರ್ತರ ಹೆಣ ಬಿದ್ದಿದೆ. ಅಮಿತ್‌ ಷಾ ಅವರ ಸಂದೇಶ ಹೊತ್ತು ತಂದ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಬಳ್ಳಾರಿಗೆ ಭೇಟಿ ನೀಡಿ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಜೊತೆ ಚರ್ಚೆ ನಡೆಸಿದ ಬಳಿಕ ಈ ಕೃತ್ಯ ನಡೆದಿದೆ ಎಂದು ನೀಡಿರುವ ಹೇಳಿಕೆ ಸಮಾಜದಲ್ಲಿ ಶಾಂತಿಗೆ ಭಂಗ ತರುವಂತ್ತದ್ದು ಎಂದು ಶಾಸಕರು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

ದೂರು ನೀಡುವ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಸಿದ್ದರಾಜು ಹಾಜರಿದ್ದರು.

Call Now Button