ಮೈಸೂರು: ಪುಸ್ತಕ ಸಂಸ್ಕೃತಿಯಿಂದ ಸುಶಿಕ್ಷಿತ ಸಮಾಜ ನಿರ್ಮಾಣ ಸಾಧ್ಯವಿದ್ದು, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಓದಿನಿಂದ ಪ್ರಪಂಚಿಕ ಜ್ಞಾನ ವೃದ್ಧಿಸಿಕೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು. ತಾಲೂಕಿನ ಡಿ.ಸಾಲುಂಡಿ ಗ್ರಾಮದ ಡಾ.ಬೀರಪ್ಪ. ಹೆಚ್ ಅವರು ನೂತನವಾಗಿ ನಿರ್ಮಿಸಿರುವ ಡಾ.ಯತೀಂದ್ರ ಸಿದ್ದರಾಮಯ್ಯ ಜನತಾ ವಾಚನಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬದುಕಿಗೆ ಬೇಕಾದ ಆತ್ಮಸ್ಥೈರ್ಯ,ಭರವಸೆ, ದೂರದೃಷ್ಟಿ ಎಲ್ಲವೂ ಪುಸ್ತಕಗಳಿಂದ ದೊರೆಯುತ್ತದೆ ಅದನ್ನು ನಾವು ಪಡೆದುಕೊಳ್ಳಬೇಕು ಎಂದರು.
ನವಮಾಧ್ಯಮ , ಸಾಮಾಜಿಕ ಜಾಲತಾಣಗಳು ಹೆಚ್ಚು ಜನರನ್ನು ಆವರಿಸಿದೆ ಆದರೆ ಪುಸ್ತಕಗಳೆಡೆಗೆ ನಾವೆಲ್ಲರು ಸಾಗಬೇಕಿದೆ. ಏಕೆಂದರೆ, ಓದುವುದರಿಂದ ಮನುಷ್ಯನಲ್ಲಿ ಸಂಚಲನವಾಗುತ್ತದೆ ಚುರುಕುತನ ಬರುತ್ತದೆ ಎಂದು ಹೇಳಿದರು.
ಉಚಿತವಾಗಿ ಗ್ರಂಥಾಲಯ ತೆರೆದು ಉತ್ತಮ ಕಾರ್ಯ ಮಾಡುತ್ತಿರುವ ಡಾ.ಬೀರಪ್ಪ ನಡೆ ಉತ್ತಮವಾದುದು ಇಂತಹ ಮಾದರಿ ಸಮಾಜಮುಖಿ ಕಾರ್ಯಗಳು ಹೆಚ್ಚುವಂತಾಗಲಿ ಎಂದು ಆಶಿಸಿದರು.
ಡಾ.ಬೀರಪ್ಪ.ಹೆಚ್ ಮಾತನಾಡಿ ಶೈಕ್ಷಣಿಕವಾಗಿ ಪಿಹೆಚ್ ಡಿ ಮಾಡಿರುವ ನನ್ನಿಂದ ಸ್ವಗ್ರಾಮಕ್ಕೆ ಡಾ. ಯತೀಂದ್ರ ಅವರ ಹೆಸರಿನಲ್ಲಿ ಗ್ರಂಥಾಲಯ ಸ್ಥಾಪಿಸುವ ಮೂಲಕ ಯುವಕರಲ್ಲಿ ಜ್ಞಾನದ ದೀವಿಗೆ ಹಚ್ಚಬೇಕೆಂಬ ನನ್ನ ಉದ್ದೇಶ ಇಂದು ಈಡೇರಿದೆ ಎಂದು ತಿಳಿಸಿದರು. ಇಂದಿನ ರಾಜಕಾರಣದಲ್ಲಿ ಅತ್ಯಂತ ಪ್ರಬುದ್ಧತೆ, ಜ್ಞಾನದ ಮೌಲ್ಯ ಅರಿತು, ಸರಳತೆಯೊಂದಿಗೆ, ತತ್ವಾದರ್ಶಗಳಿಂದ ಸಾಗುತ್ತಿರುವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ನಮಗೆ ಆದರ್ಶ ಎಂದು ನುಡಿದರು.
ಗ್ರಾಮದ ಯುವಕರು ನಗರ ಪ್ರದೇಶದಲ್ಲಿ ಗ್ರಂಥಾಲಯಗಳಿಗೆ ಮಾಸಿಕ ಹಣ ಪಾವತಿ ಮಾಡಿ ಓದಲು ಹೋಗುತ್ತಿದ್ದರು ಹೀಗಾಗಿ ಉಚಿತವಾಗಿ ಗ್ರಾಮದಲ್ಲಿಯೇ ಎಲ್ಲಾ ಸೌಕರ್ಯಗಳೊಂದಿಗೆ ಅನುಕೂಲವಾಗುವಂತೆ ಗ್ರಂಥಾಲಯ ಮಾಡಿದ್ದೇನೆ ಹಾಗೂ ವಾರಾಂತ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯನ್ನು ಸಹ ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಕೇಶ್ ಪಾಪಣ್ಣ,ಕೆಂಚಪ್ಪ, ಹುಚ್ಚೇಗೌಡ,ಬಸಪ್ಪ,ಮರಪ್ಪ,ಚಂದ್ರು,ಶಿವರಾಜ್.ಬಿ, ರವಿಕುಮಾರ್, ಅಶ್ವಥ್ ನಾರಾಯಣ, ಮುಂತಾದವರು ಉಪಸ್ಥಿತರಿದ್ದರು.


