Online News in ಕನ್ನಡ

‘ ನನ್ನ ಬದುಕಿನ ಅನುಭವವೇ ಬರವಣಿಗೆಗೆ ಪ್ರೇರಣೆ ‘ : ಬಾನು ಮುಫ್ತಾಕ್

ಮೈಸೂರು : ನನ್ನ ವಿದ್ಯಾರ್ಹತೆ, ಉದ್ಯೋಗ, ಕಲಿಕೆ, ಸೃಜನಶೀಲತೆಗಿಂತ್ತಲೂ ನನ್ನ ಬದುಕಿನ ವಿಶ್ವವಿದ್ಯಾಲಯ ಕಲಿಸಿದ ಅನುಭವವೇ ಬರವಣಿಗೆಗೆ ಪ್ರೇರಣೆ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಬೂಕರ್ ಪ್ರಶಸ್ತಿ ವಿಜೇತೆ, ಹಿರಿಯ ಸಾಹಿತಿ ಬಾನು ಮುಫ್ತಾಕ್ ಎಂದು ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಇಂದು ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಬೂಕರ್ ಪ್ರಶಸ್ತಿ ಪಡೆದ ಪಯಣವನ್ನು ಸ್ಮರಿಸುತ್ತಾ, ಪತ್ರಕರ್ತರ ಎಲ್ಲ ಪ್ರಶ್ನೆಗಳಿಗೆ ಮನಬಿಚ್ಚಿ ಮಾತನಾಡಿದರು.
ಕನ್ನಡ ಸಾಹಿತ್ಯ ಗಟ್ಟಿ ಕಾಳಿನಂತ್ತಿದೆ. ಅದನ್ನು ಪ್ರಪಂಚಕ್ಕೆ ಹರಡಬೇಕು. ನನಗೆ ಶೈಕ್ಷಣಿಕ ಹಿನ್ನೆಲೆಗಿಂತ ನನ್ನ ಬದುಕಿನ ಅನುಭವ, ಬದುಕಿನ ಕ್ರಮ, ಭಿನ್ನ ಆಲೋಚನೆಯಿಂದಾಗಿ ನನ್ನೊಳಗೆ ಸಾಹಿತ್ಯ ಜಾಗೃತಕೊಂಡಿದೆ. ಯಾರನ್ನೂ ಓದಿಕೊಳ್ಳದೆ ನನಗಾದ ಅನುಭವವೇ ಅಕ್ಷರವಾಗಿದೆ ಎಂದು ವಿವರಿಸಿದರು.

ಬೌದ್ಧಿಕ ವಲಯದ ತಾತ್ಸಾರವೇಕೆ ?
ಬೂಕರ್ ಪ್ರಶಸ್ತಿ ಬಂದ ಬಳಿಕ ಸಾಮಾನ್ಯ ಜನರ ವಲಯ ತೋರಿದ ಪ್ರೀತಿ, ನೀಡಿದ ಪ್ರತಿಕ್ರಿಯೆ ಬೌದ್ಧಿಕ ವಲಯದಿಂದ ವ್ಯಕ್ತವಾಗದ ಬಗ್ಗೆ ಕೇಳಿದ ಪ್ರಶ್ನೆಗೆ, ಬಹುಶಃ ನಾನೊಬ್ಬ ಮಹಿಳೆ, ಅಲ್ಪಸಂಖ್ಯಾತ ಧರ್ಮದವಳು ಎಂಬ ಕಾರಣಕ್ಕೆ ನಮ್ಮ ಕನ್ನಡ ಬೌದ್ಧಿಕ ವಲಯ ನಿರೀಕ್ಷೆಯ ಮಟ್ಟದಲ್ಲಿ ಪ್ರತಿಕ್ರಿಯೆ ನೀಡದೆ ಇರಬಹುದು. ಈ ಹಿಂದೆ ಹಿಂದೂ ಧರ್ಮದ ಗ್ರಂಥಗಳಾದ ಮಹಾಭಾರತ, ರಾಮಾಯಣದ ಬಗ್ಗೆ ಮುಸ್ಲಿಂ ಮಹಿಳೆಯ ಏಕೆ ಮಾತನಾಡಬೇಕು ಎಂದು ಪ್ರಶ್ನಿಸುತ್ತಿದ್ದರು. ಇದಕ್ಕೆ ಕಾಲವೇ ಉತ್ತರ ನೀಡಬೇಕು ಎಂದರು.

ಅನುವಾದ ಬಹಳ ಮುಖ್ಯ :
ಅತೀ ಚಲನಶೀಲ ಸಮಾಜದ ಜತೆ ಸೂಕ್ತ ಸಂವಾದ ನಡೆಸಲು ಕನ್ನಡ ಕೃತಿಗಳು ಅನುವಾದಗೊಳ್ಳುವುದು ಅನಿವಾರ್ಯ. ನಾವು ಜಗತ್ತಿನ ವೇಗಕ್ಕೆ ಒಗ್ಗಿಕೊಳ್ಳಬೇಕಿದೆ. ಸರಕಾರ ಕೃಪಾಪೋಷಿತ ಸಂಸ್ಥೆಗಳ ಅನುವಾದ ಕಾರ್ಯಕ್ಕಿಂತ ಸಾಹಿತಿಗಳೇ ಇದರ ಬಗ್ಗೆ ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು.
ಬರವಣಿಗೆ ಎನ್ನುವುದು ಒಂದು ರಾಜಕೀಯ ಕ್ರಿಯೆ. ಅದರಲ್ಲೂ ಪುರುಷ ಪ್ರಧಾನ ಅಥವಾ ಪಿತೃ ಪ್ರಧಾನ ಸಮಾಜದಲ್ಲಿ ಮಹಿಳೆಯ ಮೇಲಾಗುವ ಎಲ್ಲ ದೌರ್ಜನ್ಯ ಮತ್ತು ಹತ್ತಿಕ್ಕುವ ಪ್ರಯತ್ನಗಳು ಮಹಿಳಾ ಸಾಹಿತ್ಯದ ಮೇಲೂ ಪ್ರಯೋಗ ಮಾಡಲಾಗಿದೆ. ನನ್ನ ಸಾಹಿತ್ಯ ಕೃಷಿ ಎರಡು ಮೊನೆಯ ಕತ್ತಿಯ ಮೇಲೆ ನಡಿಗೆ ಮಾಡಿದಂತ್ತಾಗಿದೆ ಎಂದು ವಿಶ್ಲೇಷಿಸಿದರು.
ಅಧ್ಯಕ್ಷಗಿಂತ್ತ ಕಸಾಪ ದೊಡ್ಡದು:

ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲು ನನಗೆ ಆಹ್ವಾನ ಬಂದಿದೆ. ಈ ಕ್ರಿಯೆಯಲ್ಲಿ ನಾನು 110 ವರ್ಷಗಳ ಪರಂಪರೆ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ ಮುಖ್ಯವಾಗುತ್ತದೆಯೇ ವಿನಃ ಅಧ್ಯಕ್ಷರಲ್ಲ. ಒಂದು ಕಾಲದಲ್ಲಿ ನನ್ನನ್ನು ಗೋಷ್ಠಿಗೂ ಆಹ್ವಾನಿದ ಸಂಸ್ಥೆಯೊಂದು ಈಗ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಆಹ್ವಾನಿಸಿದೆ. ಇದನ್ನು ಬದಲಾವಣೆ ಎಂದು ಭಾವಿಸಬೇಕೆ ?, ಒತ್ತಾಯವೆಂದು ಭಾವಿಸಬೇಕೆ ? ಅಥವಾ ಸಾಮಾಜಿಕ ಸ್ಥಿತಿಯಾಂತರ ಎಂದು ಕರೆಬೇಕೆ ಎಂದು ಮಾರ್ಮಿಕವಾಗಿ ನುಡಿದರು.
ಲಂಕೇಶರು ನನಗೆ ಅವಕಾಶ ಕೊಟ್ಟಿದ್ದು ನಿಜ. ಆದರೆ, ಕೈಹಿಡಿದು ಬರೆಸಲಿಲ್ಲ. ಬರವಣಿಗೆ ಎನ್ನುವುದು ನಮ್ಮೊಳಗೆ ಮೂಡುವ ಕ್ರಿಯೆ. ಯಾರೂ ಸಹ ಕೈ ಹಿಡಿದು ಬರೆಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಸಂವಾದದಲ್ಲಿ ಪತ್ರಕರ್ತರ ಸಂಘದ ವತಿಯಿಂದ ಆತ್ಮೀಯವಾಗಿ ಅಭಿನಂದಿಸಲಾಯಿತು. ಸಂಘದ ಅಧ್ಯಕ್ಷ ಕೆ.ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ಉಪಾಧ್ಯಕ್ಷ ರವಿ ಪಾಂಡವಪುರ, ಗ್ರಾಮಾಂತರ ಕಾರ್ಯದರ್ಶಿ ದಾರಾ ಮಹೇಶ್, ನಗರ ಕಾರ್ಯದರ್ಶಿ ಕೃಷ್ಣೋಜೀ ರಾವ್, ಖಜಾಂಚಿ ಎನ್. ಸುರೇಶ್ ಹಾಜರಿದ್ದರು.

Call Now Button