Online News in ಕನ್ನಡ

ಮೈಸೂರು: ಸಾವಿರ ಎಕರೆಯಲ್ಲಿ ನಿವೇಶನ ಹಂಚಿಕೆ: ಮುಡಾ ಗುರಿ

ಮೈಸೂರು: 50:50 ಅನುಪಾತದಲ್ಲಿ ಜಮೀನುಗಳನ್ನು ನೀಡಲು ರೈತರು ಮುಂದೆ ಬಂದಿದ್ದು ಈಗಾಗಲೇ 500 ಎಕರೆಯನ್ನು ಗುರುತಿಸಲಾಗಿದೆ. ಒಂದು ಸಾವಿರ ಎಕರೆಯನ್ನು ಗುರುತಿಸಿದ ಬಳಿಕ ನಿವೇಶನವನ್ನು ಅಭಿವೃದ್ಧಿ ಪಡಿಸಿ ಹಂಚಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ಜಿ. ರೆಡ್ಡಿ ತಿಳಿಸಿದ್ದಾರೆ.
ಇಂದು ಮುಡಾದಲ್ಲಿ ಆಯುಕ್ತ ಕೆ.ಆರ್.‌ ರಕ್ಷಿತ್‌ 2026-27ನೇ ಸಾಲಿನ ಬಜೆಟ್‌ ಮಂಡಿಸಿದ ನಂತರ ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಭೂಮಿಯ ಬೆಲೆ ಹೆಚ್ಚಾಗಿರುವುದರಿಂದ 50:50 ಅನುಪಾತದಲ್ಲಿ ನಿವೇಶನ ಹಂಚಿಕೊಳ್ಳಲು ರೈತರು ಸಂತೋಷದಿಂದ ಒಪ್ಪಿದ್ದು, ಶೀಘ್ರ ಭೂ ಸ್ವಾಧೀನ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದರು.


ಮೈಸೂರಿನ ಸುತ್ತ ಮುತ್ತ ಈಗಾಗಲೇ 500 ಎಕರೆ ರೈತರ ಜಮೀನನ್ನು ಗುರುತಿಸಲಾಗಿದೆ. ಇದನ್ನು 1000 ಎಕರೆಗೆ ವಿಸ್ತರಿಸಿ ತದನಂತರದಲ್ಲಿ ಭೂ ಅಭಿವೃದ್ಧಿ ಪಡಿಸಲಾಗುವುದು. ಇದಕ್ಕಾಗಿ ಆರ್ಥಿಕ ಸಂಪನ್ಮೂಲ ಕ್ರೂಢೀಕರಣಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಆಧ್ಯತೆ ನೀಡಲಾಗಿದೆ ಎಂದು ತಿಳಿಸಿದರು.

 

ಇದಕ್ಕು ಮುನ್ನ ಆಯುಕ್ತ ರಕ್ಷಿತ್‌ ಅವರು, 871 ಕೋಟಿ ರೂ. ನಿರೀಕ್ಷಿತಾ ಬಜೆಟನ್ನು ಮಂಡಿಸಿದರು. ಸುಮಮಾರು 548 ಕೋಟಿ ರೂ.ಗಳನ್ನು ವಿವಿಧ ಅಭಿವೃದ್ಧಿಗೆ ಮೀಸಲಿಡಲಾಗಿದ್ದು, ಇದರಲ್ಲಿ ಕೆರೆಗಳ ಅಭಿವೃದ್ಧಿ, ಬಡಾವಣೆಗಳಿಗೆ ಮೂಲಭೂತ ಸೌಕರ್ಯ, ರಸ್ತೆ ನಿರ್ಮಾಣ, ನೀರು ಸರಬರಾಜು, ವಸತಿ ಬಡಾವಣೆ ಅಭಿವೃದ್ಧಿಗೆ ಅನುದಾನ ಬಳಸಿಕೊಳ್ಳಲಾಗುವುದು. ನಿಶ್ಚಿತ ಠೇವಣ ರೂಪದಲ್ಲಿ ಇಡಿಗಂಟು ಇಟ್ಟಿರುವ ಮೂಲ ಹಾಗೂ ವಾರ್ಷಿಕ ಬಡ್ಡಿ ಸೇರಿ ಪ್ರಸಕ್ತ ಆರ್ಥಿಕ ವರ್ಷವಾದ 2026-27ನೇ ಸಾಲಿನಲ್ಲಿ ನಿರೀಕ್ಷಿಸಿದ ಅಂದಾಜು ಮೊತ್ತ ರೂ. 21584.61 ಲಕ್ಷ ರೂ.ಗಳಾಗಿರುತ್ತದೆ ಎಂದು ಪ್ರಕಟಿಸಿದರು.

 


ಸಭೆಯಲ್ಲಿ ಮುಡಾ ಸದಸ್ಯರಾದ ಸುಭಾಶ ನಾಯಕವಾಡ, ಮೈಸೂರು ನಗರ ಯೋಜನ ಸದಸ್ಯ ಶಿವರಾಮಯ್ಯ ಹಾಗೂ ವಿವಿಧ ಇಲಾಖೆಗಳ ಮುಖ್ಯ ಅಧಿಕಾರಿಗಳು ಹಾಜರಿದ್ದರು.

Call Now Button