Online News in ಕನ್ನಡ

ಪ್ರತಿಭಾವಂತ ಕಾದಂಬರಿಕಾರ ಶ್ರೀಕೃಷ್ಣ ಆಲನಹಳ್ಳಿ ಅವರ ‘ಸಮಗ್ರ ಕಥೆಗಳು’ ಪ್ರಕಟಣೆ

ಮೈಸೂರು: ಕನ್ನಡ ಸಾಹಿತ್ಯದಲ್ಲಿ ಗ್ರಾಮೀಣ ಬದುಕಿನ ಸೊಗಡನ್ನು, ಮಾನವ ಸಂಬಂಧಗಳ ಸೂಕ್ಷ್ಮತೆಯನ್ನು ಮತ್ತು ಪ್ರಕೃತಿಯ ಅಂತರಾಳವನ್ನು ಅಚ್ಚುಕಟ್ಟಾಗಿ ಹಿಡಿದಿಟ್ಟ ಸೂಕ್ಷ್ಮ ಸಂವೇದನೆಯ ಲೇಖಕರಲ್ಲಿ ಪ್ರಮುಖರು ಶ್ರೀಕೃಷ್ಣ ಆಲನಹಳ್ಳಿ. ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಪಡೆದ ಅತ್ಯಂತ ಕಿರಿಯ ಸಾಹಿತಿ ಎಂದು ದಾಖಲೆ ನಿರ್ಮಿಸಿರುವ ಅವರು ಕೇವಲ ನಾಲ್ಕು ದಶಕಗಳ ಬದುಕಿನಲ್ಲಿ ಕನ್ನಡ ಸಾಹಿತ್ಯಕ್ಕೆ ವಿಶಿಷ್ಟವಾದ ಕೊಡುಗೆಯನ್ನು ನೀಡಿದರು.

ಕಾಡು (1972), ಪರಸಂಗದ ಗೆಂಡೆತಿಮ್ಮ (1978) ಮತ್ತು ಭುಜಂಗಯ್ಯನ ದಶಾವತಾರಗಳು (1982) ಎಂಬ ಅವರ ಕಾದಂಬರಿಗಳು ಕನ್ನಡ ಸಾಹಿತ್ಯದಲ್ಲಿ ಮೈಲುಗಲ್ಲುಗಳಾಗಿ ಗುರುತಿಸಲ್ಪಟ್ಟಿವೆ. ಅವರ  ಕೃತಿಗಳಲ್ಲಿ  ಬಹುತೇಕ ಕೃತಿಗಳು  ಚಲನಚಿತ್ರಗಳಾಗಿ ರೂಪಾಂತರಗೊಂಡು  ದೊಡ್ಡ ಪ್ರಭಾವ ಬೀರಿವೆ.

ಕಥೆಗಾರರಾಗಿಯೂ, ಕವಿಯಾಗಿಯೂ ಗುರುತಿಸಿಕೊಂಡ ಆಲನಹಳ್ಳಿ ಅವರು ಮಣ್ಣಿನ ಹಾಡು, ಕಾಡು ಗಿಡದ ಹಾಡು ಪಾಡು, ಡೋಗ್ರಾ  ಪಹಾರಿ  ಪ್ರೇಮಗೀತೆಗಳು ಸೇರಿದಂತೆ ಹಲವಾರು ಕವನ ಸಂಕಲನಗಳನ್ನು  ರಚಿಸಿದ್ದಾರೆ. ಅವರ ‘ಮಣ್ಣಿನ ಹಾಡು’ ಕವನ  ಸಂಕಲನಕ್ಕಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದ್ದು, ಅವರ ನಿಧನಾನಂತರ 1989ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಹ ಲಭಿಸಿದೆ. ಅವರ ಕೃತಿಗಳು ಇಂಗ್ಲಿಷ್, ಜರ್ಮನ್, ರಷ್ಯನ್ ಸೇರಿದಂತೆ ಅನೇಕ ಭಾರತೀಯ ಭಾಷೆಗಳಿಗೂ ಅನುವಾದಗೊಂಡಿವೆ.

ಇದೀಗ ಅವರ ಎಲ್ಲಾ ಕಥೆಗಳನ್ನು ಒಟ್ಟುಗೂಡಿಸಿದ “ಸಮಗ್ರ ಕಥೆಗಳು” ಎಂಬ ಪುಸ್ತಕ ಪ್ರಕಟವಾಗಿದೆ. ಈ ಕೃತಿಯಲ್ಲಿ ತಪ್ತ, ಫೀನಿಕ್ಸ್ ಮತ್ತು ಅಪೂರ್ಣ ಕಥೆಗಳು ಎಂಬ ಮೂರು ಕಥಾ ಗುಚ್ಛಗಳು ಸೇರಿ ಒಟ್ಟು 232 ಪುಟಗಳ ಸಂಕಲನ ರೂಪುಗೊಂಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ದೇವನೂರು ಮಹಾದೇವ ಅವರು, ಆಲನಹಳ್ಳಿ ಕೃಷ್ಣ ಅವರೊಂದಿಗಿನ  ತಮ್ಮ ಒಡನಾಟವನ್ನು ಮೆಲುಕು ಹಾಕುತ್ತಾ , ನವ್ಯ ಸಾಹಿತಿಗಳೊಂದಿಗೆ  ಆಪ್ತ ಒಡನಾಟ ಹೊಂದಿದ್ದ ಕೃಷ್ಣ  ತಮಗೂ  ಸಾಹಿತ್ಯ ರಚನೆಗೆ ಹುರಿದುಂಬಿಸಿಕೊಂಡಿದ್ದನ್ನು ಸ್ಮರಿಸಿದರು. ವಿದ್ಯಾರ್ಥಿ ಜೀವನದಲ್ಲೇ ಶ್ರೀಕೃಷ್ಣ ಆಲನಹಳ್ಳಿ ‘ಸಮೀಕ್ಷಕ’ ಎಂಬ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿದ್ದರು. ಆ ಕಾಲದಲ್ಲಿ ಯುವ ಸಾಹಿತಿಗಳ  ಸಾಹಿತ್ಯಿಕ  ಚಿಂತನೆಗಳಿಗೆ ವೇದಿಕೆಯಾಗಿದ್ದ ಆ  ಪತ್ರಿಕೆ ಸಾಹಿತ್ಯ ವಲಯದಲ್ಲಿ ವಿಶಿಷ್ಟ ಗಮನ ಸೆಳೆದಿತ್ತು ಎಂದು ಹೇಳಿದರು.

ಈ ಕೃತಿಯನ್ನು ಅಮೂಲ್ಯ ಪುಸ್ತಕ ಪ್ರಕಾಶನದವರು  ಪ್ರಕಟಿಸಿದ್ದು, ಸುಧಾಕರ ದರ್ಬೆ ಮುಖಪುಟದ ವಿನ್ಯಾಸವನ್ನು ಮಾಡಿದ್ದಾರೆ,  ಒಳಪುಟಗಳ  ವಿನ್ಯಾಸವನ್ನು JRM ಡಿಸೈನ್ಸ್ ಅವರು ಮಾಡಿದ್ದಾರೆ.

ಈ ಸಂದರ್ಭದಲ್ಲಿ  ಆಲನಹಳ್ಳಿ ಕೃಷ್ಣ  ಅವರ ಪತ್ನಿ ವಿನುತಾ ಆಲನಹಳ್ಳಿ, ಪುತ್ರ ಪ್ರದ್ಯುಮ್ನ ಆಲನಹಳ್ಳಿ, ಪುತ್ರಿ ಕೃತಿಕಾ ಆಲನಹಳ್ಳಿ, ಅಳಿಯ ಕಣ್ಣನ್, ಪ್ರಕಾಶಕರಾದ ಕೃಷ್ಣ ಚೆಂಗಡಿ, ಕತೆಗಾರರಾದ ಶಿವಾಗ್ ಹಾಗೂ ಇತರರು ಉಪಸ್ಥಿತರಿದ್ದರು .

ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಗುರುತು ಮೂಡಿಸಿದ ಶ್ರೀಕೃಷ್ಣ ಆಲನಹಳ್ಳಿ ಅವರ ಕಥೆಗಳ ಸಮಗ್ರ ಸಂಕಲನ ಪ್ರಕಟವಾಗುತ್ತಿರುವುದು ಸಾಹಿತ್ಯಾಸಕ್ತರಿಗೆ ಸಂಭ್ರಮದ ಕ್ಷಣವಾಗಲಿದೆ.

Call Now Button