ಮೈಸೂರು: ರಾಜ್ಯ ಕಾಂಗ್ರೆಸ್‌ನಲ್ಲಿ ʻನಾಯಕತ್ವ ಬದಲಾವಣೆʼ ಚರ್ಚೆಗಳು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಬೆನ್ನ ಹಿಂದೆಯೇ ದಲಿತ ಮುಖ್ಯಮಂತ್ರಿ ಕೂಗು ಹೆಚ್ಚಾಗಿದೆ. ಬಹುಸಂಖ್ಯಾ ದಲಿತರನ್ನು ಮತ ಬ್ಯಾಂಕ್ ಮಾಡಿಕೊಂಡಿರುವ ರಾಜಕೀಯ ಪಕ್ಷಗಳು ರಾಜಕೀಯ ಅತ್ಯುನ್ನತ ಸ್ಥಾನಮಾನ ನೀಡದೆ ಹೋಗಿರುವುದು ದುರದೃಷ್ಟಕರ ಎಂದು ಕರ್ನಾಟಕ ದಲಿತ ಚಳವಳಿ ನವನಿರ್ಮಾಣ ವೇದಿಕೆಯ ಅಧ್ಯಕ್ಷ ಹರಿಹರ ಆನಂದಸ್ವಾಮಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶೋಷಿತ ಸಮುದಾಯಗಳನ್ನು ಎಲ್ಲ ರಾಜಕೀಯ ಪಕ್ಷಗಳು ಗಂಭೀರವಾಗಿ ಪರಿಗಣಿಸಬೇಕಾದಲ್ಲಿ ನಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗೊತ್ತಿ ಸ್ವವಿಮರ್ಶೆ ಮೂಲಕ ಮುಂದಿನ ರಾಜಕೀಯ ಹಾದಿಯನ್ನು ಕಂಡುಕೊಳ್ಳಬೇಕಿದೆ ಎಂದು ಹೇಳಿದರು.
ಡಾ. ಅಂಬೇಡ್ಕರ್‌ರವರ ನಿರಂತರ ಹೋರಾಟ, ಒತ್ತಾಸೆಯಿಂದಾಗಿ ಸ್ವತಂತ್ರ್ಯ ನಂತರದಲ್ಲಿ ಅದರಲ್ಲಿಯೂ ಸಂವಿಧಾನ ಜಾರಿಯ ನಂತರದ ಸಂದರ್ಭದಲ್ಲಿ ಅವಕಾಶ ವಂಚಿತರಾಗಿದ್ದ ಸಮೂಹಕ್ಕೆ ಸ್ವಲ್ಪ ಮಟ್ಟಿಗೆ ಉಸಿರಾಡಲು ಅವಕಾಶ ದೊರೆತದ್ದು ಇತಿಹಾಸವೇ ಸರಿ. ಬಾಬಾ ಸಾಹೇಬರ ಬದುಕಿನ ಸಂದರ್ಭದಲ್ಲಿಯೇ ಅವರ ಎಲ್ಲ ಚಿಂತನೆಗಳಿಗೆ ಮುಂಚೂಣಿಯ ಕೆನೆಪದರವು ಬೆನ್ನು ತೋರಿಸಿದ್ದು ವಿಷಾದದ ಸಂಗತಿ. ಇನ್ನು ಹಾಲಿ ವ್ಯವಸ್ಥೆಯ ವಾರದುದಾರರಂತೆ ನಮ್ಮೆಲ್ಲರ ಅಸ್ಥಿತ್ವಕ್ಕೂ ಕಿಚ್ಚು ಹತ್ತುತ್ತಿರುವ ಮನುವಾದಿ ಸಂಸ್ಕೃತಿಯ ಷಡ್ಯಂತರದಿಂದಾಗಿ ದಿಕ್ಕು ತಪ್ಪಿ ಛಿದ್ರಗೊಂಡಿದೆ ಎಂದು ತಿಳಿಸಿದರು.
ಈ ಛಿದ್ರಗೊಳ್ಳುವಿಕೆಯಿಂದಾಗಿ ಇಂದಿಗೂ ಎಲ್ಲ ರಾಜಕೀಯ ಪಕ್ಷಗಳು ದಲಿತರನ್ನು ಕೇವಲ ಮತಗಳಿಗಾಗಿ ಓಲೈಸಿಕೊಂಡು ಮೇಲ್ವರ್ಗಗಳು ಅಧಿಕಾರ ಅನುಭವಿಸುತ್ತಿವೆ. ಆದರೆ, ೭೦ ವರ್ಷದ ಬಳಿಕವೂ ಕರ್ನಾಟಕದ ಮಟ್ಟಿಗೆ ರಾಜಕೀಯ ಉನ್ನತ ಸ್ಥಾನ ದೊರಕಿಲ್ಲ. ಈಗಲಾದರೂ ಕಾಂಗ್ರೆಸ್ ಪಕ್ಷ ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಟೀಯಲ್ಲಿ ದಲಿತ ಪರ ಮುಖಂಡರಾದ ಚುಂಚನಹಳ್ಳಿ ಮಲ್ಲೇಶ್, ಸೋಮಯ್ಯ ಮಲೆಯೂರು, ಬದನವಾಳು ಬಸವಣ್ಣ, ಸತೀಶ್ ಪಡುವಾರಹಳ್ಳಿ ಹಾಜರಿದ್ದರು.


