Online News in ಕನ್ನಡ

ಮಹಿಳಾ ಸಬಲೀಕರಣಕ್ಕೆ ಸರಕಾರ ಬದ್ಧ : ಸರಕಾರಿ ಮಹಿಳಾ ನೌಕರರ ಸಮ್ಮೇಳನದಲ್ಲಿ ಸಿಎಂ 

ಬೆಂಗಳೂರು: ಸರ್ಕಾರದ ಆಡಳಿತ ಯಂತ್ರದಲ್ಲಿ ಗಣನೀಯ ಕೊಡುಗೆ ನೀಡುತ್ತಿರುವ ಮಹಿಳಾ ನೌಕರರನ್ನು ಅಭಿನಂದಿಸಿ, ಸೆಪ್ಟೆಂಬರ್ 13 ರಂದು ಮಹಿಳಾ ನೌಕರರ ದಿನಾಚರಣೆಯಾಗಿ ಘೋಷಣೆ ಮಾಡುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದರು.
ಅವರು ಇಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ವತಿಯಿಂದ ಮಹಿಳಾ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಹಿಳಾ ನೌಕರರಿಗೆ ಋತುಚಕ್ರ ರಜೆಯನ್ನು ತಿಂಗಳಿಗೆ ಒಂದು ದಿನ ವೇತನ ಸಹಿತ ರಜೆಯನ್ನು ಮಂಜೂರು ಮಾಡಲು ಸರ್ಕಾರ ನಿರ್ಧರಿಸಿದೆ. ಸಂಘದ ಕಚೇರಿಯ ಕಾರ್ಯಚಟುವಟಿಕೆಗಳಿಗೆ ಬಾಲಭವನದಲ್ಲಿ ಸ್ಥಳಾವಕಾಶ ನೀಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರೊಂದಿಗೆ ಚರ್ಚಿಸಲಾಗಿದೆ. ಸೆಪ್ಟೆಂಬರ್ 13 ರಂದು ಮಹಿಳಾ ನೌಕರರ ದಿನಾಚರಣೆಯಾಗಿ ಘೋಷಣೆ ಮಾಡಲಾಗುವುದು ಎಂದರು.
ಲಿಂಗತಾರತಮ್ಯ ಹೋಗಲಾಡಿಸಲು ಸರ್ಕಾರ ಬದ್ಧ : ಸರ್ಕಾರದ ಆಡಳಿತ ಯಂತ್ರದಲ್ಲಿ ಗಣನೀಯ ಕೊಡುಗೆ ನೀಡುತ್ತಿರುವ ಮಹಿಳಾ ನೌಕರರು ಪುರುಷರಿಗೆ ಸರಿಸಮನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಲಿಂಗತಾರತಮ್ಯ ಹೋಗಲಾಡಿಸಲು ಸರ್ಕಾರ ಬದ್ಧವಾಗಿದೆ. ಎಲ್ಲರನ್ನೂ ಸಮಾನವಾಗಿ ಕಾಣುವ ಬದ್ಧತೆ ನಮ್ಮ ಸರ್ಕಾರದ್ದಾಗಿದೆ ಎಂದರು.
ಮೂಢನಂಬಿಕೆ ಹಾಗೂ ಅಂಧಶ್ರದ್ಧೆಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿ : ಹಿಂದಿನ ಕಾಲದಲ್ಲಿ ಮಹಿಳೆಯರು ಅಕ್ಷರ ಸಂಸ್ಕೃತಿಯನ್ನು ವಂಚಿತರಾಗಿದ್ದರು. ಸಂವಿಧಾನ ಜಾರಿಯ ನಂತರ ಎಲ್ಲರಿಗೂ ಶಿಕ್ಷಣ ಸೇರಿದಂತೆ ಸಮಾನ ಹಕ್ಕುಗಳನ್ನು ನೀಡಲಾಯಿತು. ಸ್ವಾತಂತ್ರ್ಯ ಬಂದಾಗ ದೇಶದಲ್ಲಿ ಸಾಕ್ಷರತೆಯ ಪ್ರಮಾಣ 10 ರಿಂದ ಶೇ.12 ರಷ್ಟಿತ್ತು. ಇಂದು ಈ ಪ್ರತಿಶತ ಸುಮಾರು 78 ಕ್ಕೆ ಏರಿದೆ. ಮಹಿಳೆಯರು ತಮ್ಮ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಅವರಲ್ಲಿ ವೈಚಾರಿಕತೆ ಹಾಗೂ ವೈಜ್ಞಾನಿಕತೆಯನ್ನು ಬೆಳೆಸಬೇಕು. ಸಮಾಜದಲ್ಲಿ ಮೂಢನಂಬಿಕೆ ಹಾಗೂ ಅಂಧಶ್ರದ್ಧೆಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದರು.

Call Now Button