Online News in ಕನ್ನಡ

2028ರವರೆಗೂ ಸಿದ್ದರಾಮಯ್ಯ ಮುಖ್ಯಮಂತ್ರಿ: ಮೈಸೂರಲ್ಲಿ ಜಮೀರ್ ಖಾನ್ ಹೇಳಿಕೆ

ಮೈಸೂರು: `2028ರವರೆಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ. ಹೈಕಮಾಂಡ್ ಬಿಟ್ಟು ಬೇರೆ ಯಾರಿಂದಲೂ ಅವರನ್ನು ಕೆಳಗಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಕುರ್ಚಿ ಭದ್ರವಾಗಿದೆ’. ಇದು ಸಚಿವ ಜಮೀರ್ ಅಹಮದ್ ಖಾನ್ ಅವರ ಮಾತು. ಆರಂಭದಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ವಾದ ಮಂಡಿಸುತ್ತಲೇ ಇರುವ ಜಮೀರ್ ಬುಧವಾರ ಮೈಸೂರಿನಲ್ಲಿ ಮತ್ತೊಮ್ಮೆ ತಮ್ಮ ನಿಷ್ಠೆ ಪ್ರದರ್ಶಿಸಿದ್ದಾರೆ.
ಸಿದ್ದರಾಮಯ್ಯ ಅವರು ಕುರ್ಚಿಯಲ್ಲಿ ಕುಳಿತಿದ್ದಾರೆ. ಅವರ ಕುರ್ಚಿಯಲ್ಲಿ ಭದ್ರವಾಗಿದ್ದಾರೆ. ಏನೇ ತೀರ್ಮಾನ ಮಾಡಿದ್ರೂ ಹೈಕಮಾಂಡ್ ಮಾಡಲಿದೆ ಎಂದು ಸ್ವತಃ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ. ಮತ್ತೆ ಮತ್ತೆ ಆ ಮಾತು ಏಕೆ. ಇನ್ನು ಅಧಿಕಾರ ಹಂಚಿಕೆ ವಿಷಯ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.
ರಾಮನಗರದ ಶಾಸಕ ಇಕ್ಬಾಲ್ ಹುಸೇನ್ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಲ್ಲರೂ ಅವರವರ ಅಭಿಪ್ರಾಯ ಹೇಳ್ತಾರೆ. ನಾನು ನನ್ನ ಅಭಿಪ್ರಾಯ ಹೇಳ್ತೀನಿ. ಸಿದ್ದರಾಮಯ್ಯ ಈಗ ಸಿಎಂ ಖುರ್ಚಿ ಮೇಲೆ ಕೂತಿದ್ದಾರೆ. 2028ರವರೆಗೂ ಮುಖ್ಯಮಂತ್ರಿಯಾಗಿ ಆಗಿರುತ್ತಾರೆ. ಇದು ನನ್ನ ಅಭಿಪ್ರಾಯ ಎಂದು ಉತ್ತರಿಸಿದರು.
ಅಂತಿಮವಾಗಿ ನಮ್ಮದು ಹೈಕಮಾಂಡ್ ಪಕ್ಷ. ಸಿಎಂ ಬದಲಾವಣೆ ಮಾಡಬೇಕಿರುವುದು ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ. ಸದ್ಯ ಸಿಎಂ ಬದಲಾವಣೆಯ ಸನ್ನಿವೇಶಗಳು ಇಲ್ಲ ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಅವರ ದೆಹಲಿ ಪ್ರವಾಸ ಕುರಿತು ಕೇಳಿದ ಪ್ರಶ್ನೆಗೆ ಡಿಕೆ ಶಿವಕುಮಾರ್ ಅವರು ತಮ್ಮ ಇಲಾಖೆ ವಿಚಾರಕ್ಕೆ ದೆಹಲಿಗೆ ಹೋಗಿದ್ದಾರೆ. ಹೈಕಮಾಂಡ್ ಅನ್ನು ಅವರು ಭೇಟಿ ಆಗಿಲ್ಲ ಎಂದರು.

Call Now Button