Online News in ಕನ್ನಡ

ನಂಜುಂಡೇಶ್ವರನ ಮಾಸಿಕ ವರಮಾನ ೨.೧೧ ಕೋಟಿ ರೂ !

ನಂಜನಗೂಡು ; ರಾಜ್ಯದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ನಂಜನಗೂಡಿನ ನಂಜುಂಡೇಶ್ವರನ ದೇವಾಲಯದಲ್ಲಿ ಕೇವಲ ಒಂದೇ ತಿಂಗಳಲ್ಲಿ ಬರೋಬರಿ ಎರಡು ಕೋಟಿಗೂ ಅಧಿಕ ಆದಾಯ ಸಂಗ್ರಹವಾಗಿದೆ. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸಿಜೆ ಕೃಷ್ಣ ನೇತೃತ್ವದಲ್ಲಿ ಹುಂಡಿ ಹಣದ ಎಣಿಕೆ ಕಾರ್ಯ ನಡೆಸಲಾಯಿತು.
ನಂಜನಗೂಡಿನ ಬ್ಯಾಂಕ್ ಆಫ್ ಬರೋಡ ಶಾಖೆಯ ವ್ಯವಸ್ಥಾಪಕ ಮತ್ತು ಸಿಬ್ಬಂದಿಗಳು ಹಾಗೂ ಗ್ರಾಮೀಣ ಪ್ರದೇಶದ ಸುತ್ತಮುತ್ತಲ ಮಹಿಳಾ ಸ್ತ್ರೀ ಶಕ್ತಿ ಸಂಘದ ನೂರಾರು ಮಹಿಳೆಯರು ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು.
ನಂಜನಗೂಡಿನ ನಂಜುಂಡೇಶ್ವರನ ದೇವಾಲಯದ ದಾಸೋಹ ಭವನದಲ್ಲಿ ಹುಂಡಿ ಹಣದ ಎಣಿಕೆ ಕಾರ್ಯ ನಡೆಸಲಾಗಿ ಸರಿ ಸುಮಾರು 37 ಹುಂಡಿಗಳನ್ನು ಏಣಿಸಲಾಗಿ ಬರೋಬರಿ 02 ಕೋಟಿ 11 ಲಕ್ಷದ 48 ಸಾವಿರದ 728 ರೂ ಹಣ ಸಂಗ್ರಹವಾಗಿರುವುದು ಕಂಡು ಬಂದಿದೆ.
ದಾಖಲೆಯ ಮೊತ್ತದ ಜೊತೆಗೆ ಭಕ್ತರಿಂದ 58 ಗ್ರಾಂ ಚಿನ್ನ, 2,ಕೆಜಿ 500 ಗ್ರಾಂ ಬೆಳ್ಳಿ, ಜೊತೆಗೆ 46 ವಿದೇಶಿ ಕರೆನ್ಸಿಗಳು ದೊರೆತಿವೆ ಬಹು ಮುಖ್ಯವಾಗಿ ಕಳೆದ ನಾಲ್ಕೈದು ವರ್ಷಗಳಿಂದ ನಿಷೇಧಿತವಾಗಿರುವ 02 ಸಾವಿರ ಬೆಲೆಯ ಕೆಂಪು ಕರೆನ್ಸಿ 500 ರೂ ಹಳೆಯ ನೋಟುಗಳು ಸಹ ಕಂಡು ಬಂದಿದೆ.
ಇತ್ತೀಚೆಗೆ ನಡೆದ ದೊಡ್ಡ ಜಾತ್ರೆ ಹಿನ್ನೆಲೆ ದೇಶದ ನಾನಾ ಮೂಲೆಗಳಿಂದ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಬಂದು ದೇವರ ದರ್ಶನ ಪಡೆದು ತಮ್ಮ ಭಕ್ತಿ ನಮನ ಸ್ಸಲ್ಲಿಸಿದ್ದರು. ಈ ಸಂದರ್ಭ ಭಕ್ತರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆ ಹುಂಡಿ ಕಾಣಿಕೆ ಸಂಗ್ರಹದಲ್ಲೂ ಹೆಚ್ಚಳವಾಗಿ ದಾಖಲೆ ಮೊತ್ತ ಸಂಗ್ರಹವಾಗಿದೆ.
ಈ ಸಂದರ್ಭ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ, ಮುಜರಾಯಿ ಇಲಾಖೆಯ ತಹಸಿಲ್ದಾರ್ ಭಾಗ್ಯ, ಸಹಾಯಕ ಅಧಿಕಾರಿ ಸತೀಶ್, ಸೇರಿದಂತೆ ದೇವಾಲಯದ ಇನ್ನಿತರ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

Call Now Button