Online News in ಕನ್ನಡ

ಮಹಿಳಾ ಮೀಸಲಾತಿ ಜಾರಿ ಖಚಿತ, ಕ್ಷೇತ್ರ ಪುನರ್‌ ವಿಂಗಡಣೆ ಉಚಿತ : ಲೋಕಸಭೆಯಲ್ಲಿ ಪ್ರಧಾನಿ ಅಭಯ

ನವದೆಹಲಿ: ಎಲ್ಲ ರಾಜ್ಯಗಳನ್ನು ವಿಶ್ವಾಸಕ್ಕೆ ಪಡೆದು, ಯಾವುದೇ ರಾಜ್ಯಕ್ಕೆ ಅನ್ಯಾಯವಾಗದಂತೆ ಎಚ್ಚರ ವಹಿಸಿ ಕ್ಷೇತ್ರ ಪುನರ್‌ ವಿಂಗಡಣೆ ಮಾಡಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಭರವಸೆ ನೀಡಿದ್ದಾರೆ.
ಈನಡುವೆ, ಮಹಿಳಾ ಮೀಸಲಾತಿ ಜಾರಿ ಮಸೂದೆಯನ್ನು ಜಾರಿ ಮಾಡಲು ಎಲ್ಲರು ಬೆಂಬಲ ನೀಡಬೇಕು. ಮಹಿಳಾ ಮೀಸಲಾತಿಯನ್ನು ವಿರೋಧಿಸುವವರನ್ನು ದೇಶದ ಮಹಿಳೆಯರು ಕ್ಷಮಿಸುವುದಿಲ್ಲ ಎಂದು ತಿಳಿಸಿದರು.
ಲೋಕಸಭೆಯಲ್ಲಿ ಗುರುವಾರ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗಳ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಮಹತ್ವದ ಮಸೂದೆಗಳ ಕುರಿತು ಬೆಳಗ್ಗೆಯಿಂದ ಚರ್ಚೆ ನಡೆದಿದೆ. ಹಲವು ಸದಸ್ಯರು ಬೇರೆ ಬೇರೆ ವಿಷಯ ಎತ್ತಿದ್ದಾರೆ. ಸದನಕ್ಕೆ ನಿಖರವಾದ ಮಾಹಿತಿ ಒದಗಿಸುತ್ತೇವೆ ಎಂದು ತಿಳಿಸಿದರು.

ʻಕ್ಷೇತ್ರ ಪುನರ್‌ ವಿಂಗಡಣೆಯಾದ ಮೇಲೆ ಕರ್ನಾಟಕದ ಈಗಿನ ಲೋಕಸಭಾ ಕ್ಷೇತ್ರದ ಸ್ಥಾನ ೨೮ರಿಂದ ೪೨ಕ್ಕೆ ಹೆಚ್ಚಾಗಲಿದೆ.

ಹಾಗೆಯೇ ತಮಿಳುನಾಡು ೩೯ರಿಂದ ೫೯, ಬಿಹಾರ ೪೦ರಿಂದ ೬೦, ಮಹಾರಾಷ್ಟ್ರ ೪೮ರಿಂದ ೭೨,

ಒಡಿಸ್ಸಾ ೨೧ರಿಂದ ೩೧ ಹಾಗೂ ಗುಜರಾಜ್‌ ೨೬ರಿಂದ ೩೯ ಸ್ಥಾನಗಳಿಗೆ ಏರಿಕೆಯಾಗಲಿದೆ.

ಲೋಕಸಭೆಯಲ್ಲಿ ಸ್ಥಾನ ಹೆಚ್ಚಾದಂತೆ ಎಸ್ಸಿ ಎಸ್ಟಿ ಕ್ಷೇತ್ರಗಳೂ ಹೆಚ್ಚಾಗಲಿದ್ದು, 

ಮಹಿಳಾ ಮೀಸಲಾತಿ ಜಾರಿಗೆ ಬಂದರೆ ಮಹಿಳೆಯರಿಗೆ ಪುರುಷರಷ್ಟೇ ಸಮಾನ ಅವಕಾಶ ದೊರಕಲಿದೆʼ

25-30 ವರ್ಷಗಳ ಹಿಂದೆಯೇ ಮಹಿಳಾ ಮೀಸಲಾತಿಯನ್ನು ಜಾರಿಗೆ ತರಬೇಕಾಗಿತ್ತು. ಈಗ ಅದನ್ನು ಹೆಚ್ಚು ಪ್ರಬುದ್ಧ ಹಂತಕ್ಕೆ ತರಲಾಗಿದೆ. ಅಗತ್ಯಗಳಿಗೆ ಅನುಗುಣವಾಗಿ ಕಾಲಾನಂತರದಲ್ಲಿ ಇದನ್ನು ಪರಿಷ್ಕರಿಸಲಾಗುವುದು ಎಂದು ಹೇಳಿದರು.
ಅಗತ್ಯಕ್ಕೆ ಅನುಗುಣವಾಗಿ ಕಾಲಕಾಲಕ್ಕೆ ಇದನ್ನು ಪರಿಷ್ಕರಿಸಲಾಗುತ್ತದೆ. ಇದು ಪ್ರಜಾಪ್ರಭುತ್ವದ ಸೌಂದರ್ಯ. ನಮ್ಮದು ಪ್ರಜಾಪ್ರಭುತ್ವದ ತಾಯಿ. ನಮ್ಮ ಪ್ರಜಾಪ್ರಭುತ್ವ ಸಾವಿರಾರು ವರ್ಷಗಳಿಂದ ಅಭಿವೃದ್ಧಿ ಪ್ರಯಾಣವಾಗಿದೆ. ಈ ಸದನದಲ್ಲಿರುವ ನಾವೆಲ್ಲರೂ ಈ ಅಭಿವೃದ್ಧಿ ಪ್ರಯಾಣಕ್ಕೆ ಹೊಸ ಆಯಾಮವನ್ನು ಸೇರಿಸುವ ಶುಭ ಅವಕಾಶವಿದೆ ಎಂದರು.
ನಾನು ಅತ್ಯಂತ ಹಿಂದುಳಿದ ಸಮುದಾಯದಿಂದ ಬಂದಿದ್ದೇನೆ ಆದರೆ ಎಲ್ಲರನ್ನೂ ಜೊತೆಗೆ ಕರೆದೊಯ್ಯುವುದು ನನ್ನ ಜವಾಬ್ದಾರಿಯಾಗಿದೆ. ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸುವವರು ದೀರ್ಘಕಾಲದವರೆಗೆ ಬೆಲೆ ತೆರಬೇಕಾಗುತ್ತದೆ. ಮಹಿಳೆಯರಿಗೆ ಮೀಸಲಾತಿ ನೀಡುವ ಈ ಮಹತ್ವದ ಅವಕಾಶವನ್ನು ನಾವೆಲ್ಲರೂ ಕಳೆದುಕೊಳ್ಳಬಾರದು ಎಂದು ಹೇಳಿದರು.
ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ನಾವು ಅವರ ಹಕ್ಕುಗಳನ್ನು ನೀಡುತ್ತಿದ್ದೆವೆ. ನಮಗೆ ಯಾವುದೇ ಕ್ರೆಡಿಟ್ ಬೇಕಾಗಿಲ್ಲ, ಬೇಕಾದ್ರೆ ನೀವೆ ತಗೊಳ್ಳಿ. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು. ಮಸೂದೆ ಬೆಂಬಲಿಸುವ ಮೂಲಕ ನಾವೆಲ್ಲರೂ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಬೇಕಾಗಿದೆ ಎಂದು ಪ್ರತಿಪಕ್ಷಗಳಿಗೆ ಪ್ರಧಾನಿ ಮನವಿ ಮಾಡಿದರು.
ಮಹಿಳಾ ಮೀಸಲಾತಿ ಜಾರಿ ಸಂಬಂಧ ನಾಳೆ ಸಂಜೆ ಲೋಕಸಭೆಯಲ್ಲಿ ಮತಕ್ಕೆ ಹಾಕಲಾಗುವುದು, ಮಸೂದೆ ಜಾರಿಯಾಗುವ ವಿಶ್ವಾಸವನ್ನು ಆಡಳಿತರೂಢ ಬಿಜೆಪಿ ಪಕ್ಷದ ನಾಯಕರು ವ್ಯಕ್ತಪಡಿಸಿದ್ದಾರೆ.

Call Now Button