ಬೆಳಗಾವಿ: ಬೆಳಗಾವಿ ಚಳಿಗಾಲದ ಅಧಿವೇಶನದ ಒಳಗೆ ಮತ್ತು ಹೊರಗೆ `ಮುಖ್ಯಮಂತ್ರಿ ಬದಲಾವಣೆ’ ಚರ್ಚೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ರಾಜ್ಯದಲ್ಲಿ ಇನ್ನೇನು ನಾಯಕತ್ವ ಬದಲಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪಟ್ಟಕ್ಕೇರಲಿದ್ದಾರೆ. ಈ ಸಂಬಂಧ ಪ್ರಮಾಣವಚನದ ದಿನಾಂಕವೂ ನಿಗದಿಯಾಗಿದೆ ಎಂದೆಲ್ಲ ಹಬ್ಬಿದ ಸುದ್ದಿಗಳೆಲ್ಲ ಸುಳ್ಳು ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರು `ಮುಖ್ಯಮಂತ್ರಿ ಬದಲಾವಣೆ’ ಮಾತೇ ಇಲ್ಲ ಎಂದು ಕಡ್ಡಿ ತುಂಡಾಗುವ ಹಾಗೆ ನುಡಿದಿದ್ದಾರೆ.
ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, `ಮುಖ್ಯಮಂತ್ರಿ ಹುದ್ದೆಯಲ್ಲಿ ಯಾವುದೇ ಗೊಂದಲವಾಗಲಿ, ಭಿನ್ನಾಭಿಪ್ರಾಯವಾಗಲಿ, ಗುದ್ದಾಟವಾಗಲಿ ಇಲ್ಲ. ಎಲ್ಲವೂ ಸ್ಪಷ್ಪವಾಗಿದೆ. ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ, ನನ್ನ ತಂದೆಯೆ 5 ವರ್ಷ ಸಿಎಂ ಆಗಿ ಇರುತ್ತಾರೆ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇದಕ್ಕೆ ಮುಖ್ಯಮಂತ್ರಿಗಳೇ ಉತ್ತರ ನೀಡುತ್ತಾರೆ ಎಂದರು.
ಅದೂ ಹೇಳಿಲ್ಲ ಇದೂ ಹೇಳಿಲ:
ಡಾ. ಯತೀಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಚಿವ ಸತೀಶ್ ಜಾರಕೀಹೊಳಿ, `ಅವರು ಹೇಳಿಯಾಗಿದೆ, ಈಗ ಏನೂ ಮಾಡುವುದಕ್ಕೆ ಅಗಲ್ಲ. ಹಾಗೆ ಹೇಳಿರುವುದರಿಂದ ಲಾಭ ಎಷ್ಟು ನಷ್ಟ ಎಷ್ಟು ಎಂಬ ಬಗ್ಗೆ ಚರ್ಚೆ ಮಾಡೋಣ. ಸಿಎಂ ಬದಲಾವಣೆ ಚರ್ಚೆ ಒಂದು ವರ್ಷದಿಂದ ನಡೆಯುತ್ತಿದೆ. ಸಿದ್ದರಾಮಯ್ಯ ಅವರ ಜಾಗಕಕ್ಕೆ ಬೇರೆಯವರು ಬರಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಆಯ್ಕೆ ಮಾಡುವಾಗ ಅರ್ಧ ಅಂತಾನೂ ಹೇಳಿಲ್ಲ, ಪೂರ್ತಿ ಅಂತಾನೂ ಹೇಳಿಲ್ಲ. ಹಾಗಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ನುಡಿದರು.


