Online News in ಕನ್ನಡ

ಉತ್ತರ ಕರ್ನಾಟಕ ಹಾಲು ಒಕ್ಕೂಟ: ರೈತರ ಪಾಲಿನ ಹಣ ನಿಗಧಿಯಲ್ಲಿ ತಾರತಮ್ಯ

ಬೆಂಗಳೂರು (ಉತ್ತರ ಕರ್ನಾಟಕ) ಆಗಸ್ಟ್ 18, ಕರ್ನಾಟಕ ಹಾಲು ಮಹಾಮಂಡಳಗಳ ಪೈಕಿ ಉತ್ತರ ಕರ್ನಾಟಕ ಭಾಗದ ಒಕ್ಕೂಟಗಳಲ್ಲಿ ರೈತರಿಗೆ ಪಾವತಿಸುವ ಹಾಲು ಖರೀದಿ ದರ ಅತ್ಯಂತ ಕಡಿಮೆ ಇದ್ದು, ರಾಜ್ಯಾದ್ಯಂತ ಏಕರೂಪದ ದರ ನಿಗದಿಪಡಿಸಬೇಕು ಎಂದು ವಿಧಾನಸಭೆಯಲ್ಲಿಂದು ಒತ್ತಾಯಿಸಲಾಯಿತು.
ಪ್ರಶ್ನೋತ್ತರದ ಅವಧಿಯಲ್ಲಿ ಶಾಸಕ ಅರವಿಂದ ಬೆಲ್ಲದ್‌ ಅವರ ಪ್ರಶ್ನೆಗೆ ಉತ್ತರಿಸಿದ ಪಶುಸಂಗೋಪನ ಸಚಿವ ಕೆ ವೆಂಕಟೇಶ್‌ ಅವರು, ನಮ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಈವರೆಗೂ ಎರಡು ಹಂತದಲ್ಲಿ 3 ಮತ್ತು 4 ರೂಪಾಯಿಗಳಂತೆ ಒಟ್ಟು ಏಳು ರೂ.ಗಳ ಹಾಲಿನ ದರ ಹೆಚ್ಚಳ ಮಾಡಲಾಗಿದೆ. ಏಪ್ರಿಲ್‌ 1ರಂದು ಹೆಚ್ಚಳ ಮಾಡಿದ 4 ರೂ. ಹಾಲಿನ ದರವನ್ನು ನೇರ ಪಾವತಿ ವ್ಯವಸ್ಥೆಯ ಮೂಲಕ ರೈತರಿಗೆ ನೀಡಲಾಗುತ್ತಿದೆ ಎಂದು ವಿವರಿಸಿದರು.
ಪಶು ಆಹಾರ, ಔಷಧಿ, ಲಸಿಕೆ ಹಾಗೂ ಮಾನವ ಬಳಕೆ ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ ಹಾಲಿನ ಖರೀದಿ ದರವನ್ನು ಹೆಚ್ಚಿಸಿ ರೈತರಿಗೆ ನೆರವು ನೀಡಬೇಕು ಎಂದು ಶಾಸಕರು ಒತ್ತಾಯಿಸಿದರು.
ಅದರ ಅನುಸಾರ ಸರ್ಕಾರ ಕ್ರಮ ಕೈಗೊಂಡಿದೆ. ಮುಖ್ಯಮಂತ್ರಿ ಅವರು ಒಕ್ಕೂಟ ಪದಾಧಿಕಾರಿಗಳ ಜೊತೆ ಚರ್ಚೆ ಮಾಡಿ ಹೆಚ್ಚಳವಾಗಿರುವ ಹಾಲಿನ ದರವನ್ನು ರೈತರಿಗೆ ವರ್ಗಾವಣೆ ಮಾಡಬೇಕು ಮತ್ತು ಮುಂದಿನ ದಿನಗಳಲ್ಲಿ ಹಾಲಿನ ದರಕ್ಕೆ ಸಂಬಂಧಪಟ್ಟಂತೆ ಸರ್ಕಾರದ ಗಮನಕ್ಕೆ ತರದೆ ಏಕಾಏಕಿ ಕ್ರಮ ಕೈಗೊಳ್ಳಬಾರದು ಎಂದು ಸೂಚಿಸಿರುವುದಾಗಿ ತಿಳಿಸಿದರು.
ರಾಜ್ಯದಲ್ಲಿ 16 ಜಿಲ್ಲಾ ಹಾಲು ಒಕ್ಕೂಟಗಳಿದ್ದು 8.89 ಲಕ್ಷ ಸಕ್ರಿಯ ಸದಸ್ಯರಿದ್ದಾರೆ. ದಿನನಿತ್ಯ 99.6 ಲಕ್ಷ ಕೆಜಿ ಹಾಲು ಶೇಖರಣೆಯಾಗುತ್ತಿದೆ. ಪ್ರತಿ ಲೀಟರ್‌ ಗೆ 31.31 ರೂ. ಖರೀದಿ ದರ ಇತ್ತು. 4 ರೂ. ಹೆಚ್ಚಳದ ಬಳಿಕ ಖರೀದಿ ದರ 35.30 ರೂಪಾಯಿಗಳಾಗಿದೆ. ಗ್ರಾಹಕರಿಗೆ 46 ರೂಪಾಯಿಗಳಿಗೆ ಹಾಲು ಮಾರಾಟವಾಗುತ್ತಿದೆ. ಖರೀದಿ ಮತ್ತು ಮಾರಾಟದ ನಡುವೆ 10.70 ರೂ. ವ್ಯತ್ಯಾಸಗಳಿದ್ದು, ಈ ಹಣದಲ್ಲಿ ಒಕ್ಕೂಟಗಳ ಮೂಲಭೂತ ಸೌಕರ್ಯ, ಹಾಲು ಸಾಗಾಣಿಕೆ, ಸಂಸ್ಕರಣೆ ಸಿಬ್ಬಂದಿಗಳ ವೇತನ ಪಾವತಿಸಲಾಗುತ್ತಿದೆ ಎಂದು ವಿವರಿಸಿದರು.
ಹಾಲಿನ ದರ ಹೆಚ್ಚಳದ ಬಳಿಕವೂ ಕರ್ನಾಟಕದಲ್ಲಿ ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಿಗಿಂತಲೂ ಕಡಿಮೆ ಬೆಲೆ ಇದೆ. ಮಹಾರಾಷ್ಟ್ರದಲ್ಲಿ ಪ್ರತಿ ಲೀಟರ್‌ಗೆ 52 ರೂ.ಗಳಿದ್ದರೆ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ತಲಾ 60 , ಗುಜರಾತ್‌ ನಲ್ಲಿ 54 ಕೇರಳದಲ್ಲಿ 53 ರೂ.ವೆ ಎಂದು ವಿವರಿಸಿದ್ದರು.
ಒಕ್ಕೂಟಗಳಿಂದ ಹಾಲು ಖರೀದಿಸುವ ದರವನ್ನು ವಿವರಿಸಿದ ಸಚಿವರು, ದಕ್ಷಿಣ ಕನ್ನಡದಲ್ಲಿ ರೈತರಿಗೆ 39.98, ತುಮಕೂರಿನಲ್ಲಿ 37, ಹಾಸನದಲ್ಲಿ 34.50, ಶಿವಮೊಗ್ಗದಲ್ಲಿ 34.21, ಬೆಳಗಾವಿಯಲ್ಲಿ 33, ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ 35.40, ಮೈಸೂರಿನಲ್ಲಿ 36.10, ಹಾವೇರಿಯಲ್ಲಿ 34.50, ಬೆಂಗಳೂರಿನಲ್ಲಿ 36.16, ವಿಜಯಪುರದಲ್ಲಿ 33.90, ಚಾಮರಾಜನಗರದಲ್ಲ 35.20, ಮಂಡ್ಯದಲ್ಲಿ 35.30, ಕಲಬುರ್ಗಿಯಲ್ಲಿ 35.04, ಧಾರವಾಡದಲ್ಲಿ 35, ಬಳ್ಳಾರಿಯಲ್ಲಿ 34.19 ನಿಗದಿಪಡಿಸಲಾಗಿದೆ. ಒಟ್ಟು ಸರಾಸರಿ 35.30 ರೂ.ಗಳಿಗೆ ಹಾಲು ಖರೀದಿ ಮಾಡುತ್ತಿರುವುದಾಗಿ ವಿವರಿಸಿದರು.
ಶಾಸಕರಾದ ಅರವಿಂದ ಬೆಲ್ಲದ್‌, ಸುರೇಶ್‌ ಕುಮಾರ್‌ ಹಾಗೂ ಮತ್ತಿತರರು ದಕ್ಷಿಣ ಕನ್ನಡ ಹಾಗೂ ಮಧ್ಯ ಕರ್ನಾಟಕ ಭಾಗದಲ್ಲಿನ ರೈತರಿಗೆ ಹೆಚ್ಚಿನ ದರ ನೀಡಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ರೈತರಿಗೆ ಕಡಿಮೆ ಹಣ ನೀಡುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ಉತ್ಪಾದನಾ ವೆಚ್ಚ ಹೆಚ್ಚಾಗಿದ್ದರೆ ಅದನ್ನು ಸರ್ಕಾರವೇ ಭರಿಸಲಿ, ರೈತರ ಮೇಲೆ ಹೊರೆ ಹಾಕಬಾರದು, ರಾಜ್ಯಾದ್ಯಂತ ಏಕರೂಪದರ ದರ ನಿಗದಿ ಮಾಡಿ ಎಂದು ಆಗ್ರಹಿಸಿದ್ದರು.
ಹಾಲು ಒಕ್ಕೂಟಗಳು ಚುನಾಯಿತ ಸದಸ್ಯರನ್ನು ಒಳಗೊಂಡ ಸ್ವತಂತ್ರ ಆಡಳಿತ ವ್ಯವಸ್ಥೆಯನ್ನು ಹೊಂದಿವೆ. ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ದರ ನಿಗದಿ ಮಾಡುತ್ತಿವೆ. ಈ ವಿಚಾರವಾಗಿ ಸರ್ಕಾರ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದರು. ಸಭಾಧ್ಯಕ್ಷರು ಹಾಲು ಒಕ್ಕೂಟಗಳ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಿ ಎಂದು ಸಚಿವರಿಗೆ ಸಲಹೆ ನೀಡಿದರು.

 

Call Now Button