ಬೆಂಗಳೂರು, ಆಗಸ್ಟ್ 18- ಬಿಪಿಎಲ್ ಪಡಿತರಚೀಟಿ ಒಳಗೆ ಸೇರ್ಪಡೆಯಾಗಿರುವ ಎಪಿಎಲ್ ಫಲಾನುಭವಿಗಳನ್ನು ತೆಗೆದು ಹಾಕುವ ಪ್ರಕ್ರಿಯೆ ಅಧಿವೇಶನ ಮುಗಿದ ನಂತರ ಪ್ರಾರಂಭಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಹಾಗೂ ಡಾ.ಯತೀಂದ್ರ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಎರಡೂವರೆ ವರ್ಷಗಳಿಂದ ಪಡಿತರಚೀಟಿಗಳನ್ನು ವಿತರಣೆ ಮಾಡಲಾಗಿಲ್ಲ. ಇದಕ್ಕೆ ಕೆಲವು ತಾಂತ್ರಿಕ ಕಾರಣಗಳು ಇವೆ ಎಂದು ಸಚಿವರು ಒಪ್ಪಿಕೊಂಡರು.
ದಕ್ಷಿಣ ಭಾರತದಲ್ಲಿ ಅತಿಹೆಚ್ಚು ಬಿಪಿಎಲ್ ಪಡಿತರ ಚೀಟಿಗಳನ್ನು ಹೊಂದಿರುವ ಫಲಾನುಭವಿಗಳ ಸಂಖ್ಯೆ ಕರ್ನಾಟಕದಲ್ಲಿ ಅತಿಹೆಚ್ಚು. ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಕೇರಳ ರಾಜ್ಯಗಳಲ್ಲಿ ಹೋಲಿಕೆ ಮಾಡಿದರೆ ನಮಲ್ಲಿ 1.10 ಕೋಟಿ ಫಲಾನುಭವಿಗಳಿದ್ದಾರೆ ಎಂದು ಹೇಳಿದರು.
ಈ ಹಿಂದೆ ಬಿಪಿಎಲ್ನಲ್ಲಿ ಸೇರ್ಪಡೆಯಾಗಿದ್ದ 1,15,000 ಫಲಾನುಭವಿಗಳನ್ನು ತೆಗೆದು ಹಾಕಲು ಮುಂದಾದಾಗ ಅನೇಕ ತೊಂದರೆಗಳು ಎದುರಾದವು. ಒಂದು ವೇಳೆ ಅಂದು ತೆಗೆದು ಹಾಕಿದ್ದರೆ ಇಂದು ಬಿಪಿಎಲ್ ಅರ್ಹ ಫಲಾನುಭವಿಗಳಿಗೆ ನೀಡಲು ಅನುಕೂಲವಾಗುತ್ತಿತ್ತು. ಅಧಿವೇಶನ ಮುಗಿದ ನಂತರ ಅನರ್ಹರನ್ನು ತೆಗೆದು ಹಾಕಲಾಗುವುದು. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಮುನಿಯಪ್ಪ ಮನವಿ ಮಾಡಿದರು.
ಒಂದು ವೇಳೆ ನಿಜವಾದ ಫಲಾನುಭವಿಗಳ ಹೆಸರು ಬಿಟ್ಟು ಹೋಗಿದ್ದರೆ ತಹಸೀಲ್ದಾರ್ಗೆ ಅರ್ಜಿ ಸಲ್ಲಿಸಿದರೆ 24 ಗಂಟೆಯೊಳಗೆ ಸೇರ್ಪಡೆಯಾಗುತ್ತಾರೆ. ಅನಗತ್ಯವಾಗಿ ಯಾರೂ ಗೊಂದಲಕ್ಕೆ ಒಳಗಾಗಬಾರದೆಂದು ಮನವಿ ಮಾಡಿದರು.
ರಾಜ್ಯದಲ್ಲಿ ಒಟ್ಟು 1.10 ಕೋಟಿ ಬಿಪಿಎಲ್ ಫಲಾನುಭವಿಗಳಿದ್ದಾರೆ. ಇವರೆಲ್ಲರಿಗೂ ಪ್ರತಿ ತಿಂಗಳು 10 ಕೆಜಿ ಅಕ್ಕಿಯನ್ನು ನೀಡುತ್ತೇವೆ. ಬಿಪಿಎಲ್ ಪಡಿತರಚೀಟಿಯನ್ನು ನೀಡಬೇಕೆಂಬ ಬೇಡಿಕೆ ಹೆಚ್ಚಿದೆ. ಪರಿಶೀಲಿಸಿ ಸೂಕ್ತವಾದ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ಆಶ್ವಾಸನೆ ನೀಡಿದರು.


