Online News in ಕನ್ನಡ

ರಹಸ್ಯವಾಗಿ ಉಳಿದ ಸಿಎಂ ಸಿದ್ದರಾಮಯ್ಯ – ಎಐಸಿಸಿ ಅಧ್ಯಕ್ಷ ಖರ್ಗೆ ಮಾತುಕತೆ

‘ ನನ್ನ ಮತ್ತು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರದ್ದು ಸೌಹಾರ್ದ ಭೇಟಿಯಾಗಿತ್ತು. ಮುಂಬರುವ ನಗರಪಾಲಿಕೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಚರ್ಚೆ ನಡೆಯಿತು. ನಾಯಕತ್ವ ಬದಲಾವಣೆ ಬಗ್ಗೆ ಮಾತುಕತೆ ನಡೆದೆ ಇಲ್ಲ. ಸಿಎಂ ಬದಲಾವಣೆ ಅನ್ನೋದು ಮಾಧ್ಯಮಗಳ ಸೃಷ್ಟಿ. ಶಾಸಕರೂ ಹೈ ಕಮಾಂಡ್ ಮಾತು ಕೇಳಬೇಕು, ಸಚಿವರೂ ಕೇಳಬೇಕು, ನಾನೂ ಕೇಳಬೇಕು, ಡಿ.ಕೆ.ಶಿವಕುಮಾರ್ ಸಹ ಕೇಳಬೇಕು. ನಾನು ಯಾವತ್ತೂ ಡಲ್ಲಾಗಿ ಇರಲ್ಲ. ನಾನು ಹೆಚ್ಚಾಗಿ ಖುಷಿನೂ ಪಡಲ್ಲ, ದುಃಖನೂ ಪಡಲ್ಲ – ಸಿದ್ದರಾಮಯ್ಯ, ಮುಖ್ಯಮಂತ್ರಿ

ಬೆಂಗಳೂರು: ಕಾಂಗ್ರೆಸ್‍ನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣದಿಂದ ಭುಗಿಲೆದ್ದಿರುವ ನಾಯಕತ್ವ ಬದಲಾವಣೆ ಕೂಗಿನ ಹಿನ್ನಲ್ಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಭೇಟಿ ಮಾಡಿ ಚರ್ಚಿಸಿದ್ದಾರೆ. ಸಂಜೆ ಸದಾಶಿವನಗರದ ಖರ್ಗೆ ನಿವಾಸಕ್ಕೆ ತೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಗಂಟೆಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ಒಳಗಿನ ವಿದ್ಯಮಾನಗಳ ಕುರಿತು ಸುದೀರ್ಘವಾಗಿ ಮಾತುಕತೆ ನಡೆಸಿದರು.
ಕಳದೆ ಕೆಲ ದಿನಗಳಿಂದ ಕಾಂಗ್ರೆಸ್‍ನಲ್ಲಿ ನಡೆಯುತ್ತಿರುವ ಬೆಳವಣಿಗೆ, ನಾಯಕಗಳ ಭಿನ್ನರಾಗದಿಂದ ಪಕ್ಷ ಮತ್ತು ಸರಕಾರದ ಮೇಲಾಗುವ ಪರಿಣಾಮ ಮತ್ತು ಇದನ್ನೇ ಅಸ್ತ್ರವಾಗಿಸಿಕೊಂಡು ಪ್ರತಿಪಕ್ಷ ಬಿಜೆಪಿ ಸರಕಾರವನ್ನು ಟಾರ್ಗೆಟ್ ಮಾಡುತ್ತಿರುವ ಬಗ್ಗೆ ನಾಯಕರಿಬ್ಬರೂ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಸರಕಾರಕ್ಕೆ ನ.20ರಂದು ಎರಡೂವರೆ ವರ್ಷ ಪೂರೈಸಿದ ದಿನವೇ ಡಿಕೆ ಬ್ರದರ್ ಸಿಡಿಸಿದ ಬಾಂಬ್‍ಗೆ ಪಕ್ಷದೊಳಗೆ ಅಲ್ಲೋಲ ಕಲ್ಲೋನ ಸೃಷ್ಟಿಸಿತ್ತು. ಡಿಕೆಶಿ ಪರ ಬೆಂಬಲಿಗ ಶಾಸಕರ ಗುಂಪು ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷರ ಭೇಟಿಗೆ ಯತ್ನಿಸಿದ್ದವು. ಇತ್ತ ಮಾಜಿ ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತು ಉಳಿಸಿಕೊಳ್ಳಲಿದ್ದಾರೆ ಎಂದು ಹೇಳುವ ಮೂಲಕ ಅಧಿಕಾರ ಹಂಚಿಕೆಯ ಒಪ್ಪಂದ ಆಗಿದೆ ಎಂಬಂತೆ ಮಾತನಾಡಿದ್ದರು.
ಈ ಎಲ್ಲ ಬೆಳವಣಿಗೆಯಿಂಂದ ಪಕ್ಷದ ವರ್ಚಸ್ಸು ಮತ್ತು ಸರಕಾರಕ್ಕೆ ಅಸ್ಥಿರತೆ ಕಾಡಲಾರಂಭಿಸಿದೆ ಎಂದು ಹಲವು ನಾಯಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಈ ಹಿನ್ನಲ್ಲೆಯಲ್ಲಿ ದೂರವಾಣೀ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದ ಖರ್ಗೆ ನಿನ್ನೆ ರಾಜ್ಯಕ್ಕೆ ಆಗಮಿಸಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆಯೂ ಸಿಎಂ ಸಿದ್ದರಾಮಯ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ನಿಗದಿಯಾದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ಇಂದು ಬೆಳಗ್ಗೆಯೂ ಮೀನುಗಾರಿಕೆ ಇಲಾಖೆ ಆಯೋಜಿಸಿದ್ದ ವಿಶ್ವ ಮೀನುಗಾರಿಕಾ ದಿನಾಚರಣೆಯಲ್ಲಿ ಭಾಗವಹಿಸಿದ್ದರು. ವಿಶೇಷವೆಂದರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ವೇದಿಕೆ ಹಂಚಿಕೊಂಡರು. ವೇದಿಕೆಯಲ್ಲಿ ಪರಸ್ಪರ ಮಾತುಗಳನ್ನಾಡಿ, ಏನೂ ನಡೆದಿಲ್ಲವೇನೋ ಎಂಬಂತೆ ಉಭಯ ನಾಯಕರು ವರ್ತಿಸಿದರು.
ನಂತರ ನಿರಂತರವಾಗಿ ತಮ್ಮ ಆಪ್ತ ಶಾಸಕರು, ಸಚಿವರು ಮತ್ತು ನಾಯಕರೊಂದಿಗೆ ಸಭೆಗಳ ಮೇಲೆ ಸಭೆಗಳನ್ನು ನಡೆಸಿದ ಸಿದ್ದರಾಮಯ್ಯ ನಂತರ ರಾತ್ರಿ 8 ಗಂಟೆ ನಂತರ ಸದಾಶಿವನಗರದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಈನಡುವೆ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಕ್ಕೆ ಬಂದಾಗಲೆಲ್ಲ ಅವರನ್ನು ಭೇಟಿ ಮಾಡೇ ಮಾಡುತ್ತೇನೆ. ಅವರ ನಿವಾಸಕ್ಕೂ ನನ್ನ ನಿವಾಸಕ್ಕೂ 100 ಮೀಟರ್ ಅಂತರವಷ್ಟೇ. ಈಗಲೂ ಭೇಟಿ ಮಾಡಲು ನನಗೆ ಯಾವುದೇ ಅಭ್ಯಂತರವಿಲ್ಲ ಎಂದು ನುಡಿದ್ದಾರೆ. ಈನಡುವೆ, ದೆಹಲಿಗೆ ತೆರಳಿದ್ದ ಗುಬ್ಬಿ ಶಾಸಕ ಶ್ರೀನಿವಾಸ್ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನಾನು ಸಚಿವ ಸ್ಥಾನ ಕೇಳಲು ದೆಹಲಿಗೆ ಹೋಗಿದ್ದೆ ಎಂದಿದ್ದಾರೆ.
`ನಾನು ಎಂದೂ ಸಹ ಡಿ.ಕೆ.ಶಿವಕುಮಾರ್ ಪರ ಎಂದು ಹೇಳಿಲ್ಲ. ನನಗೆ ಸಿಎಂ ಮತ್ತು ಡಿಸಿಎಂ ಇಬ್ಬರೂ ಸಮಾನರೇ. ನನಗೆ ಮಂತ್ರಿಗಿರಿ ನೀಡಬೇಕೆಂದು ಹೋಗಿದ್ದೆ. ಆದರೆ, ದೆಹಲಿ ತಲುಪುತಿದ್ದಂತೆಯೇ ಮಾಧ್ಯಮಗಳಲ್ಲಿ ಬಂದ ಸುದ್ದಿಗಳನ್ನು ನೋಡಿ ಯಾರನ್ನೂ ಭೇಟಿಯಾಗದೆ ಮರಳಿ ಕರ್ನಾಟಕಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.

Call Now Button