Online News in ಕನ್ನಡ

ರಾಹುಲ್ ಗಾಂಧಿ ಮೌನ ಮುರಿಯದಿದ್ದರೆ ಕಾಂಗ್ರೆಸ್ ದೊಡ್ಡ ಬೆಲೆ ತೆರಬೇಕಾಗುತ್ತದೆ..!

ಕೆ.ದೀಪಕ್,

ಕಾಲಮಾನ – 6

ಪ್ರಧಾನ ಸಂಪಾದಕ, ವಿಜಯಕಾಲ ದಿನಪತ್ರಿಕೆ

ಮೇ 20, 2023ರಂದು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ ಕ್ಷಣ ರಾಜ್ಯದಲ್ಲಿ ರಾಜಕೀಯದ ಹೊಸ ಮನ್ವಂತರ ಆರಂಭಗೊಂಡ ಲಕ್ಷಣಗಳು ಗೋಚರಿಸಿತು. 40 ಪರ್ಸೆಂಟ್ ಆರೋಪಿತ ಬಿಜೆಪಿ ಸರಕಾರವನ್ನು ಕಿತ್ತೊಗೆದ ಮತದಾರ ಪ್ರಭುಗಳು ಗ್ಯಾರಂಟಿಗಳ ಸರಕಾರವನ್ನು ಪ್ರತಿಷ್ಠಾಪಿಸಿದ್ದರು. ಆರಂಭದಲ್ಲಿ ಮುಖ್ಯಮಂತ್ರಿ ಗದ್ದುಗೆಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟ ನಡೆದಿತ್ತಾದರೂ ಪ್ರಮಾಣವಚನ ಸಮಾರಂಭದಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಉಭಯ ನಾಯಕರ ಕೈ-ಕೈ ಹಿಡಿದು ಮೇಲಕೆತ್ತಿ ಒಗ್ಗಟ್ಟು ಪ್ರದರ್ಶಿಸಿದ್ದು ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕೈ ಹಿಡಿದ್ದ ಮತದಾರನ ಮುಖದಲ್ಲಿ ಮಂದಹಾಸ ಮೂಡಿಸಿತ್ತು.
ಆದರೆ, ಕಾಂಗ್ರೆಸ್ ಸರಕಾರ ಆಡಳಿತ ಆರಂಭಿಸಿದ ಗಳುಗೆಯಿಂದಲೇ ` ಐದು ವರ್ಷದ ಅಧಿಕಾರ ಹಂಚಿಕೆ ಸೂತ್ರ’ ದ ಲೆಕ್ಕಾಚಾರಗಳು ರಾಜಕೀಯ ಮೊಗಸಾಲೆಯಲ್ಲಿ ಪಿಸುಗುಡಲಾರಂಭಿಸಿತು. ` ಐದು ವರ್ಷ ಅವಧಿಯಲ್ಲಿ `ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ 50:50 ಅನುಪಾತದಲ್ಲಿ ಅಧಿಕಾರ ಹಂಚಿಕೆಯಾಗಿದೆ’ ಎಂದೂ, `ಮೊದಲ ಎರಡು ವರ್ಷ ಇವರಿಗೆ, 3 ವರ್ಷ ಅವರಿಗೆ’ ಎಂದೂ, `ಕೊನೆಯ ಎರಡು ವರ್ಷ ಡಿಕೆಶಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಲಾಗುವುದು’ ಎಂದೂ, ಇನ್ನೂ ಮುಂದುವರೆದು `ಯಾವ ಒಪ್ಪಂದವೂ ಆಗಿಲ್ಲ. 5 ವರ್ಷಗಳ ಕಾಲ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿರುತ್ತಾರೆ’… ಹೀಗೆ ಅವರವರ ಭಾವಕ್ಕೆ ಅವರವರ ಭಕ್ತಿಗೆ ಅನುಸಾರವಾಗಿ ಅಭಿಪ್ರಾಯಗಳು ವ್ಯಕ್ತಪಡಿಸುತ್ತಿದವು. ಆದರೆ, ಇದ್ಯಾವುದರ ಪರಿವೇ ಇಲ್ಲದವರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉತ್ತಮ ಸಮನ್ವಯತೆಯಿಂದಲೇ ಸರಕಾರ ಮುನ್ನಡೆಸಿಕೊಂಡು ಬಂದಿದ್ದಾರೆ.
ಬಿಜೆಪಿ ಸರಕಾರದಲ್ಲಿ ರಾಜ್ಯ ಕಂಡ ಆರ್ಥಿಕ ದಿವಾಳಿತನ ಮತ್ತು ಪ್ರಸ್ತುತ ಬಿಜೆಪಿ ನೇತೃತ್ವದ ಎನ್‍ಡಿಎ ಸರಕಾರದ ಆರ್ಥಿಕ ಅಸಹಕಾರದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ. ಪಂಚ ಗ್ಯಾರಂಟಿಗಳ ಅನುಷ್ಠಾನ ಪ್ರಾಧಿಕಾರವನ್ನು ರಚಿಸುವುದರ ಮೂಲಕ ತಾಲೂಕು ಮಟ್ಟದಿಂದ ರಾಜ್ಯದ ಉದ್ದಗಲಕ್ಕೂ ಗ್ಯಾರಂಟಿ ಯೋಜನೆಗಳ ಪರಾಮರ್ಶೆಯಾಗುತ್ತಿದೆ. ಈ ಯೋಜನೆಗಳ ಫಲ ಅನುಭವಿಸುತ್ತಿರುವ ಜನರು ದಿಲ್‍ಖುಷ್ ಆಗಿದ್ದಾರೆ. ಆರ್ಥಿಕ ಸವಾಲುಗಳ ನಡುವೆಯೂ ಕ್ಷೇತ್ರಾಭಿವೃದ್ಧಿ ಕೆಲಸಗಳು ಇತ್ತೀಚಿನ ತಿಂಗಳುಗಳಲ್ಲಿ ವೇಗ ಪಡೆದುಕೊಂಡಿದೆ. ಬಹುಮುಖ್ಯವಾಗಿ ಎಲ್ಲ 135 ಶಾಸಕರು ಯಾವ ಕಡೆಗೂ ತಿರುಗಿ ನೋಡದಂತೆ ನಿಯಂತ್ರಣದಲ್ಲಿಟ್ಟುಕೊಳ್ಳುವಲ್ಲಿ ಸಿಎಂ ಮತ್ತು ಡಿಸಿಎಂ ಯಶಸ್ವಿಯಾಗಿದ್ದಾರೆ.

2023 ಮೇ 10ರಂದು ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 224 ಸ್ಥಾನಗಳ ಪೈಕಿ ಕಾಂಗ್ರೆಸ್ ಅಭ್ಯರ್ಥಿಗಳು 135 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದರು. ಈ ಗೆಲುವು 1989ರಿಂದ ಈಚೆಗೆ ರಾಜ್ಯದಲ್ಲಿ ಕಾಂಗ್ರೆಸ್ ಗಳಿಸಿದ ಬಹು ದೊಡ್ಡ ಗೆಲುವಾಗಿತ್ತು. ಮತ್ತು ಮತಗಳಿಕೆಯಲ್ಲೂ 25 ವರ್ಷಗಳ ಬಳಿಕ ಅತೀ ಹೆಚ್ಚು ಶೇ. 42.88ರಷ್ಟು ಸಾಧನೆ ಮಾಡಿತ್ತು. ಅಂದು ಬಿಜೆಪಿ ಸರಕಾರದ ದುರಾಡಳಿತ, ಭ್ರಷ್ಟಾಚಾರ ಹಾಗೂ ಸಂವಿಧಾನ ವಿರೋಧಿ ನಿಲುವುಗಳಿಂದ ಕೇಸರಿ ಪಕ್ಷವನ್ನು ಜನ ತಿರಸ್ಕರಿಸಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ 66 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಮಾತ್ರ ಶಕ್ತವಾಯಿತು. ಇನ್ನು ಅವಕಾಶವಾದಿ ರಾಜಕಾರಣದ ಕಳಂಕ ಹೊತ್ತಿದ್ದ ಜಾತ್ಯಾತೀತ ಜನತಾದಳ ಕೇವಲ 19 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಯಿತು. ಸದ್ಯ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ, ಸರಕಾರ ಭದ್ರವಾಗಿದೆ. ಆದರೆ, ` ಅಧಿಕಾರ ಹಂಚಿಕೆ’ ಎಂಬ ಅಗೋಚರ ಲೆಕ್ಕಾಚಾರ ಸ್ಥಿರವಾದ ಸರಕಾರವನ್ನು ಅಸ್ಥಿರದೆಡೆಗೆ ಕೊಂಡೊಯ್ಯುತ್ತಿದೆ…

ಆದರೆ, ನವೆಂಬರ್ 20 ಸಿದ್ದರಾಮಯ್ಯ ಅವರ ಸರಕಾರಕ್ಕೆ ಎರಡೂವರೆ ವರ್ಷ ಪೂರೈಸಿದ ದಿನ. ಅಂದೇ ಕಾಂಗ್ರೆಸ್‍ನಲ್ಲಿ ಎರಡು ಮಹತ್ವ ರಾಜಕೀಯ ಬೆಳವಣಿಗೆಗಳು ನಡೆದು ಅಧಿಕಾರ ಹಂಚಿಕೆ ಸೂತ್ರದ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ಒಂದನೆಯದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹೋದರ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಮಾಧ್ಯಮಗಳ ಮುಂದೆ ಬಂದು `ಮುಖ್ಯಮಂತ್ರಿಗಳು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ’, ` ಈ ಹಿಂದೆ ಹಿರಿಯ ಕಾಂಗ್ರೆಸ್ಸಿಗರಾದ ನಿಜಲಿಂಗಪ್ಪ, ಡಿ.ದೇವರಾಜ ಅರಸ್, ಎಸ್.ಎಂ.ಕೃಷ್ಣ ಅಂತಹ ನಾಯಕರು ಹೈಕಮಾಂಡ್ ಸೂಚನೆಯಂತೆ ನಡೆದುಕೊಂಡಿದ್ದಾರೆ’ ಎಂದು ಹೇಳುವ ಮೂಲಕ ಅಧಿಕಾರ ಹಂಚಿಕೆ ಮಾತುಕತೆಗಳು ನಡೆದಿದೆ ಎಂದು ಮಾರ್ಮಿಕವಾಗಿ ನುಡಿದ್ದಾರೆ. ಎರಡನೆಯದಾಗಿ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬೆಂಬಲಿಗ ಶಾಸಕರ ಬಣ ನವ ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಹಕ್ಕೊತ್ತಾಯ ಮಂಡಿಸಿದ್ದಾರೆ.
ಈನಡುವೆ, ಮೈಸೂರು ಮತ್ತು ಚಾಮರಾಜನಗರದಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು `ನಾನೂ ಗಟ್ಟಿಯಾಗಿದ್ದೇನೆ, ಅಧಿಕಾರವೂ ಗಟ್ಟಿಯಾಗಿರುತ್ತದೆ, ಸರಕಾರವೂ ಗಟ್ಟಿಯಾಗಿರುತ್ತದೆ, ಜನವರಿಯಲ್ಲಿ ನಾನೇ ಇನ್ನೂ ಎರಡು ವರ್ಷ ಬಜೆಟ್ ಮಂಡಿಸುತ್ತೇನೆ. ಎಲ್ಲಿಯವರೆಗೆ ಜನಾದೇಶವಿರುತ್ತದೆ ಅಲ್ಲಿಯವರೆಗೆ ಅಧಿಕಾರದಲ್ಲಿ ಮುಂದುವರೆಯುತ್ತೇನೆ’ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಕಾಂಗ್ರೆಸ್‍ನಲ್ಲಿರುವ ಹಿರಿಯರಾದ ಡಾ. ಜಿ. ಪರಮಶ್ವರ್, ಡಾ. ಹೆಚ್.ಸಿ.ಮಹಾದೇವಪ್ಪ, ಹೆಚ್.ಕೆ. ಪಾಟೀಲ್, ರಮೇಶ್ ಕುಮಾರ್, ಬಿ.ಕೆ. ಹರಿಪ್ರಸಾದ್, ಸತೀಶ್ ಜಾರಿಕಿಹೊಳಿ, ಆರ್.ವಿ. ದೇಶಪಾಂಡೆ, ರಾಮಲಿಂಗ ರೆಡ್ಡಿ ಸೇರಿದಂತೆ ಯಾವವೊಬ್ಬ ನಾಯಕರೂ ಅಧಿಕಾರ ಹಂಚಿಕೆ ವಿಷಯದಲ್ಲಿ ತುಟಿ ಬಿಚ್ಚಿಲ್ಲ. ಅದಕ್ಕೆ ಕಾರಣವೂ ಇದೆ. ಈ ಯಾವ ನಾಯಕರ ಸಮಕ್ಷಮವೂ ಒಪ್ಪಂದದ ಯಾವುದೇ ಮಾತುಕತೆಗಳು ನಡೆದೇ ಇಲ್ಲ.
ಮೊನ್ನೆ ಮೊನ್ನೆಯಷ್ಟೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರತ್ಯೇಕವಾಗಿ ದೆಹಲಿ ಪ್ರವಾಸ ಕೈಗೊಂಡು ಪಕ್ಷದ ವರಿಷ್ಠರ ಜೊತೆ ಮಾತುಕತೆ ನಡೆಸಿ ಬಂದಿದ್ದಾರೆ. ಇನ್ನೇನು ಸಚಿವ ಸಂಪುಟ ವಿಸ್ತರಣೆ ಹೈಕಮಾಂಡ್ ಹಸಿರು ನಿಶಾನೆ ತೋರಿಸಿದೆ ಎಂದು ಹೇಳಲಾಗಿತ್ತಾದರೂ ಪ್ರಸ್ತುತ ರಾಜಕೀಯ ಪ್ರತಿಕೂಲ ಪರಿಣಾಮಗಳನ್ನು ಮುಂದಿಟ್ಟುಕೊಂಡು ಸದ್ಯಕ್ಕೆ ಯಾವುದೇ ಸಾಹಸಕ್ಕೆ ಕೈಹಾಕದಂತೆ ಮುಖ್ಯಮಂತ್ರಿಗಳಿಗೆ ವರಿಷ್ಟರು ಸೂಚನೆ ನೀಡಿದ್ದಾರೆ. ಇದರ ಮಧ್ಯೆ ಅಧಿಕಾರ ಹಂಚಿಕೆಯ ಸೂತ್ರದ ಮಾತುಗಳು ಪದೇ ಪದೇ ಕೇಳಿಬರುತ್ತಿರುವುದು ಸ್ಥಿರವಾದ ಸರಕಾರವನ್ನು ಅಸ್ಥಿರತೆಗೊಳಿಸುವಂತೆ ಮಾಡುತ್ತಿದೆ.
ಒಂದು ಸರಕಾರದಲ್ಲಿ ಅಥವಾ ನಾಯಕತ್ವದಲ್ಲಿ ಅನಿಶ್ಚಿತತೆ ಸೃಷ್ಟಿಯಾದರೆ ಆಡಳಿತದ ಮೇಲಾಗುವ ಪರಿಣಾಮ, ಜನರ ಆತ್ಮಸ್ಥೈರ್ಯ, ಅಧಿಕಾರಶಾಹಿಯ ವರ್ತನೆಗಳು, ರಾಜ್ಯದ ಆರ್ಥಿಕ ಸ್ಥಿತಿಗತಿ, ಬಂಡವಾಳ ಹೂಡಿಕೆದಾರರ ಮನೋಬಲ, ಕಾನೂನು ಸುವ್ಯವಸ್ಥೆ, ಅಭಿವೃದ್ಧಿ ಕಾರ್ಯ… ಹೀಗೆ ಒಂದಕ್ಕೊಂದು ಸೇರಿ ಸರಕಾರಕ್ಕೆ ಕಳಂಕ ಅಂಟಿಕೊಳ್ಳುವುದಂತ್ತೂ ನಿಜ. ಇನ್ನು ರಾಜಕೀಯವಾಗಿ ಹೇಳುವುದಾದರೆ, ಈ ಬೆಳವಣಿಗೆಯಿಂದ ಕಾಂಗ್ರೆಸ್ ಒಳಗೆ ಅನೇಕ ಹಿರಿಯ ನಾಯಕರಿಗೆ ಧರ್ಮಸಂಕಟ ಎದುರಾಗಿದೆ, ಯುವ ಶಾಸಕರುಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ. ಯಾರ ಬಳಿ ಏನು ಮಾತನಾಡಬೇಕು ಎಂದು ತಿಳಿಯದೆ ಪೇಚಿಗೆ ಸಿಲುಕಿದ್ದಾರೆ. ಇದರಿಂದ ಪಕ್ಷದೊಳಗೆ ಬಿಗುವಿನ ವಾತಾರವಣ ನಿರ್ಮಾಣಗೊಂಡಿದೆ. ಈನಡುವೆ, ಕಾಂಗ್ರೆಸ್ ಸರಕಾರ ಅಸ್ಥಿತ್ವಕ್ಕೆ ಬಂದ ಮೊದಲ ದಿನದಿಂದಲೇ ಅಸಹನೆಯ ತುತ್ತೂರಿ ಊದುತ್ತಾ ಪಿತೂರಿಗೆ ಇಳಿದಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಈ ಎಲ್ಲ ಬೆಳವಣಿಗೆಗಳಿಂದ ಮೃಷ್ಠಾನ ಭೋಜನ ಸಿಕ್ಕಂತ್ತಾಗಿದೆ.
ಆದ್ದರಿಂಧ ಈ ಸಂದರ್ಭಕ್ಕೆ ಎಲ್ಲರಲ್ಲೂ ಕಾಡುತ್ತಿರುವ ಪ್ರಶ್ನೆ ಒಂದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಡುವೆ ಅಧಿಕಾರ ಹಂಚಿಕೆಯ ಸೂತ್ರ ರಚನೆಯಾಗಿದೆಯೇ ? ಅಥವಾ ಇಲ್ಲವೇ ? ಇದನ್ನು ಜನತೆಯ ಮುಂದೆ ಸ್ಪಷ್ಟ ಪಡಿಸಬೇಕಾದವರು ಮೂರೇ ಮಂದಿ. ಮೊದಲನೆಯವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎರಡನೆಯವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಮೂರನೆಯವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್. ಏಕೆಂದರೆ, ರಾಜ್ಯದಲ್ಲಿ ಉಲ್ಬಣಿಸಿರುವ `ಅಧಿಕಾರ ಹಂಚಿಕೆ’ ಎಂಬ ಅಗೋಚರ ವಿಚಾರವನ್ನು ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಬೇಕಿದೆ. ಈ ಕ್ಷಣಕ್ಕೆ ನಾಯಕರು ಮೌನ ವಹಿಸಿದಷ್ಟೂ, ಸಮಯ ಮುಂದೂಡಿದಷ್ಟೂ, ಚರ್ಚೆಗಳಿಗೆ ಅವಕಾಶ ಕೊಟ್ಟಷ್ಟೂ, ಅಪಸ್ವರಗಳಿಗೆ ನೀರೆದಷ್ಟೂ ಸರಕಾರ ಮತ್ತು ಪಕ್ಷದ ಮೇಲೆ ಬಹುದೊಡ್ಡ ಪ್ರತಿಕೂಲ ಪರಿಣಾಮ ಬೀರಲಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಬೆಲೆಯನ್ನೇ ತೆರಬೇಕಾಗಬಹುದು.

Call Now Button