Online News in ಕನ್ನಡ

ಬಿಜೆಪಿಯಿಂದ ನ್ಯಾಯಾಂಗ ವ್ಯವಸ್ಥೆ ರಾಜಕೀಯಕರಣ : ಕಾಂಗ್ರೆಸ್ ನಾಯಕ ಹರಿಪ್ರಸಾದ್ ಆರೋಪ

ಬೆಂಗಳೂರು- ನ್ಯಾಯಾಂಗ ವ್ಯವಸ್ಥೆಯನ್ನು ರಾಜಕೀಯಗೊಳಿಸುತ್ತಿರುವ ಬಿಜೆಪಿ ಅವರ ಹುನ್ನಾರ ಭವಿಷ್ಯದಲ್ಲಿ ಅತ್ಯಂತ ಅಪಾಕಾರಿಯೆಂದು ಕಾಂಗ್ರೆಸ್ಸಿನ ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಆಕ್ಷೇಪಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಸೇನೆ, ಗಡಿ, ಯುದ್ದಗಳ ಬಗ್ಗೆ ಭಾವನಾತಕವಾಗಿ ಬಾಯಿ ಚಪಲಕ್ಕೆ ಮಾತಾಡುವುದನ್ನು ಬಿಡುವಂತೆ ಬಿಜೆಪಿ ನಾಯಕರಿಗೆ ಸಲಹೆ ನೀಡಿದ್ದಾರೆ.
ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಭಾರತ ಮಾತೆಯ ಹೆಮಯ ಮಗಳು, ಕರ್ನಲ್‌ ಸೋಫಿಯಾ ಖುರೇಷಿ ಅವರನ್ನು ಭಯೋತ್ಪಾದಕರ ಸಹೋದರಿ ಎಂದು ಅವಮಾನಿಸಿದ ಬಿಜೆಪಿಯ ಸಚಿವ ವಿಜಯ್‌ ಶಾ ಮಾತುಗಳನ್ನು ಖಂಡಿಸುವ ಧೈರ್ಯ ಆ ಪಕ್ಷದ ನಾಯಕರಿಗಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಕರ್ನಲ್‌ ಸೋಫಿಯಾ ಅವರನ್ನು ಅವಮಾನಿಸಿದ ಬಿಜೆಪಿ ಸಚಿವರಿಗೆ ಸುಪ್ರೀಂಕೋರ್ಟ್‌ ಕಪಾಳಮೋಕ್ಷ ಮಾಡಿದ್ದಷ್ಟೇ ಅಲ್ಲ, ಸಾರ್ವಜನಿಕ ಜೀವನದಲ್ಲಿ ಇರಲು ಯೋಗ್ಯರಲ್ಲ ಎಂದು ಛೀಮಾರಿ ಹಾಕಿದ್ದನ್ನ ಮರೆಯುವಂತಿಲ್ಲ. ಇಷ್ಟಾದರೂ ಸಚಿವಸ್ಥಾನದಲ್ಲಿ ಮುಂದುವರೆಯಲು ಅವಕಾಶ ಮಾಡಿಕೊಟ್ಟಿರುವ ಬಿಜೆಪಿಯ ನಿಲುವೇನು? ಸೇನಾಧಿಕಾರಿಯನ್ನು ಅವಮಾನಿಸಿದ ಸಚಿವನ ಬೆನ್ನಿಗೆ ನಿಂತು ಯಾವ ಸಂದೇಶ ರವಾನಿಸಲಾಗುತ್ತಿದೆ ಎಂದು ಪ್ರಶ್ನಿಸಲಾಗಿದೆ.
ಈ ಕ್ಷಣದವರೆಗೂ ನಿಮ ಪಕ್ಷದ ಸ್ವಯಂ ಘೋಷಿತ ರಾಷ್ಟ್ರಭಕ್ತರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ಶಾ ತುಟಿ ಬಿಚ್ಚಿಲ್ಲ ಏಕೆ ಎಂದು ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಪಕ್ಷದ ನಾಯಕರಷ್ಟು ಭಾರತೀಯ ಸೇನೆಯನ್ನು ಅವಮಾನಿಸಿರುವುದು, ಅನುಮಾನಪಟ್ಟಷ್ಟು ಇತಿಹಾಸದಲ್ಲಿ ಯಾರೂ ಇಲ್ಲ ಎಂಬ ಸತ್ಯ ಮರೆಯುವಂತಿಲ್ಲ. ರಾಹುಲ್‌ಗಾಂಧಿ ಸೇನೆಯನ್ನು ಅವಮಾನಿಸಿಲ್ಲ. ಚೀನಾದ ಸೇನೆಯ ಎದುರು ಮಂಡಿಯೂರಿರುವ ಮೋದಿ ಸರ್ಕಾರದ ಹೇಡಿತನವನ್ನು ಬಯಲುಗೊಳಿಸಿದ್ದಾರೆ ಎಂದು ಹರಿಪ್ರಸಾದ್‌ ಹೇಳಿದ್ದಾರೆ.
ರಾಹುಲ್‌ ಗಾಂಧಿಯವರ ಪ್ರಶ್ನೆಗಳಿಗೆ ಉತ್ತರಿಸುವ ಎದೆಗಾರಿಕೆ 56 ಇಂಚಿನ ಪ್ರಧಾನಿಗಂತೂ ಇಲ್ಲ, ಕನಿಷ್ಟ ಪಕ್ಷ ಬಿಜೆಪಿಯ ಅತಿರಥ ಮಹಾರಥ ನಾಯಕರು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸುವ ಸಾಹಸವನ್ನಾದರೂ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.
ಚೀನಾ ಅತಿಕ್ರಮಣದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಬಿಜೆಪಿ ಮಾಜಿ ಸಂಸದ, ಹಿರಿಯ ನಾಯಕ ಸುಬ್ರಮಣಿಯನ್‌ ಸ್ವಾಮಿ ಮಾಹಿತಿ ಹಕ್ಕಿನಡಿಯಲ್ಲಿ ಕೇಳಿರುವ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದು ಯಾಕೆ? ಭಾರತ ಭೂ ಪ್ರದೇಶವನ್ನು ಚೀನಿಗರು 4ಸಾವಿರ ಚದರ ಕಿಮೀ ಆಕ್ರಮಿಸಿಕೊಂಡಾಗ ಮೋದಿ, ಚೀನಾ ಸೇನೆ ನಮ ಪ್ರದೇಶದೊಳಗೆ ಬಂದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಪ್ರಧಾನಿ ವಿರುದ್ಧ ವ್ಯಂಗ್ಯವಾಡಿದ ಸುಬ್ರಮಣಿಯನ್‌ ಸ್ವಾಮಿಯ ಹೇಳಿಕೆಗೆ ಉತ್ತರ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಭಾರತದ ಹಳ್ಳಿಗಳ ಹೆಸರನ್ನೇ ಚೀನಾ ಸರ್ಕಾರ ಬದಲಾಯಿಸಿದಲ್ಲದೇ, ಹೊಸ ಹಳ್ಳಿಗಳನ್ನು ನಿರ್ಮಾಸಿರುವ ಬಗ್ಗೆ ಅರುಣಾಚಲ ಪ್ರದೇಶದ ಸಂಸದ ತಪಿರ್‌ ಗಾವೋ ಸ್ಪಷ್ಟವಾಗಿ ಹೇಳಿಕೆ ನೀಡಿದ್ದರು. ಈ ಬಗ್ಗೆ ದೇಶದ ಜನರಿಗೆ ಸತ್ಯ ಹೇಳುವ ಧೈರ್ಯ ಇದೆಯೇ? 38 ಸಾವಿರ ಚದರ ಕಿಲೋಮೀಟರ್‌ ಭೂಪ್ರದೇಶ ಆಕ್ರಮಿಸಿಕೊಂಡಿರುವುದನ್ನು ಸದನದಲ್ಲೇ ಕೇಂದ್ರದ ವಿದೇಶಾಂಗ ರಾಜ್ಯ ಸಚಿವರಾಗಿದ್ದ ಮುರುಳಿಧರನ್‌ ಒಪ್ಪಿಕೊಂಡಿರುವುದು ಸುಳ್ಳೇ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ನರೆಂದ್ರ ಮೋದಿ ಚೀನಾವನ್ನು ಕೆಂಪು ಕಣ್ಣಿನಿಂದ ನೋಡುವುದು ದೂರದ ಮಾತು, ನಮ ಗಡಿ, ಭೂಮಿಯನ್ನು ಉಳಿಸಲು ಸಹಜವಾಗಿ ಕಣ್ಣಲ್ಲಿ ಕಣ್ಣಿಟ್ಟು ಉತ್ತರ ನೀಡುವ ಧೈರ್ಯವನ್ನಾದರೂ ಮಾಡಲಿ. ಸರ್ಕಾರದ ವೈಫಲ್ಯವನ್ನು ಪ್ರಶ್ನಿಸುವ ರಾಹುಲ್‌ ಗಾಂಧಿಯವರಿಗೆ ಉತ್ತರಿಸದೆ, ರಾಜಕೀಯ ನಾಯಕರಂತೆ ಹೇಳಿಕ ನೀಡುವ ನ್ಯಾಯಾಧೀಶರ ನಿರ್ದೇಶನಗಳ ಹಿಂದೆ ಅವಿತುಕೊಳ್ಳುವುದು ಬಿಡಿ ಎಂದು ಹೇಳಿದ್ದಾರೆ.
ದೇಶದ ಜನರು ಇಡೀ ನ್ಯಾಯಾಂಗ ವ್ಯವಸ್ಥೆ ಕುಸಿದಿರುವ ಅಧಃಪತನದ ಬಗ್ಗೆ ಹಾದಿ ಬೀದಿಯಲ್ಲಿ ಮಾತಾಡುವಂತಾಗಿದೆ. ನ್ಯಾಯಂಗ, ಕಾರ್ಯಾಂಗ, ಶಾಸಕಾಂಗ ಸಂವಿಧಾನದಡಿಯಲ್ಲಿ ಕಾರ್ಯನಿರ್ವಹಿಸಬೇಕೆ ಹೊರತು ಗುಪ್ತ ಸಂಘ ಸೂಚಿಗಳಂತೆ ಅಲ್ಲ. ಇಡೀ ನ್ಯಾಯಂಗ ವ್ಯವಸ್ಥೆ ಹಾದಿ ತಪ್ಪಿರುವುದಕ್ಕೆ ಬಿಜೆಪಿ ವಕ್ತಾರೆಯನ್ನೆ ಬಾಂಬೆ ಹೈಕೋರ್ಟ್‌ನ ನ್ಯಾಯಧೀಶೆಯನ್ನಾಗಿ ಮಾಡಲು ಶಿಪಾರಸ್ಸು ಮಾಡಿರುವ ಹಿಡನ್‌ ಅಜೆಂಡಾಗಳು ದೇಶ ಎದುರು ಬಯಲಾಗುತ್ತಿವೆ ಎಂದಿದ್ದಾರೆ.
ರಾಹುಲ್‌ ಗಾಂಧಿಯವರನ್ನು ನೀವು ಭಾರತೀಯರಾ? ಎಂದು ಪ್ರಶ್ನಿಸಿರುವ ನ್ಯಾಯಧೀಶರ ಹಿನ್ನಲೆ ಹಾಗೂ ಅವರ ಅಕ್ಕಪಕ್ಕದಲ್ಲಿರುವ ನಾಯಕರುಗಳ ಫೋಟೋಗಳು ಜಗಜ್ಜಾಹೀರಾಗಿದೆ. ನ್ಯಾಯಂಗವನ್ನೇ ರಾಜಕೀಯಗೊಳಿಸಿರುವ ಬಿಜೆಪಿ ಭವಿಷ್ಯದ ಆಪತ್ತು ಎಂದು ಹೇಳಿದ್ದಾರೆ.

Call Now Button