Online News in ಕನ್ನಡ

ಶ್ರೀಗುರು ಭೈರವೈಕ್ಯ ಮಂದಿರ ಲೋಕಾರ್ಪಣೆಗೊಳಿಸಿದ ಪ್ರಧಾನಿ ನರೇಂದ್ರ ಮೋದಿ

ಮಂಡ್ಯ: ಆದಿಚುಂಚನಗಿರಿ ಕ್ಷೇತ್ರದ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ ಗದ್ದುಗೆ ಮೇಲೆ ಸುಮಾರು 80 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವಾರ ಲೋಕಾರ್ಪಣೆಗೊಳಿಸಿದರು.ನಂತರ ವೇದಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಆದಿಚುಂಚನಗಿರಿ ಮಠ ಹಾಗೂ ಬಾಲಗಂಗಾಧರ ಸ್ವಾಮೀಜಿ ಅವರು ಶಿಕ್ಷಣ, ಆರೋಗ್ಯ, ಆಧ್ಯಾತ್ಮ, ಪರಿಸರ ಸೇರಿದಂತೆ ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.


ಶ್ರೀ ಮಠವು ಅನ್ನ, ಅಕ್ಷರ, ಆರೋಗ್ಯ, ಆಧ್ಯಾತ್ಮ, ಆಶ್ರಯ, ಅರಣ್ಯ, ಆಕಳು, ಅನುಕಂಪ ಹಾಗೂ ಅನುಬಂಧ, ಈ ಒಂಬತ್ತು ಸಿದ್ಧಾಂತಗಳನ್ನು ಇಟ್ಟುಕೊಂಡು ಸಮಾಜ ಸೇವೆ ಮಾಡುತ್ತಿದೆ. ಬಾಲಗಂಗಾಧರ ಸ್ವಾಮೀಜಿಗಳು ಕರುಣೆಯ ಮೂರ್ತಿ ಆಗಿದ್ದರು. ಸಾಮಾಜಿಕ ಆಂದೋಲನವನ್ನು ಮಾಡಿದರು. ಮುಖ್ಯವಾಗಿ ಬಡವರು, ಗ್ರಾಮೀಣ ಜನರಿಗೆ ಶಿಕ್ಷಣ, ಆರೋಗ್ಯ ಸೇವೆಯನ್ನು ಕೊಟ್ಟರು. ಪ್ರಸ್ತುತ ನಿರ್ಮಲಾನಂದನಾಥ ಸ್ವಾಮೀಜಿಯವರು ತಮ್ಮ ಗುರುಪರಂಪರೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ಎಂದು ಮೋದಿ ಶ್ಲಾಘಿಸಿದರು.
ಶ್ರೀ ಮಠ ಪರಿಸರ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಿದೆ. ಲಕ್ಷಾಂತರ ಗಿಡ ಮರಗಳನ್ನು ನೆಟ್ಟು ಪೋಷಿಸಿದೆ. ನಮ್ಮ ಹೆಮ್ಮೆಯ ರಾಷ್ಟ್ರ ಪಕ್ಷಿ ನವಿಲು. ಈ ನವಿಲಿನ ಸಂರಕ್ಷಣೆಗಾಗಿ ಮಠದಲ್ಲಿ “ಮಯೂರವನ’ ನಿರ್ಮಿಸಿ ಕಾಪಾಡುತ್ತಿರುವುದು ಹೆಮ್ಮೆಯ ವಿಚಾರ ಎಂದು ಅವರು ಹೇಳಿದರು.
ವಿಕಸಿತ ಭಾರತಕ್ಕೆ 9 ಸಂಕಲ್ಪಕ್ಕೆ ಕರೆ ಕರೆ:
ಅಭಿವೃದ್ಧಿ ಹೊಂದಿದ ಕರ್ನಾಟಕ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ಸಾಕಾರಗೊಳಿಸಲು ಜಲ ಸಂರಕ್ಷಣೆ, ನೈಸರ್ಗಿಕ ಕೃಷಿ, ಫಿಟ್ನೆಸ್ ಮತ್ತು ಸೇವೆಯವರೆಗೆ ಒಂಬತ್ತು ಸಾಮೂಹಿಕ ಪ್ರತಿಜ್ಞೆಗಳನ್ನು ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಜನರಿಗೆ ಮನವಿ ಮಾಡಿದರು.
ಪ್ರಕೃತಿಯ ಸಮತೋಲನಕ್ಕಾಗಿ ಪ್ರತಿಯೊಬ್ಬರೂ ತಮ್ಮ ತಾಯಿಯ ಹೆಸರಿನಲ್ಲಿ ಸಸಿ ನೆಟ್ಟು ಬೆಳೆಸಬೇಕು. ದೇಶಿಯವಾಗಿ ಸ್ವಾವಲಂಬಿಗಳಾಗಬೇಕು (ಆತ್ಮನಿರ್ಭರ). ರೈತ ಸಂಕುಲ ನೈಸರ್ಗಿಕ ಕೃಷಿ ಮೂಲಕ ರಾಸಾಯನಿಕ ಮುಕ್ತ ಕೃಷಿ ನಡೆಸಬೇಕು. ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕು ಹಾಗೂ ಪ್ರತಿಯೊಬ್ಬರೂ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಎಣ್ಣೆ ಪದಾರ್ಥಗಳ ಸೇವನೆ ಕಡಿಮೆ ಮಾಡಿ ಪ್ರತಿಯೊಬ್ಬರೂ ಆರೋಗ್ಯದ ಕಡೆ ಕಾಳಜಿ ವಹಿಸಬೇಕು.ಸಿರಿಧಾನ್ಯಗಳನ್ನು ಬಳಕೆ ಮಾಡುವ ಮೂಲಕ ದೇಶೀಯ ಉತ್ಪನ್ನಗಳನ್ನು ಹೆಚ್ಚು ಖರೀದಿಸಿ ಸ್ವದೇಶಿ ಆಹಾರದ ಕಡೆ ಗಮನ ಕೊಡಬೇಕೆಂದು ಪ್ರಧಾನಿ ನರೇಂದ್ರಮೋದಿ ಅವರು ದೇಶದ ಜನತೆಗೆ ಕರೆ ಕೊಟ್ಟರು
ಕರ್ನಾಟಕ ಮತ್ತು ಮಂಡ್ಯ ಜಿಲ್ಲೆಯ ಬಗ್ಗೆ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಪ್ರಶಂಸೆ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯವು ತತ್ವ ಜ್ಞಾನ ಮತ್ತು ತಂತ್ರಜ್ಞಾನದಲ್ಲಿ ದೇಶಕ್ಕೆ ಮಾದರಿಯಾಗಿದೆ. ಕಾವೇರಿ ಮಾತೆಯಿಂದ ಮಂಡ್ಯ ಜಿಲ್ಲೆ ಸಮೃದ್ಧವಾಗಿದೆ. ಇಂತಹ ನಾಡು, ಜಿಲ್ಲೆಗೆ ಆಗಮಿಸಿರುವದು ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ಐತಿಹಾಸಿಕ ಅನುಭವವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ಸುಮಾರು 1800 ವರ್ಷಗಳ ಇತಿಹಾಸ ಹೊಂದಿರುವ ಚುಂಚನಗಿರಿ ಮಠದ 71ನೇ ಪೀಠಾಧಿಪತಿಗಳಾಗಿದ್ದ ಬಾಲಗಂಗಾಧರನಾಥ ಶ್ರೀಗಳ ಗುರು ಭೈರವೈಕ್ಯ ಮಂದಿರವನ್ನು ಉದ್ಘಾಟಿಸಲು ಪ್ರಧಾನಿ ಮೋದಿ ಆಗಮಿಸಿರುವುದು ವಿಶೇಷ ಕ್ಷಣವಾಗಿದೆ ಎಂದರು.
ಮಣ್ಣಿನ ಮಗ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಮತ್ತಷ್ಟು ಗೌರವ ತಂದಿದೆ ಎಂದು ಹೇಳಿದರು. ಚುಂಚನಗಿರಿ ಮಠ ಆಧ್ಯಾತ್ಮಿಕ ಶಕ್ತಿಯ ಕೇಂದ್ರವಾಗಿದ್ದು, ಕೋಟ್ಯಂತರ ಭಕ್ತರ ಕನಸು ಇಂದು ನನಸಾಗಿದೆ ಎಂದು ಅಭಿಪ್ರಾಯಪಟ್ಟರು.
2022ರಲ್ಲಿ ಬೆಂಗಳೂರಿನಲ್ಲಿ ಕೆಂಪೇಗೌಡ ಅವರ ಪ್ರತಿಮೆ ಉದ್ಘಾಟನೆಗೆ ಮೋದಿ ಆಗಮಿಸಿದ್ದನ್ನು ಸ್ಮರಿಸಿದ ನಿರ್ಮಲಾನಂದನಾಥ ಶ್ರೀಗಳು, “ಕೆಂಪೇಗೌಡರ ಆಲೋಚನೆಗಳನ್ನು ಸರ್ಕಾರಗಳು ಅಳವಡಿಸಿ ಕೊಳ್ಳಬೇಕು ಎಂದು ಮೋದಿ ಆಗ ಹೇಳಿದ್ದರು. ಈಗ ದೇಶದ ಅಭಿವೃದ್ಧಿಗೆ ಅವರು ಸಮರ್ಪಿತರಾಗಿ ಶ್ರಮಿಸುತ್ತಿ ದ್ದಾರೆ ಎಂದು ಹೇಳಿದರು.
ಸ್ಟಾರ್ಟಪ್ ಕ್ಷೇತ್ರದಲ್ಲಿ ದೇಶ ಸಾಧಿಸಿರುವ ಪ್ರಗತಿಯನ್ನು ಉಲ್ಲೇಖಿಸಿದ ಅವರು, “ಒಮ್ಮೆ ಕೇವಲ 400 ಸ್ಟಾರ್ಟಪ್ಗಳು ಇದ್ದ ದೇಶದಲ್ಲಿ ಈಗ 2 ಲಕ್ಷಕ್ಕೂ ಹೆಚ್ಚು ಸ್ಟಾರ್ಟಪ್ಗಳು ಬೆಳೆಯುತ್ತಿರುವುದು ಮೋದಿ ನೇತೃತ್ವದ ಅಭಿವೃದ್ಧಿಯ ಸಂಕೇತ,ಎಂದರು.
ಬಾಲಗಂಗಾಧರನಾಥ ಶ್ರೀಗಳ ತ್ರಿವಿಧ ದಾಸೋಹ, ಶಿಕ್ಷಣ ಮತ್ತು ಸಮಾಜ ಸೇವೆಯ ಪರಂಪರೆ ಇಂದಿಗೂ ಜೀವಂತ ವಾಗಿದ್ದು, ಹಳ್ಳಿಯ ಮಕ್ಕಳಿಗೆ ಶಿಕ್ಷಣ ನೀಡಿದ ಶ್ರೀಗಳ ಚಿಂತನೆಗಳು ಜನರಲ್ಲಿ ಶಾಶ್ವತವಾಗಿ ಉಳಿದಿವೆ ಎಂದು ಅವರು ಹೇಳಿದರು.
ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರೊಂದಿಗೆ ‘ಸೌಂದರ್ಯ ಲಹರಿ ಮತ್ತು ಶಿವ ಮಹಿಮಾ ಸ್ತೋತ್ರಂ’ ಎಂಬ ಪುಸ್ತಕವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದರು.
‘ಮಂದಿರ’ ಉದ್ಘಾಟನೆಗೂ ಮುನ್ನ, ಪ್ರಧಾನ ಮಂತ್ರಿ ಅವರು ಜ್ವಾಲಾ ಪೀಠಕ್ಕೆ ಭೇಟಿ ನೀಡಿದರು. (ದಂತಕಥೆಯ ಪ್ರಕಾರ, ಶಿವನು ತಪಸ್ಸು ಮಾಡಲು ಇಲ್ಲಿ ನೆಲೆಸಿದ್ದನು) ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನಕ್ಕೂ ಪ್ರಧಾನಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್,ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ,ಸೇರಿದಂತೆ ಹಲವರು ಉಪಸ್ಥಿತರಿದ್ದರು.

Call Now Button